ರಾಜಕೀಯ

ಬೆಲೆ ಏರಿಕೆ: BJP, ಪ್ರಧಾನಿ ಮೋದಿಯತ್ತ ಬೊಟ್ಟು ಮಾಡಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇಂದು ಒಂದೇ ದಿನ 140 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಎಚ್.ಡಿ.ಕೋಟೆ ಜನಕ್ಕೆ ಅರ್ಪಿಸಿದ್ದೇವೆ. ಈ ಬಾರಿ 8000 ಕೋಟಿ ಶಾಸಕರ ಅನುದಾನ, ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿದ್ದೇವೆ.

ಬೆಲೆ ಏರಿಕೆ: BJP, ಪ್ರಧಾನಿ ಮೋದಿಯತ್ತ ಬೊಟ್ಟು ಮಾಡಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಸಿಎಂ ಸಿದ್ದರಾಮಯ್ಯ
Published On :

ಮೈಸೂರು: ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಬಿಜೆಪಿ ನಡೆಸಿದ ಜನ ಆಕ್ರೋಶ ಯಾತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಟೀಕಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಎಚ್‌ಡಿ ಕೋಟೆಯಲ್ಲಿ ನಡೆದ 134ನೇ ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ಜನರ ಆರ್ಥಿಕ ಸಬಲೀಕರಣ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ ಎಂದು ಕಿಡಿಕಾರಿದರು.

ಇದೇ ವೇಳೆ ಯುಪಿಎ ಸರ್ಕಾರ ಮತ್ತು ಮೋದಿ ಆಡಳಿತದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್, ಸಿಮೆಂಟ್, ಬೆಳ್ಳಿ, ಚಿನ್ನ, ಅನಿಲ ಮತ್ತು ಇತರ ಸರಕುಗಳ ಬೆಲೆಗಳನ್ನು ಹೋಲಿಕೆ ಮಾಡಿ, ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇಂದು ಒಂದೇ ದಿನ 140 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಎಚ್.ಡಿ.ಕೋಟೆ ಜನಕ್ಕೆ ಅರ್ಪಿಸಿದ್ದೇವೆ. ಈ ಬಾರಿ 8000 ಕೋಟಿ ಶಾಸಕರ ಅನುದಾನ, ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿದ್ದೇವೆ. 55 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ತೆಗೆದಿರಿಸಿದ್ದೀವಿ. 80 ಸಾವಿರ ಕೋಟಿ ಬಂಡವಾಳ ವೆಚ್ಚಕ್ಕೆ ಮೀಸಲಿರಿಸಿದ್ದೇವೆ. ಈ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ಬಿಜೆಪಿಯವರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳ್ತಾರೆ. ಹಾಲಿನ ದರ 4 ರು. ಹೆಚ್ಚು ಮಾಡಿ ಇದರಲ್ಲಿ ಒಂದು ರುಪಾಯಿಯನ್ನೂ ನಾವು ಇಟ್ಟುಕೊಳ್ಳದೆ ಅಷ್ಟನ್ನೂ ರೈತರಿಗೆ, ಗೋ ಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೇವೆ. ಆದರೆ, ಬಿಜೆಪಿ ಚಿನ್ನ, ಬೆಳ್ಳಿ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ಬೇಳೆ, ಗೊಬ್ಬರ, ಎಣ್ಣೆ ಕಾಳು ಸೇರಿ ಎಲ್ಲ ದರ ಬೆಲೆ ಹೆಚ್ಚಿಸಿದ್ದು ಕೇಂದ್ರದ ಬಿಜೆಪಿ ಸರ್ಕಾರ, ಮೋದಿ ಸರ್ಕಾರ. ಆದ್ದರಿಂದ ಜನಾಕ್ರೋಶ ಇರುವುದು ಬಿಜೆಪಿ ಸರ್ಕಾರದ ಮೋದಿಯ ವಿರುದ್ಧವೇ ಹೊರತು, ನಮ್ಮ ಕಾಂಗ್ರೆಸ್ ಸರ್ಕಾರದ ಮೇಲಲ್ಲ ಎಂದು ಅವರು ಬಿಜೆಪಿಯ ಜನಕ್ರೋಶ ಯಾತ್ರೆ ಬಗ್ಗೆ ವ್ಯಂಗ್ಯವಾಡಿದರು.

ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ಸಂವಿಧಾನದ ಆಶಯಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜಾತಿ- ಧರ್ಮದ ಸಹಿಷ್ಣುತೆ ಇರುವ, ಸರ್ವರನ್ನೂ ಒಳಗೊಳ್ಳುವ ಪರಂಪರೆ ನಮ್ಮದು. ಮನುಷ್ಯರನ್ನು ಜಾತಿ- ಧರ್ಮದ ನೆಪದಲ್ಲಿ ವಿರೋಧಿಸುವವರು, ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಪ್ರಾಣಿಗಳನ್ನು ಪ್ರೀತಿಸುವುದು ತಪ್ಪಲ್ಲ, ಆದರೆ, ಮನುಷ್ಯರನ್ನು ವಿರೋಧಿಸುವುದು ತಪ್ಪು ಎಂದರು.

ಸಮಾಜದ ಪ್ರತಿಯೊಂದು ವರ್ಗವು ಆರ್ಥಿಕವಾಗಿ ಸಬಲೀಕರಣಗೊಂಡರೆ ಜಾತಿ ವ್ಯವಸ್ಥೆಯಂತಹ ಸಾಮಾಜಿಕ ಅನಿಷ್ಟಗಳು ಕಣ್ಮರೆಯಾಗುತ್ತವೆ. ಜನರಿಗೆ ಸಾಧಿಸಲು ಸಾಕಷ್ಟು ಅವಕಾಶಗಳು ಸಿಕ್ಕಾಗ ಸಮಾಜವು ಪ್ರಗತಿ ಹೊಂದುತ್ತದೆ. ಆರ್ಥಿಕವಾಗಿ ಸರ್ವರಿಗೂ ಶಕ್ತಿ ಬಂದರೆ ಜಾತಿ ಹೋಗುತ್ತದೆ. ಬುದ್ದ, ಬಸವ ಅವರು ಜಾತಿ ಹೋಗಬೇಕೆಂದು ಹೋರಾಟ ಮಾಡಿದರೂ ಇನ್ನೂ ಜಾತಿ ಹೋಗಿಲ್ಲ. ಬಸವಣ್ಣರನ್ನು ಪ್ರೀತಿಸ್ತೀವಿ, ಪೂಜಿಸ್ತೀವಿ. ಆದರೆ ಬಸವಣ್ಣರನ್ನು ಪಾಲಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.