CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ: ಕಾಂಗ್ರೆಸ್ ಹಿಂದೂ ಭಾವನೆಗಳಿಗೆ ನೋವುಂಟು ಮಾಡುತ್ತಿದೆ; BJP ತೀವ್ರ ಕಿಡಿ
ಜನಿವಾರವನ್ನು ಸಾಮಾನ್ಯವಾಗಿ ಕುಟುಂಬದಲ್ಲಿ ಮರಣ ಸಂಭವಿಸಿದಾಗ ಮಾತ್ರ ತೆಗೆದುಹಾಕುವ ಸಂಪ್ರದಾಯವಿದ್ದು, ಪರೀಕ್ಷೆಯಂತಹ ಮಹತ್ವದ ಸಂದರ್ಭದಲ್ಲಿ ಇಂತಹ ಒತ್ತಡ ಹೇರುವುದು ವಿದ್ಯಾರ್ಥಿಯ ಮಾನಸಿಕ ಸ್ಥಿತಿಗೆ ಧಕ್ಕೆ ತರುತ್ತದೆ.

ಬೆಂಗಳೂರು: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ‘ಜನಿವಾರ’ (ಪವಿತ್ರ ದಾರ) ತೆಗೆಸಿದ ಆರೋಪ ಕೇಳಿ ಬಂದಿದ್ದು. ಈ ಬೆಳವಣಿಗೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಸಂಬಂಧಿಸಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಯನ್ನು ಜನಿವಾರ ತೆಗೆಸಲು ಒತ್ತಾಯಿಸಲಾಗಿದೆ ಎಂದು ಆರೋಪಿಸಿದರು.
ಜನಿವಾರವನ್ನು ಸಾಮಾನ್ಯವಾಗಿ ಕುಟುಂಬದಲ್ಲಿ ಮರಣ ಸಂಭವಿಸಿದಾಗ ಮಾತ್ರ ತೆಗೆದುಹಾಕುವ ಸಂಪ್ರದಾಯವಿದ್ದು, ಪರೀಕ್ಷೆಯಂತಹ ಮಹತ್ವದ ಸಂದರ್ಭದಲ್ಲಿ ಇಂತಹ ಒತ್ತಡ ಹೇರುವುದು ವಿದ್ಯಾರ್ಥಿಯ ಮಾನಸಿಕ ಸ್ಥಿತಿಗೆ ಧಕ್ಕೆ ತರುತ್ತದೆ ಎಂದು ಹೇಳಿದರು.
ಈ ಘಟನೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ತಪ್ಪಿತಸ್ಥ ಅಧಿಕಾರಿಗಳನ್ನು ತಡವಾಗಿ ಬಂಧಿಸಲಾಗಿದೆ. ವಿದ್ಯಾರ್ಥಿಗಳನ್ನು ಹಿಂಸಿಸಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ ಅವರು, ಈ ರೀತಿಯ ಘಟನೆಗಳು ಸರ್ಕಾರದ ಬೆಂಬಲದಿಂದಲೇ ನಡೆಯುತ್ತಿವೆ ಎಂದು ಆರೋಪಿಸಿದರು. ಕಳೆದ ಮೂರು ವರ್ಷಗಳಿಂದ ಸಿದ್ದರಾಮಯ್ಯ ಸರ್ಕಾರ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಟೀಕಿಸಿದರು.
ಮುಂದಿನ ದಿನಗಳಲ್ಲಿ ಶಿವಧಾರ, ಒಕ್ಕಲಿಗ ಉಡುದಾರಕ್ಕೂ ನಿರ್ಬಂಧ ಹೇರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಇದಲ್ಲದೆ ಪರೀಕ್ಷಾ ಕೇಂದ್ರದಲ್ಲಿ ಹೆಣ್ಣುಮಕ್ಕಳ ಮೂಗುತಿಗೂ ಟೇಪ್ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರು ದೂರು ಸ್ವೀಕರಿಸುವಲ್ಲಿ ವಿಳಂಬ ಮಾಡಿದ್ದಾರೆ ಹಾಗೂ ಸರ್ಕಾರದಿಂದ ಬಂದ ಕರೆಗಳ ಕಾರಣದಿಂದ ದೂರು ದಾಖಲಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲೂ ಟ್ವೀಟ್ ಮಾಡಿರುವ ಅವರು, ಚಾಣಕ್ಯನ ಶಿಖೆಗೆ ಕೈಹಾಕಿದ ನಂದರ ಕಥೆಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಕಿಡಿಕಾರಿದ್ದಾರೆ.
