ಸ್ವತಂತ್ರವಾಗಿ ಸ್ಪರ್ಧೆಗಿಳಿದರೂ ಗೆಲ್ಲಬಲ್ಲೆ, ಏಕೆ BJP ಸೇರಲಿ?: ಮಾಜಿ ಸಚಿವ ಕೆ.ಎನ್ ರಾಜಣ್ಣ
ತುಮಕೂರು ಜಿಲ್ಲೆಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಾರನ್ನಾದರೂ ಗೆಲ್ಲಿಸುವ ಅಥವಾ ಸೋಲಿಸುವ ಶಕ್ತಿ ನನಗಿದೆ, ನಾನು ಯಾವುದೇ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತೇನೆ. ಸ್ವತಂತ್ರವಾಗಿ ನಿಂತರೂ ಗೆಲ್ಲುತ್ತೇನೆ.

ತುಮಕೂರು/ಬೆಂಗಳೂರು: ಸ್ವತಂತ್ರವಾಗಿ ಸ್ಪರ್ಧೆಗಿಳಿದರೂ ಗೆಲ್ಲುವ ವಿಶ್ವಾಸವಿದೆ. ಹೀಗಿರುವಾಗ ನಾನೇಕೆ ಬಿಜೆಪಿಗೆ ಸೇರ್ಪಡೆಗೊಳ್ಳಿ ಎಂದು ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಬುಧವಾರ ಹೇಳಿದ್ದಾರೆ.
ಮಧುಗಿರಿ ವಿಧಾನಸಭಾ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ರಾಜಣ್ಣ ಅವರು, ಬಿಜೆಪಿ ಸೇರ್ಪಡೆ ಕುರಿತ ಊಹಾಪೋಹಗಳನ್ನು ನಿರಾಕರಿಸಿದರು. ಇದೇ ವೇಳೆ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರ ವಿರುದ್ಧ ಕಿಡಿಕಾರಿದರು.
ತುಮಕೂರು ಜಿಲ್ಲೆಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಾರನ್ನಾದರೂ ಗೆಲ್ಲಿಸುವ ಅಥವಾ ಸೋಲಿಸುವ ಶಕ್ತಿ ನನಗಿದೆ, ನಾನು ಯಾವುದೇ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತೇನೆ. ಸ್ವತಂತ್ರವಾಗಿ ನಿಂತರೂ ಗೆಲ್ಲುತ್ತೇನೆ. ಬಿಜೆಪಿಗೇಕೆ ಸೇರಲಿ? ಬಿಜೆಪಿಗೆ ಸೇರಲು ಬಯಸುವವರು ಹಾಗೆ ಮಾಡಲಿ. ನಾನು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವ ಶಕ್ತಿ ನನಗಿದೆ. ಕಾಂಗ್ರೆಸ್ ಪಕ್ಷವನ್ನೇಕೆ ತ್ಯಜಿಸಬೇಕು? ಪಕ್ಷ ನನಗೆ ಏನು ಮಾಡಿದೆ? ಎಂದು ಪ್ರಶ್ನಿಸಿದರು.
ಅನ್ನಭಾಗ್ಯ ಕಾರ್ಯಕ್ರಮ ನನಗೆ ಬಹಳ ಪ್ರೀತಿಯ ಯೋಜನೆ. ಸಿದ್ದರಾಮಯ್ಯ ಅವರು ಅನ್ನಭಾಗ್ಯ ಕಾರ್ಯಕ್ರಮದಿಂದ ನನಗೆ ಅಚ್ಚುಮೆಚ್ಚು. ಅದಕ್ಕೆ ನಾನು ಅವರನ್ನು ಹೆಚ್ಚು ಪ್ರೀತಿ ಮಾಡುತ್ತೇನೆ. ಹಸಿವಿನ ಪಿಡುಗು ತೊಡೆದು ಹಾಕಿದ್ದು ಸಿದ್ದರಾಮಯ್ಯ. ಉಳಿದ ಸಿಎಂಗಳಿಗೆ ಇಂತಹ ಮನಸ್ಥಿತಿ ಇರಲಿಲ್ಲ. ಸಿದ್ದರಾಮಯ್ಯನವರು ಅವರ ಮನೆಯಿಂದ ತಂದು ಕೊಟ್ಟಿಲ್ಲ ನಿಜ. ಆದರೆ, ಬೇರೆ ಸಿಎಂಗಳು ಯಾಕೆ ಕೊಟ್ಟಿಲ್ಲ. ಮಧುಗಿರಿ ತಾಲೂಕಿನಲ್ಲಿ ಅನ್ನಭಾಗ್ಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಬಡವರ ಕಾರ್ಯಕ್ರಮ ಮಂಜೂರು ಮಾಡುವಾಗ ನಾವು ತಾರತಮ್ಯ ಮಾಡಿಲ್ಲ. ಪಕ್ಷಕ್ಕೆ ಮತ ಹಾಕಿಲ್ಲ ಎಂದು ಸವಲತ್ತು ಕೊಡುವುದಿಲ್ಲ ಎಂದು ಹೇಳಿಲ್ಲ. ಎಲ್ಲಾ ಪಕ್ಷ, ಜಾತಿಯವರಿಗೆ ಮನೆಗಳು ಮಂಜೂರು ಮಾಡಿದ್ದೇನೆ.
ನಾನು ಮಾಜಿ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಅದರಿಂದ ಬೇಜಾರಿಲ್ಲ. 35 ಸಾವಿರ ಲೀಡ್‌ನಿಂದ ನಾನು ಗೆದ್ದಿದ್ದೇನೆ. ಈಗ ಚುನಾವಣೆ ಆದರೂ ನಾನೂ ಹೆಚ್ಚು ಮತದಿಂದ ಗೆಲ್ಲುತ್ತೇನೆ. ನಾನು ಭ್ರಷ್ಟಾಚಾರ ಮಾಡಿಲ್ಲ. ಆದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ. ನಾನ್ಯಾಕೆ ಬಿಜೆಪಿ ಸೇರಲಿ? ಅವಕಾಶ ಇಲ್ಲ ನನಗೆ. ಪಾರ್ಟಿ ನನಗೆ ಏನೂ ಮೋಸ ಮಾಡಿಲ್ಲ. ಯಾವ ಕಾರಣಕ್ಕೂ ನಾನು ಕಾಂಗ್ರೆಸ್ ಬಿಡಲ್ಲ. ಜನರು ನನಗೆ ಕಾಂಗ್ರೆಸ್, ಬಿಜೆಪಿ ಅಥವಾ ಇಂಡಿಪೆಂಡೆಂಟ್ ನಿಂತರೂ ಮತ ಹಾಕುತ್ತಾರೆ. ರಾಹುಲ್ ಗಾಂಧಿ ಮತಗಳ್ಳತನ ಹೋರಾಟವನ್ನು ನಾನು ಬೆಂಬಲಿಸುತ್ತೇನೆ. ಸಿದ್ದರಾಮಯ್ಯ ನೇತೃತ್ವ ಇರೋವರೆಗೂ ನನ್ನ ಭವಿಷ್ಯಕ್ಕೆ ತೊಂದರೆ ಇಲ್ಲ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು, ಶಾಸಕ ಬಾಲಕೃಷ್ಣ ವಿರುದ್ಧ ಕಿಡಿಕಾರಿದರು. ನನ್ನ ತಂದೆ ಸಚಿವ ಸಂಪುಟದಿಂದ ವಜಾಗೊಳ್ಳುವುದರ ಹಿಂದೆ ಪಿತೂರಿಯಿದೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



