ಮಾಜಿ ಸಚಿವ ರಾಜಣ್ಣ ಮನೆಯಲ್ಲಿ ಔತಣಕೂಟ: ಸಿಎಂ ಸಿದ್ದರಾಮಯ್ಯ ಭಾಗಿ; ಹೆಚ್ಚಿದ ಕುತೂಹಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಣ್ಣ ಅವರ ಮನೆಯಲ್ಲಿ ಔತಣಕೂಟದಲ್ಲಿ ಭಾಗಿಯಾಗಲಿದ್ದು, ಇದೇ ವೇಳೆ ಗೃಹ ಸಚಿವ ಪರಮೇಶ್ವರ್ ಅವರೂ ಕೂಡ ಮುಖ್ಯಮಂತ್ರಿಗಳಿಗೆ ಸಾಥ್ ನೀಡಲಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ-ನವೆಂಬರ್ ಕ್ರಾಂತಿ ಭಾರೀ ಸದ್ದು ಮಾಡುತ್ತಿದ್ದು, ಈ ನಡುವಲ್ಲೇ ಮಾಜಿ ಸಚಿವ ರಾಜಣ್ಣ ಮನೆಯಲ್ಲಿನ ಔತಣಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗುತ್ತಿರುವುದು ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರಿನ ಗ್ರಾಮೀಣ ಪ್ರದೇಶದ ಬಿದರಕಟ್ಟೆಯಲ್ಲಿ ವಿಶ್ವವಿದ್ಯಾಲಯ ಕ್ಯಾಂಪಸ್ ಉದ್ಘಾಟಿಸಲಿದ್ದು, ನಂತರ ತುಮಕೂರಿನಲ್ಲಿ ಕ್ಯಾನ್ಸರ್ ಚಿಕಿತ್ಸಾಲಯವನ್ನು ಉದ್ಘಾಟಿಸಲಿದ್ದಾರೆ.
ಇದರ ಬೆನ್ನಲ್ಲೇ ರಾಜಣ್ಣ ಅವರ ಮನೆಯಲ್ಲಿ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಗೃಹ ಸಚಿವ ಪರಮೇಶ್ವರ್ ಅವರೂ ಕೂಡ ಮುಖ್ಯಮಂತ್ರಿಗಳಿಗೆ ಸಾಥ್ ನೀಡಲಿದ್ದಾರೆಂದು ತಿಳಿದುಬಂದಿದೆ.
ಔತಣಕೂಟದಲ್ಲಿ ಸಿದ್ದರಾಮಯ್ಯ ಅವರು, ರಾಜಣ್ಣ ಅವರನ್ನು ಸಂಪುಟಕ್ಕೆ ಮರಳಿ ಸೇರ್ಪಡೆಗೊಳಿಸುವ ಕುರಿತು ಮಾತುಕತೆ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.
ಈ ನಡುವೆ ನವೆಂಬರ್ 15 ರಂದು ಮುಖ್ಯಮಂತ್ರಿಗಳು ದೆಹಲಿಗೆ ಭೇಟಿ ನೀಡಲಿದ್ದು, ಈ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಂಪುಟ ಪುನರ್ರಚನೆಗೆ ಒಪ್ಪಿಗೆ ಪಡೆಯುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಇನ್ನು ರಾಜಣ್ಣ ಮನೆಯಲ್ಲಿ ಏರ್ಪಡಿಸಲಾಗುತ್ತಿರುವ ಔತಣಕೂಟ ಕುರಿತು ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು, ಇದು ಔತಣಕೂಟವಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿದ್ದಾಗಲೆಲ್ಲಾ ರಾಜಣ್ಣ ಅವರ ಮನೆಗೆ ಭೇಟಿ ನೀಡುವುದು ವಾಡಿಕೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು 5ನೇ ಬಾರಿಗೆ ತುಮಕೂರಿಗೆ ಭೇಟಿ ನೀಡುತ್ತಿದ್ದಾರೆ. ತುಮಕೂರಿಗೆ ಭೇಟಿ ನೀಡಿದಾಗಲೆಲ್ಲಾ ರಾಜಣ್ಣ ಮನೆಗೆ ತೆರಳಿದ್ದಾರೆ. ಮೂರು ಬಾರಿ ರಾಜಣ್ಣ ಮನೆಗೆ ಹೋಗಿದ್ದಾರೆ. ನಾಯಕರು ಆಹ್ವಾನ ನೀಡಿದಾಗ ಮುಖ್ಯಮಂತ್ರಿಗಳು, ನಾವು ಹಾಗೂ ಜಿಲ್ಲೆಯ ನಾಯಕರು ಹೋಗುತ್ತೇವೆ. ಈ ಬಾರಿಯೂ ಆಹ್ವಾನ ನೀಡಿದ್ದಾರೆ. ಮುಖ್ಯಮಂತ್ರಿಗಳು ಹೋಗೋಣ ಎಂದರು, ಹೀಗಾಗಿ ನಾವು ಹೋಗುತ್ತಿದ್ದೇವೆ. ಈ ವೇಳೆ ಯಾವುದೇ ರಾಜಕೀಯ ಚರ್ಚೆಗಳೂ ನಡೆಯುವುದಿಲ್ಲ. ಊಟ ಮಾಡಿ, ಬರುತ್ತೇವಷ್ಟೇ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



