ತಂದೆಯ ಲೆಗಸಿ ಮುಂದುವರೆಸಲು ರಾಜಕೀಯಕ್ಕೆ ಬಂದೆ: ಕುಟುಂಬ ರಾಜಕಾರಣಕ್ಕೆ ಯತೀಂದ್ರ ಸಿದ್ದರಾಮಯ್ಯ ಹೊಸ ವ್ಯಾಖ್ಯಾನ!
ನಮ್ಮದು ಕುಮಾರಸ್ವಾಮಿಯವರ ಕುಟುಂಬದ ರೀತಿಯ ರಾಜಕಾರಣ ಅಲ್ಲ. ನಮ್ಮ ಅಣ್ಣ ಇರದ ಕಾರಣ ನಾನು ರಾಜಕೀಯಕ್ಕೆ ಬಂದಿದ್ದೇನೆ ಅಷ್ಟೇ ಎನ್ನುವ ಮೂಲಕ ಕುಟುಂಬ ರಾಜಕಾರಣಕ್ಕೆ ಹೊಸ ವ್ಯಾಖ್ಯಾನ ಕೊಟ್ಟಿದ್ದಾರೆ.

ಮೈಸೂರು: ನಮ್ಮದು ಕುಟುಂಬ ರಾಜಕಾರಣ ಅಲ್ಲ. ನಮ್ಮ ತಂದೆಯ ಲೆಗಸಿ ಮುಂದುವರೆಸಲು ಮಾತ್ರ ನಾನು ರಾಜಕಾರಣಕ್ಕೆ ಬಂದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಬುಧವಾರ ಕುಟುಂಬ ರಾಜಕಾರಣಕ್ಕೆ ಹೊಸ ವ್ಯಾಖ್ಯಾನ ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕುಟುಂಬ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ ಅವರು, ನಮ್ಮದು ಕುಮಾರಸ್ವಾಮಿಯವರ ಕುಟುಂಬದ ರೀತಿಯ ರಾಜಕಾರಣ ಅಲ್ಲ ಎಂದರು.
ನಾನು ಎಂಎಲ್ಸಿ ಆಗಿರುವುದು ಕುಟುಂಬ ರಾಜಕಾರಣಕ್ಕಾಗಿ ಅಲ್ಲ. ನಮ್ಮ ತಂದೆಯ ರಾಜಕೀಯ ಜೀವನ ಮುಂದುವರಿಕೆಯ ಭಾಗವಾಗಿ ನಾನು ಎಂಎಲ್ಸಿ ಆಗಿದ್ದೇನೆ. ನಮ್ಮ ಕ್ಷೇತ್ರದ ಜನರ ರಕ್ಷಣೆಗೆ ನಮ್ಮ ತಂದೆಯ ಅಭಿಮಾನಿಗಳ ರಕ್ಷಣೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಇದು ಕುಟುಂಬ ರಾಜಕಾರಣ ಅಲ್ಲ ಎಂದರು.
ನಮ್ಮ ತಂದೆ ಏನು ನನ್ನನ್ನು ನಮ್ಮ ಪಕ್ಷದ ಅಧ್ಯಕ್ಷ ಮಾಡಿದ್ದಾರಾ? ಮಕ್ಕಳನ್ನೇ ಪಕ್ಷದ ಅಧ್ಯಕ್ಷ ಮಾಡುವುದು, ಮಕ್ಕಳನ್ನೇ ಶಾಸಕ, ಸಂಸದ ಮಾಡುವುದು ಕುಟುಂಬ ರಾಜಕಾರಣ. ನಮ್ಮದು ಕುಟುಂಬ ರಾಜಕಾರಣ ಅಲ್ಲ. ನಮ್ಮ ಅಣ್ಣ ಇರದ ಕಾರಣ ನಾನು ರಾಜಕೀಯಕ್ಕೆ ಬಂದಿದ್ದೇನೆ ಅಷ್ಟೇ ಎನ್ನುವ ಮೂಲಕ ಕುಟುಂಬ ರಾಜಕಾರಣಕ್ಕೆ ಹೊಸ ವ್ಯಾಖ್ಯಾನ ಕೊಟ್ಟಿದ್ದಾರೆ.
ನಮ್ಮ ತಂದೆಯೇ 5 ವರ್ಷ ಸಿಎಂ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ
ನಮ್ಮ ತಂದೆಯೇ 5 ವರ್ಷ ಸಿಎಂ. ಖುದ್ದು ಮುಖ್ಯಮಂತ್ರಿಗಳೇ ಅಧಿವೇಶನದಲ್ಲಿ ಈ ವಿಚಾರವನ್ನ ಸ್ಪಷ್ಟಪಡಿಸಿದ್ದಾರೆ. ನಾನು ಎರಡೂವರೆ ವರ್ಷದಿಂದ ಇದನ್ನೇ ಹೇಳುತ್ತಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ನಮ್ಮ ತಂದೆಯ ಮಾತೇ ನನ್ನ ಮಾತು ಕೂಡ. ಸಚಿವ ಸಂಪುಟ ಪುನಾರಚನೆಗಾಗಿ ಶಾಸಕರು ದೆಹಲಿಗೆ ಹೋಗಿದ್ದಾರೆ. ಶಾಸಕರು ದೆಹಲಿಗೆ ಹೋಗಿರುವುದಕ್ಕೂ ಸಿಎಂ ಸ್ಥಾನಕ್ಕೂ ಸಂಬಂಧವೇ ಇಲ್ಲ. ಉಪಚುನಾವಣೆ ಫಲಿತಾಂಶಕ್ಕೂ ಸಿಎಂ ಸ್ಥಾನಕ್ಕೂ ಸಂಬಂಧ ಇಲ್ಲ. ಸರ್ಕಾರವೂ ಭದ್ರವಾಗಿದೆ, ಸಿಎಂ ಸ್ಥಾನವೂ ಭದ್ರವಾಗಿದೆ.
ಸಂಪುಟ ಪುನಾರಚನೆ ಮಾಡಬೇಕಿದೆ. ಯಾವಾಗ ಎಂಬುದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಮ್ಮ ತಂದೆ ಸಿಎಂ ಆಗಿರುವವರೆಗೂ ನಾನು ಸಚಿವ ಸ್ಥಾನ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



