ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ, ಅವತ್ತು ಬಕೆಟ್ ಇಟ್ಟಿದ್ದರೆ ತುಂಬೋಗೋದು: ಸಿದ್ದರಾಮಯ್ಯಗೆ ಕುಟುಕಿದ ಕುಮಾರಸ್ವಾಮಿ
ಹಣ ವಸೂಲಿಗಾಗಿ ಸಿದ್ದರಾಮಯ್ಯ ತಮ್ಮ ಮಗನನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು, ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ, ಅವತ್ತು ಬಕೆಟ್ ಇಟ್ಟಿದ್ದರೇ ತುಂಬೋಗೋದು ಎಂದು ಕುಟುಕಿದ್ದಾರೆ.
ಇಂದು ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರು, ಚಾಮುಂಡಿ ತಾಯಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಜೆಡಿಎಸ್ನಲ್ಲಿದ್ದಾಗ 58 ಸೀಟು ಗೆದ್ದಿದ್ದೆವು ಅಂತಾರೆ. 1999ರಲ್ಲೂ ಅವರು ಅಧ್ಯಕ್ಷರಾಗಿದ್ದರು. ಆಗ ಎಷ್ಟು ಸೀಟು ಗೆದ್ದಿದ್ದರು? ಮಹದೇವಪ್ಪ, ಸಿದ್ದರಾಮಯ್ಯ ಇಬ್ಬರೂ ಮನೆಗೆ ಬಂದು ಕಣ್ಣೀರಿಟ್ಟಿದ್ದರು. ಅವರು ಕಣ್ಣೀರು ಹಾಕುವಾಗ ಅಲ್ಲಿ ಬಕೆಟ್ ಇದ್ದಿದ್ದರೆ ತುಂಬಿಹೋಗುತ್ತಿತ್ತು. ಸಿದ್ದರಾಮಯ್ಯನವರು ಒಮ್ಮೆ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ರಾಜಕೀಯವೇ ಸಾಕು ಎಂದು ಕಣ್ಣೀರಿಟ್ಟದ ಸಿದ್ದರಾಮಯ್ಯ ಅವರಿಗೆ ನಮ್ಮ ತಂದೆ, ದೇವೇಗೌಡರು ಸಮಾಧಾನಪಡಿಸಿದ್ದರು ಎಂದು ಹಿಂದಿನ ಘಟನೆಯನ್ನು ಕುಮಾರಸ್ವಾಮಿ ಹಂಚಿಕೊಂಡರು.
ಹಿಂದೆ ಚುನಾವಣೆಯಲ್ಲಿ ದೇವೇಗೌಡರು, ನಾನು, ರೇವಣ್ಣ, ಮಹದೇವಪ್ಪ, ಸಿದ್ದರಾಮಯ್ಯ ಸೇರಿ ಬಹುತೇಕರು ಸೋತಿದ್ದೆವು. ಆಗ ನನಗೆ ರಾಜಕೀಯ ಬೇಡ ಅಂತ ಸಿದ್ದರಾಮಯ್ಯ ಕಣ್ಣೀರು ಹಾಕಿದ್ದರು. 2004ರಲ್ಲಿ ಮಂಡ್ಯ, ರಾಮನಗರದಲ್ಲಿ ಸಿದ್ದರಾಮಯ್ಯ ಪ್ರಚಾರಕ್ಕೆ ಬಂದಿಲ್ಲ. ನಾವು ಕೂಡ ಸಿದ್ದರಾಮಯ್ಯರನವರನ್ನು ಕರೆಯಲಿಲ್ಲ. ಸಿದ್ದರಾಮಯ್ಯ ಅಹಿಂದ ಅಂತ ಸಮುದಾಯಗಳ ಸಂಘಟನೆ ಮಾಡಿದ್ರು. ದೇವೇಗೌಡರಿಗೆ ಅನ್ಯಾಯ ಮಾಡಿದರು, ಬೆನ್ನಿಗೆ ಚೂರಿ ಹಾಕಿದರು. 2006ರಲ್ಲಿ ಕೇವಲ 200 ವೋಟ್ಗಳಲ್ಲಿ ಗೆದ್ದಾಗ ಹೇಗಿತ್ತು ನೆನಪಿಸಿಕೊಳ್ಳಿ? ಎಂದು ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾಕೆ ಸೋತರು? ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯನವರಿಗಿಲ್ಲ. ಸಿದ್ದರಾಮಯ್ಯ ಅಹಿಂದ ಚಾಂಪಿಯನ್ ಅಂತ ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಬಿಟ್ಟು ಬಂದು 5 ಸ್ಥಾನ ಗೆಲ್ಲಲಿ ಎಂದು ಸವಾಲು ಹಾಕಿದರು.
ಹಣ ವಸೂಲಿಗಾಗಿ ಮಗನ ನೇಮಕ
ಹಣ ವಸೂಲಿಗಾಗಿ ಸಿದ್ದರಾಮಯ್ಯ ತಮ್ಮ ಮಗನನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಮಗನ ವಸೂಲಿ ಹೇಗಿದೆ ಎಂಬುದು ಎಲ್ಲಾ ಅಧಿಕಾರಿಗಳಿಗೆ ಗೊತ್ತಿದೆ. ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ನೈತಿಕತೆಯ ಇಲ್ಲ. ನಾನು ನನ್ನ ಮಗನನ್ನು ವಸೂಲಿಗಾಗಿ ರಾಜಕೀಯಕ್ಕೆ ತಂದಿಲ್ಲ. ಜನರ ಅಪೇಕ್ಷೆಯಂತೆ ನಿಖಿಲ್ ರಾಜಕೀಯಕ್ಕೆ ಬಂದಿದ್ದಾನೆ ಎಂದು ಸಿಎಂಗೆ ಟಾಂಗ್ ಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




