'ಸದ್ಯದ ಪರಿಸ್ಥಿತಿ'ಯಲ್ಲಿ ಸಿದ್ದರಾಮಯ್ಯ CM ಆಗಿ ಮುಂದುವರಿಯುತ್ತಾರೆ; ಹಾಗಾದ್ರೆ ಡಿಕೆಶಿ ಕಥೆ ಏನು?
ಐದು ರಾಜ್ಯಗಳ ಚುನಾವಣೆ ಮತ್ತು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬ ರಾಜಕೀಯ ಲೆಕ್ಕಾಚಾರಗಳ ನಡುವೆ ಗೃಹ ಸಚಿವ ಪರಮೇಶ್ವರ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮೈಸೂರು: "ಸದ್ಯದ ಪರಿಸ್ಥಿತಿ"ಯಲ್ಲಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಅವಧಿಗೆ ಪೂರ್ಣ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಸೋಮವಾರ ಪ್ರತಿಪಾದಿಸಿದ್ದಾರೆ.
ಆದಾಗ್ಯೂ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಯಾವುದೇ ನಿರ್ಧಾರವು ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಪರಮೇಶ್ವರ ಹೇಳಿದ್ದಾರೆ.
ಐದು ರಾಜ್ಯಗಳ ಚುನಾವಣೆ ಮತ್ತು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬ ರಾಜಕೀಯ ಲೆಕ್ಕಾಚಾರಗಳ ನಡುವೆ ಗೃಹ ಸಚಿವ ಪರಮೇಶ್ವರ ಅವರು ಸ್ಫೋಟಕ ಹೇಳಿಕೆ ನೀಡಿದ್ದು, ಇನ್ನೆರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ಮುಂದಿನ ನಡೆ ಏನೂ ಎಂಬುದು ಕುತೂಹಲ ಮೂಡಿಸಿದೆ.
"ನಾಯಕತ್ವ ಬದಲಾವಣೆಯ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಬದಲಾವಣೆ ಇರುತ್ತದೆ ಎಂದು ಯಾರು ಹೇಳಿದ್ದಾರೆ? ಯಾರು ಬದಲಾಸುತ್ತಾರೆ? ಎಐಸಿಸಿ ಅದನ್ನು ಮಾಡಬೇಕು. ಅವರು ಏನನ್ನೂ ಹೇಳಿಲ್ಲದ ಕಾರಣ, ನಾವು ಊಹಿಸುತ್ತಲೇ ಇರಬೇಕೇ? ಅವರು ಬದಲಾವಣೆ ಮಾಡಲು ಬಯಸಿದಾಗ, ಹೈಕಮಾಂಡ್ ಕೂಡ ಹೇಳುತ್ತದೆ; ಆದರೆ ಇದುವರೆಗೂ ಏನನ್ನೂ ಹೇಳಿಲ್ಲ. ಹೀಗಾಗಿ ಯಾವುದೇ ಬದಲಾವಣೆ ಮಾಡದಿರಬಹುದು" ಎಂದು ಪರಮೇಶ್ವರ ಸುದ್ದಿಗಾರರಿಗೆ ತಿಳಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ ಎಂದು ಕೇಳಿದಾಗ, "ಖಂಡಿತ, ಅವರು ಮುಂದುವರಿಯುತ್ತಾರೆ. ಅವರು ಏಕೆ ಮುಂದುವರೆಯಬಾರದು? ಪ್ರಸ್ತುತ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ" ಎಂದರು.
ಇನ್ನೂ ಎರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. 2023ರಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಪಕ್ಷದ ಹೈಕಮಾಂಡ್ ಘೋಷಣೆ ಮಾಡಿತ್ತು. ಅದರ ಅವಧಿ 2028ರ ವರೆಗೆ ಇದೆ. ಹೈಕಮಾಂಡ್ ನೀವೇ 5 ವರ್ಷ ಸಿಎಂ ಎಂದು ಪ್ರತ್ಯೇಕವಾಗಿ ಸ್ಪಷ್ಟೀಕರಣ ಕೊಡುವ ಅವಶ್ಯಕತೆ ಇಲ್ಲ ಎಂದು ಜಿ.ಪರಮೇಶ್ವರ ತಿಳಿಸಿದ್ದಾರೆ.
ಹೈಕಮಾಂಡ್ ಯಾವತ್ತಾದರೂ ಸಿದ್ದರಾಮಯ್ಯ ಅವಧಿ ಇಷ್ಟು ಎಂದು ಹೇಳಿದ್ಯಾ? ಬದಲಾವಣೆ ಬಗ್ಗೆ ಮಾತನಾಡಿದ್ದಾರಾ? ಅದರ ಅರ್ಥ ಆ ರೀತಿಯ ಯಾವ ಬೆಳವಣಿಗೆಯೂ ಇಲ್ಲ. ಸಿಎಂ ಸ್ಥಾನ ಬದಲಾವಣೆ ಮಾಡಬೇಕಾಗಿರುವುದು ಹೈಕಮಾಂಡ್. ಅಲ್ಲಿಯವರೆಗೆ ಯಾರು ಏನೇ ಮಾತನಾಡಿದರೂ ಅದು ವೈಯಕ್ತಿಕ ಅಭಿಪ್ರಾಯ ಎಂದರು.
ಇನ್ನು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪ ಚುನಾವಣೆ ಫಲಿತಾಂಶ ಸಿಎಂ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ ಗೃಹ ಸಚಿವರು, "ಅವುಗಳನ್ನು ಏಕೆ ಲಿಂಕ್ ಮಾಡಬೇಕು? ಬದಲಾವಣೆ ಇರುತ್ತದೆ ಎಂದು ಯಾರಾದರೂ ಹೇಳಿದ್ದಾರೆಯೇ? ಬಿಜೆಪಿಯನ್ನು ಬಿಡಿ, ಅವರ ಹೇಳಿಕೆ ನಮಗೆ ಬೇಡ. ಬಿಜೆಪಿ ಹೇಳುವ ಆಧಾರದ ಮೇಲೆ ನಾವು ಆಡಳಿತ ನಡೆಸಬೇಕೇ?" "ನಮ್ಮ ಪಕ್ಷದಲ್ಲಿ ಬದಲಾವಣೆಯ ಬಗ್ಗೆ ಕೆಲವು ಚರ್ಚೆಗಳಿರಬಹುದು. ಆದರೆ ಉಪಚುನಾವಣೆಯ ನಂತರ ಬದಲಾವಣೆಗಳಾಗುತ್ತವೆ ಎಂದು ಹೇಳಲು ನಾನು ಸಿದ್ಧನಿಲ್ಲ. ಇತರರು ತಮ್ಮದೇ ಆದ ವೈಯಕ್ತಿಕ ಮೌಲ್ಯಮಾಪನಗಳನ್ನು ಮಾಡಬಹುದು" ಎಂದು ಅವರು ಹೇಳಿದರು.
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಉಪಚುನಾವಣೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




