ಅಲ್ಪಸಂಖ್ಯಾತರು ಈ ರಾಜ್ಯದ ನಾಗರಿಕರಲ್ಲವೇ..? ಎಲ್ಲಾ ಸಮುದಾಯಗಳಂತೆ ಅವರಿಗೂ ಅನುದಾನ ನೀಡಲಾಗಿದೆ: ಸಿಎಂ
ಅವರೇನು ಈ ರಾಜ್ಯದ ನಾಗರಿಕರಲ್ಲವೇ? ಅಲ್ಪಸಂಖ್ಯಾತರು ಜನಸಂಖ್ಯೆಯ ಶೇ.14 ರಷ್ಟಿದ್ದಾರೆ. ಇತರ ಎಲ್ಲಾ ಸಮುದಾಯಗಳೊಂದಿಗೆ ಅವರಿಗೆ ಅನುದಾನಗಳನ್ನು ನೀಡಲಾಗಿದೆ.

ಬಾಗಲಕೋಟೆ: ಅಲ್ಪಸಂಖ್ಯಾತರು ಈ ರಾಜ್ಯದ ನಾಗರಿಕರಲ್ಲವೇ, ಎಲ್ಲ ಸಮುದಾಯಗಳಿಗೂ ಅನುದಾನ ನೀಡಲಾಗಿದೆ. ಹಾಗೆಯೇ ಅವರಿಗೂ ಅನುದಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಉಪಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದು, ಸೋಲಿನ ಭಯದಿಂದ ಅಪಪ್ರಚಾರ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಬಾಗಲಕೋಟೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಪ್ರಚಾರ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, “ಬಿಜೆಪಿ ಯಾವಾಗಲೂ ಸುಳ್ಳು ಹರಡುವುದರಲ್ಲಿ ಪರಿಣತಿ ಹೊಂದಿದೆ. ಅವರ ಹೇಳಿಕೆಗಳಲ್ಲಿ ಸತ್ಯವಿಲ್ಲ. ಅವರು ಹೇಳುವುದಕ್ಕೂ ಮಾಡುವುದಕ್ಕೂ ಸಂಬಂಧವಿಲ್ಲ. ಉಪಚುನಾವಣೆಯಲ್ಲಿ ಸೋಲಿನ ಭಯದಿಂದಲೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪಕ್ಷದಿಂದ ಹೊರಹಾಕಲ್ಪಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಸೋಲಿನ ಭಯದಿಂದ ಬಿಜೆಪಿ ತಮ್ಮದೇ ಪಕ್ಷದಿಂದ ಹೊರಹಾಕಲ್ಪಟ್ಟವರನ್ನೇ ಪ್ರಚಾರಕ್ಕೆ ಬಳಸುತ್ತಿದೆ. ಇದು ಅವರ ದ್ವಂದ್ವ ಸ್ವಭಾವವನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
ಬಳಿಕ ಕೇಂದ್ರ ಸಚಿವ ವಿ. ಸೋಮಣ್ಣ ವಿರುದ್ಧ ಕಿಡಿಕಾರಿದ ಸಿಎಂ, “ಅವರು ಕೆಲಸವಿಲ್ಲದ ಸಚಿವರು. ಅವರ ಬಳಿ ಯಾವುದೇ ಫೈಲ್ ಹೋಗುವುದಿಲ್ಲ. ನನ್ನ ಆಡಳಿತದ ಬಗ್ಗೆ ಪ್ರಶ್ನಿಸುವ ಹಕ್ಕು ಅವರಿಗೆ ಇಲ್ಲ,” ಎಂದು ಹೇಳಿದರು.
ಜೊತೆಗೆ, ಸೋಮಣ್ಣ ಸ್ವತಃ ಪ್ರಚಾರದಲ್ಲಿ ಹೆಚ್ಚು ಸಕ್ರಿಯರಾಗಿಲ್ಲ, ಏಕೆಂದರೆ ಬಿಜೆಪಿ ಸೋಲುವುದು ಖಚಿತ ಎಂಬ ಅರಿವು ಅವರಿಗೆ ಇದೆ ಎಂದು ವ್ಯಂಗ್ಯವಾಡಿದರು.
ಲೋಕಸಭೆ ಸ್ಥಾನಗಳ ಹೆಚ್ಚಳದ ಕೇಂದ್ರದ ಪ್ರಸ್ತಾವನೆ ಕುರಿತು ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಪ್ರತಿನಿಧಿತ್ವ ನೀಡಬೇಕು ಎಂದರೂ, ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಬಾರದು ಎಂದು ಎಚ್ಚರಿಸಿದರು. “ಉತ್ತರ ರಾಜ್ಯಗಳಲ್ಲಿ ಸ್ಥಾನ ಹೆಚ್ಚಿಸಿ, ದಕ್ಷಿಣದಲ್ಲಿ ಕಡಿಮೆ ಮಾಡುವ ಪ್ರಯತ್ನ ನಡೆಯಬಾರದು ಎಂದು ಹೇಳಿದರು.
ಗ್ಯಾಸ್ ಸಿಲಿಂಡರ್ ಕೊರತೆ ವಿಚಾರವಾಗಿ ಮಾತನಾಡಿ, ಸರಬರಾಜು ಖಚಿತಪಡಿಸುವುದು ಕೇಂದ್ರದ ಹೊಣೆಗಾರಿಕೆ, ರಾಜ್ಯದ ಕೆಲಸ ವಿತರಣೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, “ಉಪಚುನಾವಣೆಯ ಫಲಿತಾಂಶದಿಂದ ನನ್ನ ಸ್ಥಾನಕ್ಕೆ ಯಾವುದೇ ಪರಿಣಾಮವಿಲ್ಲ. ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರಿಗೆ ಅನುದಾನ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರೇನು ರಾಜ್ಯದ ನಾಗರಿಕರಲ್ಲವೇ? ಅಲ್ಪಸಂಖ್ಯಾತರು ಜನಸಂಖ್ಯೆಯ ಶೇ.14 ರಷ್ಟಿದ್ದಾರೆ. ಇತರ ಎಲ್ಲಾ ಸಮುದಾಯಗಳೊಂದಿಗೆ ಅವರಿಗೆ ಅನುದಾನಗಳನ್ನು ನೀಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ನಿರ್ಧಾರಗಳನ್ನು ಪ್ರಶ್ನಿಸುವ ಹಕ್ಕು ಬಿಜೆಪಿಗಿಲ್ಲ ಎಂದು ಹೇಳಿದ ಅವರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಪಕ್ಷದ ಹೈಕಮಾಂಡ್ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