ಮಾಂಗಲ್ಯ, ಜನಿವಾರ ತೆಗೆಸುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಕುಕೃತ್ಯಗಳು ಮುಂದುವರಿಯುತ್ತಲೇ ಇವೆ. ಕಳೆದ ವರ್ಷ ಸಿಇಟಿ, ನೀಟ್ ಪರೀಕ್ಷೆಗಳ ಸಂದರ್ಭದಲ್ಲಿ ಜನಿವಾರ ಕತ್ತರಿಸಿ, ಕೆಪಿಎಸ್ಸಿ ಪರೀಕ್ಷೆಯಲ್ಲಿ ಮಾಂಗಲ್ಯ ತೆಗೆಸಿ ಪರೀಕ್ಷೆ ಬರೆಯುವಂತೆ ಹೇಳಿದ್ದ ಕಾಂಗ್ರೆಸ್ ಸರ್ಕಾರ ಈ ವರ್ಷವೂ ತನ್ನ ಹಳೆ ಚಾಳಿ ಮುಂದುವರಿಸಿದೆ.
ಬೆಂಗಳೂರಿನ ಕೋರಮಂಗಲದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಜನಿವಾರ ತೆಗೆಸಿ ಪರೀಕ್ಷೆ ಬರೆಯುವಂತೆ ಒತ್ತಾಯಿಸುವ ಮೂಲಕ ಮತ್ತೊಮ್ಮೆ ಹಿಂದೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದೆ. ಕಾಂಗ್ರೆಸ್ ಆಡಳಿತದಲ್ಲಿ ಒಂದೆಡೆ ಹಿಂದೂಗಳಿಗೆ ರಕ್ಷಣೆಯಿಲ್ಲ, ಇನ್ನೊಂದೆಡೆ ಹೀಗೆ ಹಿಂದೂಗಳ ನಂಬಿಕೆ, ಆಚಾರಗಳ ಮೇಲೆ ದಾಳಿ ಮಾಡುವ ಕೆಟ್ಟ ರಾಜಕಾರಣ ಮಾಡುತ್ತಿದೆ.
ಈ ಹಿಂದೆ ಕೆ.ಪಿ.ಎಸ್.ಸಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ, ಮಹಿಳೆಯೊಬ್ಬರ ಮಾಂಗಲ್ಯಸರವನ್ನು ತೆಗೆಸಿದ್ದರು, ಈ ಬಗ್ಗೆ ಮಾಧ್ಯಮದವರು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರೆ, “ಏಯ್ ಅದು ರೂಲ್ಸು ಕಣ್ರಿ” ಎಂದು ಅಬ್ಬರಿಸಿದ್ದರು. ಆದರೆ ಅದೇ ಮಾಧ್ಯಮದವರು ಹಾಗಾದರೆ ರೂಲ್ಸ್ ಪ್ರಕಾರ ಹಿಜಾಬ್ ಅನ್ನು ಏಕೆ ತೆಗೆಸಲಿಲ್ಲ ಎಂದು ಮರು ಪ್ರಶ್ನೆ ಹಾಕಿದರೆ ಅದಕ್ಕೆ ಕಾಂಗ್ರೆಸ್ಸಿಗರದ್ದು “ನೋ ಕಾಮೆಂಟ್ಸ್..ನೋ ಕಾಮೆಂಟ್ಸ್”.
