ಕಾಂಗ್ರೆಸ್ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!
ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಎಂ ಪಟ್ಟಣ್ ನೇತೃತ್ವದಲ್ಲಿ ಸುಮಾರು 25–30 ಮಂದಿ ಹಿರಿಯ ಕಾಂಗ್ರೆಸ್ ಶಾಸಕರು ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿದ್ದು, ಪಕ್ಷದ ಹೈಕಮಾಂಡ್ನ್ನು ಭೇಟಿ ಮಾಡಿ, ಸಚಿವ ಸ್ಥಾನಗಳಿಗಾಗಿ ಒತ್ತಡ ಹೇರುವ ನಿರೀಕ್ಷೆಯಿದೆ.

ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಸಚಿವ ಸಂಪುಟ ಪುನರ್ರಚನೆಗೆ ಸಂಬಂಧಿಸಿದ ಚಟುವಟಿಕೆಗಳು ಜೋರಾಗಿದ್ದು, ಹಿರಿಯ ಶಾಸಕರು ದೆಹಲಿಯತ್ತ ಮುಖ ಮಾಡಿದ್ದಾರೆ.
ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಎಂ ಪಟ್ಟಣ್ ನೇತೃತ್ವದಲ್ಲಿ ಸುಮಾರು 25–30 ಮಂದಿ ಹಿರಿಯ ಕಾಂಗ್ರೆಸ್ ಶಾಸಕರು ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿದ್ದು, ಪಕ್ಷದ ಹೈಕಮಾಂಡ್ನ್ನು ಭೇಟಿ ಮಾಡಿ, ಸಚಿವ ಸ್ಥಾನಗಳಿಗಾಗಿ ಒತ್ತಡ ಹೇರುವ ನಿರೀಕ್ಷೆಯಿದೆ.
ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದೆ.ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪಚುನಾವಣೆಗಳು ಮುಗಿದಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ. ಇದರನಡುುಲ್ಲೇ ನಾಯಕರು ದೆಹಲಿಗೆ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಸರ್ಕಾರಕ್ಕೆ ಮೂರು ವರ್ಷಗಳು ಪೂರ್ಣಗೊಂಡಿರುವುದರಿಂದ, ಸಚಿವ ಸಂಪುಟದಲ್ಲಿ ಬದಲಾವಣೆ ಅನಿವಾರ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆ, ಹಲವು ಬಾರಿ ಗೆದ್ದ ಅನುಭವಿ ಶಾಸಕರು ತಮಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದಾರಾಮಯ್ಯ ಮುಂದಿನ ಎರಡು ವರ್ಷಗಳ ಕಾಲ ಹುದ್ದೆಯಲ್ಲಿ ಮುಂದುವರಿಯುವ ವಿಷಯವೂ ಈ ಭೇಟಿಯ ವೇಳೆ ಚರ್ಚೆಗೆ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಬೆಂಬಲಿಗರೆಂದು ಗುರುತಿಸಿಕೊಂಡಿರುವ ಶಾಸಕರು ಅವರ ಮುಂದುವರಿಕೆಗೆ ಹೈಕಮಾಂಡ್ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ಸಿಎಂ ಕೂಡ ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡಿ, ಪಕ್ಷದ ನಾಯಕತ್ವದೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಒಪ್ಪಿಗೆ ಪಡೆಯಲು ಸಿಎಂ ಆಸಕ್ತಿ ತೋರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೊಂದೆಡೆ, ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಬೆಂಬಲಿಗರೂ ಕೂಡ ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಸಿಎಂ ಸ್ಥಾನ ಬದಲಾವಣೆ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆ ತರಲಿದ್ದಾರೆಂಬ ಚರ್ಚೆಗಳು ಆರಂಭವಾಗಿವೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೂ ಕೂಡ ಸಿಎಂ ಹುದ್ದೆಗೆ ತಮ್ಮ ಆಸಕ್ತಿ ವ್ಯಕ್ತಪಡಿಸಿರುವ ಹಿನ್ನೆಲೆ, ಕಾಂಗ್ರೆಸ್ ಒಳರಾಜಕೀಯ ಮತ್ತಷ್ಟು ಚುರುಕುಗೊಂಡಿದೆ. ಆದರೆ, ಸಾರ್ವಜನಿಕವಾಗಿ ಅವರು ಸಿದ್ದರಾಮಯ್ಯ ಮುಂದುವರಿಯುತ್ತಾರೆ ಎಂಬ ನಿಲುವನ್ನೇ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತರೆಂದು ಕರೆಯಲ್ಪಡುವ ಪಟ್ಟಣ್ ಅವರೂ ಇದೇ ಮಾತನ್ನೇ ಪುನರುಚ್ಚರಿಸುತ್ತಿದ್ದಾರೆ. ಮೂರು ಬಾರಿಗಿಂತ ಹೆಚ್ಚು ಬಾರಿ ಗೆದ್ದ ಶಾಸಕರ ಗುಂಪಿನ ಸಭೆ ನಡೆಸಿದ ನಂತರ, ಮುಖ್ಯಮಂತ್ರಿಗಳ ಒಪ್ಪಿಗೆಯೊಂದಿಗೆ, ಪಟ್ಟಣ್ ಅವರು ದೆಹಲಿಗೆ ನಿಯೋಗವನ್ನು ಕರೆದುಕೊಂಡು ಹೋಗಿದ್ದಾರೆಂದು ಹೇಳಲಾಗುತ್ತಿದೆ.
