ಡಿಲಿಮಿಟೇಶನ್ ಹೆಸರಿನಲ್ಲಿ ದಕ್ಷಿಣ ರಾಜ್ಯಗಳ ಧ್ವನಿ ಕುಗ್ಗಿಸುವ ಯತ್ನ: ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಡಿಲಿಮಿಟೇಶನ್ ನಲ್ಲಿ ಉತ್ತರ ಪ್ರದೇಶದ ಲೋಕಸಭಾ ಸೀಟುಗಳು 80ರಿಂದ 120ಕ್ಕೆ ಏರಿಕೆಯಾಗುವ ಸಾಧ್ಯತೆ ಇದ್ದು, ಮಹಾರಾಷ್ಟ್ರದಲ್ಲಿ 48ರಿಂದ 72, ಬಿಹಾರದಲ್ಲಿ 40ರಿಂದ 60, ಮಧ್ಯ ಪ್ರದೇಶದಲ್ಲಿ 29ರಿಂದ 43-44, ರಾಜಸ್ಥಾನದಲ್ಲಿ 25ರಿಂದ 37-38 ಮತ್ತು ಗುಜರಾತಿನಲ್ಲಿ 26ರಿಂದ 39ಕ್ಕೆ ಏರಿಕೆ ಕಾಣಬಹುದು.

ಬೆಂಗಳೂರು: ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಪ್ರಸ್ತಾವನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ವಾಗ್ಧಾಳಿ ನಡೆಸಿದ್ದು, ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ಸ್ಪಷ್ಟ ದಾಳಿ ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿಗಳು ಡಿಲಿಮಿಟೇಶನ್ ವಿಚಾರವು ಕೇವಲ ಸೀಟುಗಳ ಸಂಖ್ಯೆಯ ಹೆಚ್ಚಳದ ಬಗ್ಗೆ ಅಲ್ಲ, ಅವು ಹೇಗೆ ಹಂಚಿಕೆ ಆಗುತ್ತವೆ ಮತ್ತು ಯಾವ ರಾಜ್ಯಗಳಿಗೆ ಹೆಚ್ಚು ಲಾಭವಾಗುತ್ತದೆ ಎಂಬುದರ ಬಗ್ಗೆಯಾಗಿದೆ. ಪ್ರಸ್ತಾವಿತ ಪುನರ್ವಿಂಗಡಣೆಯ ಪ್ರಕಾರ ಎಲ್ಲಾ ರಾಜ್ಯಗಳಿಗೂ ಸೀಟುಗಳು ಹೆಚ್ಚಾದರೂ, ಅದರ ಪ್ರಮಾಣ ಬಿಜೆಪಿಗೆ ಬಲವಾದ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಆರೋಪಿಸಿದ್ದಾರೆ.
ಡಿಲಿಮಿಟೇಶನ್ ನಲ್ಲಿ ಉತ್ತರ ಪ್ರದೇಶದ ಲೋಕಸಭಾ ಸೀಟುಗಳು 80ರಿಂದ 120ಕ್ಕೆ ಏರಿಕೆಯಾಗುವ ಸಾಧ್ಯತೆ ಇದ್ದು, ಮಹಾರಾಷ್ಟ್ರದಲ್ಲಿ 48ರಿಂದ 72, ಬಿಹಾರದಲ್ಲಿ 40ರಿಂದ 60, ಮಧ್ಯ ಪ್ರದೇಶದಲ್ಲಿ 29ರಿಂದ 43-44, ರಾಜಸ್ಥಾನದಲ್ಲಿ 25ರಿಂದ 37-38 ಮತ್ತು ಗುಜರಾತಿನಲ್ಲಿ 26ರಿಂದ 39ಕ್ಕೆ ಏರಿಕೆ ಕಾಣಬಹುದು.
ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕದಲ್ಲಿ 28ರಿಂದ 42, ತಮಿಳುನಾಡಿನಲ್ಲಿ 39ರಿಂದ 58-59, ಆಂಧ್ರ ಪ್ರದೇಶದಲ್ಲಿ 25ರಿಂದ 37-38, ತೆಲಂಗಾಣದಲ್ಲಿ 17ರಿಂದ 25-26 ಮತ್ತು ಕೇರಳದಲ್ಲಿ 20ರಿಂದ 30ಕ್ಕೆ ಸೀಟುಗಳು ಏರಿಕೆಯಾಗಬಹುದು. ಆದರೆ, ಒಟ್ಟಾರೆ ಲಾಭವನ್ನು ಹೋಲಿಸಿದರೆ, ದಕ್ಷಿಣ ರಾಜ್ಯಗಳಿಗೆ ಸುಮಾರು 63-66 ಹೆಚ್ಚುವರಿ ಸೀಟುಗಳು ಮಾತ್ರ ಸಿಗುತ್ತವೆ. ಉತ್ತರ ಭಾರತದ ಕೆಲವೇ ರಾಜ್ಯಗಳು 128-141 ಸೀಟುಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ವಾದಿಸಿದ್ದಾರೆ.
ಒಟ್ಟು ಲೋಕಸಭಾ ಸೀಟುಗಳು 543ರಿಂದ 816ಕ್ಕೆ ಏರಿದರೂ, ದಕ್ಷಿಣ ಭಾರತದ ಪಾಲು ಈಗಿನ ಶೇ.24ರಷ್ಟೇ ಉಳಿಯುತ್ತದೆ ಎಂದು ಸಿದ್ದರಾಮಯ್ಯ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಜನಸಂಖ್ಯೆ ನಿಯಂತ್ರಣ ಹಾಗೂ ಆಡಳಿತದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳನ್ನು ಈ ಕ್ರಮದ ಮೂಲಕ “ದಂಡಿಸಲಾಗುತ್ತಿದೆ”. ಕರ್ನಾಟಕದಂತಹ ರಾಜ್ಯದ ಧ್ವನಿಯನ್ನು ದುರ್ಬಲಗೊಳಿಸುವ ಪ್ರಯತ್ನ ಇದಾಗಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಉತ್ತರ ಪ್ರದೇಶಕ್ಕೆ ಈಗಾಗಲೇ ಕರ್ನಾಟಕಕ್ಕಿಂತ 52 ಸೀಟುಗಳ ಹೆಚ್ಚುವರಿ ಇದ್ದು, ಈ ಅಂತರ ಪುನರ್ವಿಂಗಡಣೆಯ ನಂತರ 78ಕ್ಕೆ ಏರಿಕೆಯಾಗಬಹುದು. ಮಹಾರಾಷ್ಟ್ರದ ಮುನ್ನಡೆಯೂ ಹೆಚ್ಚಾಗಲಿದೆ. ಇದು ಕೇವಲ ವಿಸ್ತರಣೆ ಅಲ್ಲ, ಅಧಿಕಾರದ ಕೇಂದ್ರೀಕರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಈ ಕ್ರಮವನ್ನು “ಒಕ್ಕೂಟ ವ್ಯವಸ್ಥೆಯ ಮೇಲಿನ ಸ್ಪಷ್ಟ ದಾಳಿ” ಎಂದು ಅವರು ಕರೆದಿದ್ದು, ದಕ್ಷಿಣ ರಾಜ್ಯಗಳಲ್ಲಿ ಜನಮನ್ನಣೆ ಪಡೆಯಲು ವಿಫಲವಾದ ಕೇಂದ್ರ ಸರ್ಕಾರ, ಈಗ ಪ್ರತಿನಿಧಿತ್ವದ ವಿನ್ಯಾಸವನ್ನು ಬದಲಾಯಿಸುವ ಮೂಲಕ ದಕ್ಷಿಣದ ಧ್ವನಿಯನ್ನು ಕುಗ್ಗಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



