ಪ್ರಧಾನಿ ಮೋದಿ ಒಬ್ಬ Terrorist: ಇದು ಕೇವಲ ವ್ಯಕ್ತಿಗಲ್ಲ, ದೇಶದ ಪ್ರಧಾನಿಗೆ ಮಾಡಿರುವ ಅವಮಾನ: ಖರ್ಗೆ ವಿರುದ್ಧ ಬಿಜೆಪಿ ತೀವ್ರ ಕಿಡಿ
ತಿರಸ್ಕಾರದ ಹತಾಶೆಯಿಂದ ಅದನ್ನೇ ಮುಂದುವರೆಸಿ, ಶತಕೋಟಿ ಭಾರತೀಯರಿಂದ ಮೂರನೇ ಬಾರಿಗೆ ಪ್ರಧಾನಿ ಆಗಿ ಆಯ್ಕೆಯಾಗಿರುವ ಪ್ರಧಾನಿ ಮೋದಿ ಅವರನ್ನ "ಟೆರರಿಸ್ಟ್" ಎಂದು ಕರೆಯುವ ಮೂಲಕ ತನ್ನ ಸಮಾಧಿ ತಾನೇ ತೋಡಿಕೊಳ್ಳುತ್ತಿದೆ.

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಒಬ್ಬ ಉಗ್ರ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದು, ಈ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿದೆ.
ಹೇಳಿಕೆ ಸಂಬಂಧ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕರು ತೀವ್ರವಾಗಿ ಕಿಡಿಕಾರಿದ್ದಾರೆ. “ಪ್ರಧಾನಿ ಮೋದಿ ಒಬ್ಬ ಟೆರರಿಸ್ಟ್” ಎಂಬ ಹೇಳಿಕೆ ಕೇವಲ ವ್ಯಕ್ತಿಗಲ್ಲ, ದೇಶದ ಪ್ರಧಾನಿಯ ಹುದ್ದೆಯ ಗೌರವಕ್ಕೂ ಧಕ್ಕೆ ತಂದಿದೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ“ಪ್ರಜಾಪ್ರಭುತ್ವದಲ್ಲಿ ಇಂತಹ ಪದಪ್ರಯೋಗಗಳು ಅಸಹ್ಯಕರ. ಜನರಿಂದ ಮೂರನೇ ಬಾರಿ ಆಯ್ಕೆಯಾದ ಪ್ರಧಾನಿಯನ್ನು ಈ ರೀತಿಯಾಗಿ ಅವಮಾನಿಸುವುದು ಕಾಂಗ್ರೆಸ್ ಪಕ್ಷದ ಹತಾಶೆಯ ಪ್ರತೀಕವಾಗಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷವು ನಿರಂತರ ಚುನಾವಣಾ ಸೋಲುಗಳಿಂದ ನಿರಾಶೆಯಾಗಿದ್ದು, ಅದರ ಪರಿಣಾಮವಾಗಿ ಇಂತಹ ಹೇಳಿಕೆಗಳಿಗೆ ಇಳಿದಿದೆ ಎಂದು ಆರೋಪಿಸಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಖರ್ಗೆ ವಿರುದ್ಧ ಕಿಡಿಕಾರಿದ್ದು, “ಇದು ಕೇವಲ ವ್ಯಕ್ತಿಗೆ ಮಾಡಿದ ಅವಮಾನವಲ್ಲ, ದೇಶದ ಪ್ರಧಾನಿಯ ಹುದ್ದೆಯನ್ನೇ ಅವಮಾನಿಸುವ ಮಾತು” ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರು ಪದೇ ಪದೇ ವೈಯಕ್ತಿಕ ಟೀಕೆಗಳಿಗೆ ಇಳಿಯುತ್ತಿರುವುದನ್ನು ಟೀಕಿಸಿದ್ದಾರೆ.
ಸೋಲಿನ ಹತಾಶೆ ಕಾಂಗ್ರೆಸ್ ಪಕ್ಷವನ್ನ ಯಾವ ಕೀಳು ಮಟ್ಟಕ್ಕೆ ಇಳಿಸಿದೆ ಅಂದರೆ ಮೌತ್ ಕಾ ಸೌದಾಗರ್, ನೀಚ್ ಚಾಯ್ ವಾಲಾ ರಾವಣ ಚೌಕಿದಾರ್ ಚೋರ್ ಹೇ ವಿಷಸರ್ಪ. ಕಾಂಗ್ರೆಸ್ ಪಕ್ಷದ ನಾಯಕರು ಹೀಗೆಲ್ಲ ಬಾಯಿಗೆ ಬಂದಂತೆ ಪ್ರಧಾನಿ ಮೋದಿ ಅವರನ್ನ ನಿಂದನೆ ಮಾಡಿದಾಗಲೆಲ್ಲಾ, ಪ್ರಧಾನಿ ಮೋದಿ ವಿರುದ್ಧ ತಮ್ಮ ನಾಲಿಗೆ ಹರಿಬಿಟ್ಟಾಗಲೆಲ್ಲಾ ದೇಶದ ಜನ ಅವರಿಗೆ ಛೀಮಾರಿ ಹಾಕಿ, ಪಾಠ ಕಲಿಸಿದ್ದಾರೆ.
ಆದರೆ ಇನ್ನೂ ಬುದ್ಧಿ ಕಲಿಯದ ಕಾಂಗ್ರೆಸ್ ಪಕ್ಷ ಸೋಲು, ತಿರಸ್ಕಾರದ ಹತಾಶೆಯಿಂದ ಅದನ್ನೇ ಮುಂದುವರೆಸಿ, ಶತಕೋಟಿ ಭಾರತೀಯರಿಂದ ಮೂರನೇ ಬಾರಿಗೆ ಪ್ರಧಾನಿ ಆಗಿ ಆಯ್ಕೆಯಾಗಿರುವ ಪ್ರಧಾನಿ ಮೋದಿ ಅವರನ್ನ "ಟೆರರಿಸ್ಟ್" ಎಂದು ಕರೆಯುವ ಮೂಲಕ ತನ್ನ ಸಮಾಧಿ ತಾನೇ ತೋಡಿಕೊಳ್ಳುತ್ತಿದೆ.
ದೇಶದ ಪ್ರಧಾನಿಯನ್ನು "ಟೆರರಿಸ್ಟ್" ಎಂದು ಕರೆಯುವುದು ಕೇವಲ ಒಬ್ಬ ವ್ಯಕ್ತಿಯ ನಿಂದನೆ ಅದು ಇಡೀ ದೇಶದ, ದೇಶವಾಸಿಗಳ, ಪ್ರಜಾಪ್ರಭುತ್ವದ, ಸಂವಿಧಾನದ ನಿಂದನೆ. ಭಾರತದ ಪ್ರಜ್ಞಾವಂತ ನಾಗರಿಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಇದೆಲ್ಲದಕ್ಕೂ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಬೆಲೆ ತೆತ್ತಲೇಬೇಕು ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಮಾತನಾಡಿ, ರಾಜಕೀಯ ನೆಲ ಕಳೆದುಕೊಳ್ಳುತ್ತಿರುವ ಭಯದಿಂದ ಕಾಂಗ್ರೆಸ್ ನಾಯಕತ್ವ ಇಂತಹ ಅಸಭ್ಯ ಹೇಳಿಕೆಗಳನ್ನು ನೀಡುತ್ತಿದೆ” ಎಂದು ಹೇಳಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