“ಸರ್ಕಾರಕ್ಕೆ ಮೂರು ವರ್ಷಗಳಾಗಿರುವುದರಿಂದ ಈಗಿನ ಸಚಿವರಿಗೆ ವಿಶ್ರಾಂತಿ ನೀಡಿ ಹೊಸವರಿಗೆ ಅವಕಾಶ ನೀಡಬೇಕು” ಎಂಬ ಅಭಿಪ್ರಾಯವನ್ನು ಹೈಕಮಾಂಡ್ ಮುಂದೆ ಮಂಡಿಸಲು ಮುಂದಾಗಿದ್ದಾರೆ.
2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶವೂ ಇದರ ಹಿಂದೆ ಇದೆ ಎನ್ನಲಾಗುತ್ತಿದೆ.
ದೆಹಲಿ ತಲುಪಿದ ಶಾಸಕರು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಹಾಗೂ ರಂದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ ಇರುವುದರಿಂದ, ಅವರು ದೆಹಲಿಗೆ ಮರಳಿದ ನಂತರ ಪ್ರಮುಖ ಸಭೆ ನಡೆಯುವ ನಿರೀಕ್ಷೆ ಇದೆ.
ಈ ನಡುವೆ, ಕೆಲ ಶಾಸಕರು ವೈಯಕ್ತಿಕ ಕಾರಣಗಳಿಂದ ಈ ದೆಹಲಿ ಭೇಟಿಯಿಂದ ಹಿಂದೆ ಸರಿದಿದ್ದಾರೆ. ಆದರೂ, ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ಶಾಸಕರು ಭಾಗಿಯಾಗಿರುವುದು, ಸಚಿವ ಸಂಪುಟ ಪುನರ್ರಚನೆ ಈ ಬಾರಿ ಗಂಭೀರವಾಗಿ ಚರ್ಚೆಯಾಗುವ ಸೂಚನೆ ನೀಡುತ್ತಿದೆ.
ಟಿಬಿ ಜಯಚಂದ್ರ, ಎಆರ್ ಕೃಷ್ಣ ಮೂರ್ತಿ, ಬೇಲೂರು ಗೋಪಾಲಕೃಷ್ಣ, ಶಾಂತನ ಗೌಡರ್, ಕೆ ಷಡಕ್ಷರಿ, ಪುಟ್ಟರಂಗ ಶೆಟ್ಟಿ, ರಾಘವೇಂದ್ರ ಹಿಟ್ನಾಳ್, ಎಸ್ಎನ್ ನಾರಾಯಣಸ್ವಾಮಿ ಸೇರಿದಂತೆ ಇತರರು ದೆಹಲಿಗೆ ಭೇಟಿ ನೀಡಿದ್ದರೆ, ಮಳವಳ್ಳಿ ಶಾಸಕ ಪಿಎಂ ನರೇಂದ್ರಸ್ವಾಮಿ ತಮ್ಮ ಮಗಳ ಮದುವೆಯಲ್ಲಿ ನಿರತರಾಗಿದ್ದಾರೆಂದು ಹೇಳಿ ಹಿಂದೆ ಸರಿದ್ದಾರೆ. ಇದೇ ವೇಳೆ ಡಿಕೆ.ಶಿವಕುಮಾರ್ ನಿಷ್ಠಾವಂತ ಮಾಗಡಿ ಶಾಸಕ ಎಚ್ಸಿ ಬಾಲಕೃಷ್ಣ ಕೂಡ ಹಿಂದೆ ಸರಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