ಸಿಇಟಿ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ ಆಗಲಿ ಅಥವಾ ಇತರ ಯಾವುದೇ ಮಾರ್ಗಸೂಚಿಯಲ್ಲಿ ಜನಿವಾರ ಧರಿಸಬಾರದು ಎಂದು ಎಲ್ಲಿಯೂ ಸಹ ಉಲ್ಲೇಖವಾಗಿರಲಿಲ್ಲ. ಹಾಗಿದ್ದ ಮೇಲೆ ಜನಿವಾರ ತೆಗೆಯುವಂತೆ ಬಲವಂತ ಮಾಡುವುದು ಯಾಕೆ? ಈ ಅನ್ಯಾಯಕ್ಕೆ, ದೌರ್ಜನ್ಯಕ್ಕೆ ಯಾರು ಹೊಣೆ? ಸಂವಿಧಾನದ ಬಗ್ಗೆ ಮಾರುದ್ದ ಭಾಷಣ ಬಿಗಿಯುವ ಸಿಎಂ ಸಿದ್ದರಾಮಯ್ಯ ಜನಿವಾರ ಧರಿಸಿದ ವಿದ್ಯಾರ್ಥಿಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರುವುದು ಕಣ್ಣಿಗೆ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿರುವ ಕಾಂಗ್ರೆಸ್ ಅಲಿಯಾಸ್ ಆಧುನಿಕ ಮುಸ್ಲಿಂ ಲೀಗ್ ಸರ್ಕಾರ ಷರಿಯಾ ಕಾನೂನನ್ನು ಅನಧಿಕೃತವಾಗಿ ಜಾರಿಗೆ ತಂದಿದೆ. ಹಿಂದೂ ಆಚಾರ-ವಿಚಾರಗಳನ್ನು ಕಾಂಗ್ರೆಸ್ ದ್ವೇಷಿಸುತ್ತಿದೆ. ಒಂದೆಡೆ ರಂಜಾನ್ ತಿಂಗಳಲ್ಲಿ ಉರ್ದು ಮಾಧ್ಯಮ ಶಾಲೆಗಳ ಶಾಲಾ ಸಮಯವನ್ನು ಬದಲಾವಣೆ ಮಾಡುವ ಸರ್ಕಾರ ಮತ್ತೊಂದೆಡೆ ಪರೀಕ್ಷೆಯ ತಪಾಸಣೆ ನೆಪದಲ್ಲಿ ಮಾಂಗಲ್ಯ ತೆಗೆಯಲು, ಜನಿವಾರ ತುಂಡರಿಸಲು ಅವಕಾಶ ನೀಡುತ್ತಿದೆ. ನ್ಯಾಯಾಲಯ ಸಮಾನ ವಸ್ತ್ರಸಂಹಿತೆಗೆ ಆದೇಶ ನೀಡಿದರೂ ಸಹ ಸಿದ್ದರಾಮಯ್ಯ ಸಾಹೇಬರು ಸೇರಿದಂತೆ ಕಾಂಗ್ರೆಸ್ ನಾಯಕರು ಹಿಜಾಬ್ ಹಕ್ಕುಗಳ ಬಗ್ಗೆ ಮಾತನಾಡಿದರು, ಬೀದಿಗಿಳಿದರು. ಆದರೆ ಇಂದು ಜನಿವಾರ ತುಂಡರಿಸಿದಾಗ ಅವರೆಲ್ಲರೂ ಮೌನಕ್ಕೆ ಶರಣಾಗಿದ್ದಾರೆ.
ಜಾತಿಗಣತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ವಿಭಜಿಸುವುದು, ಹಿಂದೂ ಸಂಪ್ರದಾಯವನ್ನು ಮೂಢನಂಬಿಕೆ ಹೆಸರಿನಲ್ಲಿ ಅವಹೇಳನ ಮಾಡುವುದು, ಹಿಂದೂ ಆಚರಣೆ-ಸಂಪ್ರದಾಯಕ್ಕೆ ನಿರ್ಬಂಧ ಹೇರುವುದು, ಹಿಂದೂ ಧರ್ಮದ ಅವಹೇಳನ ಮಾಡುವವರಿಗೆ ಪ್ರಶಸ್ತಿ ನೀಡಿ ಗೌರವಿಸುವುದನ್ನು ಕಾಂಗ್ರೆಸ್ ನಿರಂತರವಾಗಿ ನಡೆಸುತ್ತಾ ಬಂದಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಸಂಘಟಿತ ಹಿಂದೂ ಸಮಾಜ ಉತ್ತರ ನೀಡಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




