ರಾಜಕೀಯ

ನನ್ನ 60 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥ ಕೆಟ್ಟ ಸರ್ಕಾರ ನೋಡಿಲ್ಲ; ರಾಜಕೀಯ ಸ್ವಾರ್ಥಕ್ಕೆ ಸಾಮಾಜಿಕ ನ್ಯಾಯದ ಜಪ: ಎಚ್.ಡಿ ದೇವೇಗೌಡ

ಸಾಮಾಜಿಕ ನ್ಯಾಯದ ಪರ ನಾನು ಇದ್ದೇನೆಯೇ ಇಲ್ಲವೇ ಎಂಬುದನ್ನು ಹಾಲಿ ಸಿಎಂ ಅವರು ಆತ್ಮವಿಮರ್ಶೆ ಮಾಡಿಕೊಳ್ಳಲಿ. ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಅವರು ಸಾಮಾಜಿಕ ನ್ಯಾಯವನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿದರು.

ನನ್ನ 60 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥ ಕೆಟ್ಟ ಸರ್ಕಾರ ನೋಡಿಲ್ಲ; ರಾಜಕೀಯ ಸ್ವಾರ್ಥಕ್ಕೆ ಸಾಮಾಜಿಕ ನ್ಯಾಯದ ಜಪ: ಎಚ್.ಡಿ ದೇವೇಗೌಡ
ಜೆಡಿಎಸ್ ಕಾರ್ಯಕ್ರಮದಲ್ಲಿ ಎಚ್.ಡಿ ದೇವೇಗೌಡ ಜೊತೆಗೆ ಕುಮಾರಸ್ವಾಮಿ ಮತ್ತು ನಿಖಿಲ್
Published On :

ಬೆಂಗಳೂರು: ನನ್ನ 60 ವರ್ಷಗಳ ರಾಜಕೀಯ ಜೀವನದಲ್ಲಿ ಕರ್ನಾಟಕದಲ್ಲಿ ಈಗ ಇರುವಷ್ಟು ಕೆಟ್ಟ ಸರ್ಕಾರವನ್ನು ನಾನೆಂದೂ ನೋಡಿಲ್ಲ. ಆದರೂ ಮುಂದೆಯೂ ತಾವೇ ಅಧಿಕಾರಕ್ಕೆ ಬರುತ್ತೇವೆಂದು ಮೆರೆಯುತ್ತಿದ್ದಾರೆ. ಈ ಸರ್ಕಾರದಿಂದ ಜನ ರೋಸಿ ಹೋಗಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಲು ಜನರು ಕಾಯುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಗುಡುಗಿದರು.

ಕೊಮ್ಮಘಟ್ಟದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಜನತಾ ಸಮಾವೇಶ ಹಾಗೂ ಬೆಳ್ಳಿ ಹಬ್ಬದ ಸಂಭ್ರಮ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಅನಿವಾರ್ಯವಾಗಿ ಜಿಬಿಎ ಚುನಾವಣೆ ಮಾಡುತ್ತಿದೆ. ಚುನಾವಣೆಗೆ ನಾವು ತಯಾರಿದ್ದೇವೆ.

ಐದು ವಿಭಾಗಗಳನ್ನು ರಚಿಸಿ ಐವರು ಉಸ್ತುವಾರಿಗಳನ್ನು ಜೆಡಿಎಸ್ ಪಕ್ಷದಿಂದ ನೇಮಿಸಲಾಗಿದೆ. ಚುನಾವಣೆಗೆ ಹೆದರುವ ಜಾಯಮಾನ ನಮ್ಮ ಪಕ್ಷದ್ದಲ್ಲ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು.ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪರ ಇಲ್ಲ. ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಜಪ ಮಾಡುತ್ತಿದ್ದಾರೆ.

ಸಾಮಾಜಿಕ ನ್ಯಾಯದ ಪರ ನಾನು ಇದ್ದೇನೆಯೇ ಇಲ್ಲವೇ ಎಂಬುದನ್ನು ಹಾಲಿ ಸಿಎಂ ಅವರು ಆತ್ಮವಿಮರ್ಶೆ ಮಾಡಿಕೊಳ್ಳಲಿ. ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಅವರು ಸಾಮಾಜಿಕ ನ್ಯಾಯವನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿದರು.

ಮಹಿಳಾ ಮೀಸಲಾತಿ ಕೊಟ್ಟಿದ್ದು ನಾವು. ನಾನು ಪ್ರಧಾನಿ ಆಗಿದ್ದಾಗಲೇ ಮಹಿಳಾ ಮೀಸಲು ಮಸೂದೆ ಮಂಡಿಸಿದ್ದೆ. ರಾಜ್ಯಸಭೆಯಲ್ಲಿ ಅಂಗೀಕಾರವಾಗಿತ್ತು. ಲೋಕಸಭೆಯಲ್ಲಿ ಆಗಿರಲಿಲ್ಲ. ಈಗ 30 ವರ್ಷಗಳ ನಂತರ ಪ್ರಧಾನಿ ಮೋದಿ ಅವರು ಮಸೂದೆ ಮೇಲಿನ ಚರ್ಚೆಗಾಗಿ 3 ದಿನಗಳ ಅಧಿವೇಶನ ಕರೆದಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಲೋಕಸಭಾ ಕ್ಷೇತ್ರಗಳು ರಚನೆಯಾಗಲಿದ್ದು, ರಾಜಕೀಯ ಚಿತ್ರಣವೂ ಬದಲಾಗಲಿದೆ.

2005 ರಲ್ಲಿ ಬೆಂಗಳೂರಿನಲ್ಲಿ ಜೆಡಿಎಸ್ ಆಯೋಜಿಸಿದ್ದ 'ದರಿದ್ರ ನಾರಾಯಣ' ರ್ಯಾಲಿಯನ್ನು ಉಲ್ಲೇಖಿಸಿದ ದೇವೇಗೌಡರು, ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸಲು ಆಯೋಜಿಸಲಾದ ನಿರ್ಣಾಯಕ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಗೈರಾಗಿದ್ದರು , ಅಂತಹ ಕ್ರಮಗಳು ಸಾಮಾಜಿಕ ನ್ಯಾಯದ ಬಗ್ಗೆ ಅವರ ಬದ್ಧತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.