ರಾಜಕೀಯ

2028ರಲ್ಲೂ ನಮ್ಮದೇ ಅಧಿಕಾರ; ವಿಜಯೇಂದ್ರ ಕುರ್ಚಿ ಅಲ್ಲಾಡುತ್ತಿದೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಚುನಾವಣೆಗೆ ನಾವು ಹೆದರುವುದಿಲ್ಲ. ವಿಜಯೇಂದ್ರ ಕುರ್ಚಿ ಅಲ್ಲಾಡುತ್ತಿದ್ದು, 2028 ರ ವರೆಗೆ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ತಿಳಿದಿಲ್ಲ.

2028ರಲ್ಲೂ ನಮ್ಮದೇ ಅಧಿಕಾರ; ವಿಜಯೇಂದ್ರ ಕುರ್ಚಿ ಅಲ್ಲಾಡುತ್ತಿದೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಸಿಎಂ ಸಿದ್ದರಾಮಯ್ಯ
Published On :

ಬೆಂಗಳೂರು: 2028 ರಲ್ಲಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ. ಚರ್ಚೆಗೆ ಕರೆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚುನಾವಣೆ ಮಾಡುವಂತೆ ಹೇಳುತ್ತಾರೆ. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಅಧಿಕಾರದಲ್ಲಿ ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾವಗಡದ ಬಹುಗ್ರಾಮ ಕುಡಿಯುವ ಯೋಜನೆ, 2,250 ಮೆಗಾ ವ್ಯಾಟ್ ಸೋಲಾರ್ ಪ್ಲಾಂಟ್ ಘೋಷಣೆ ಸೇರಿ ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮುಖ್ಯಮಂತ್ರಿಗಳು ಮಾತನಾಡಿದರು.

2018ರ ಜನವರಿಯಲ್ಲಿ ಪಾವಗಡ ಮತ್ತಿತರ ಐದು ತಾಲ್ಲೂಕುಗಳಿಗೆ ಅನುಕೂಲ ಕಲ್ಪಿಸುವ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿತ್ತು. ಇಲ್ಲಿನ ಜನರು ಫ್ಲೋರೈಡ್ ಯುಕ್ತ ನೀರನ್ನು ಕುಡಿಯುವ ಅನಿವಾರ್ಯತೆ ಇತ್ತು. ಇದರಿಂದ ಜನರಿಗೆ ಆರೋಗ್ಯದ ತೊಂದರೆಗಳಿಗೆ ಒಳಗಾಗುತ್ತಿದ್ದರು. ಈ ಸಮಸ್ಯೆಯಿಂದ ಜನರನ್ನು ಹೊರತರಲು ಸುಮಾರು 200 ಕಿ.ಮೀ. ನಷ್ಟು ದೂರವಿರುವ ತುಂಗಭದ್ರಾ ಜಲಾಶಯದ ಹಿನ್ನೀರನ್ನು ಪಾವಗಡಕ್ಕೆ ತರುವ ಯೋಜನೆ ಇದಾಗಿದ್ದು, ಇಂದು ಲೋಕಾರ್ಪಣೆಗೊಂಡಿದೆ. ಹಿಂದಿನ ಅವಧಿಯಲ್ಲಿಯೂ ನಮ್ಮ ಸರ್ಕಾರವೇ ಅಧಿಕಾರದಲ್ಲಿದ್ದಿದ್ದರೆ ಯೋಜನೆಯನ್ನು ಮೂರು ವರ್ಷಗಳ ಮುಂಚೆಯೇ ಪೂರ್ಣಗೊಳಿಸಬಹುದಾಗಿತ್ತು.

2050ರವರೆಗೆ ಈ ಯೋಜನೆಯ ಲಾಭವನ್ನು ಜನರು ಪಡೆಯಬಹುದಾಗಿದೆ. ಈ ಯೋಜನೆಯಿಂದ ಸುಮಾರು 17.50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿದಂತಾಗುತ್ತದೆ. ಶುದ್ಧ ಕುಡಿಯುವ ನೀರಿನ ಯೋಜನೆಯಿಂದ ಜನರು ಅಂಗವೈಕಲ್ಯತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಪಾರಾಗಿದ್ದಾರೆ. ಪಾವಗಡ ತಾಲ್ಲೂಕಿನ 270 ಹಳ್ಳಿಗಳಿಗೆ ಮತ್ತು ಪಾವಗಡ ಪಟ್ಟಣಕ್ಕೆ ಈ ಯೋಜನೆಯಿಂದ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಈ ಯೋಜನೆಗೆ ಹಗಲಿರುಳು ದುಡಿದ ಸಚಿವರು ಹಾಗೂ ಶಾಸಕರ ಪ್ರಯತ್ನಗಳು ಇಂದು ಫಲಿಸಿದೆ. ಈ ಯೋಜನೆಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸುವ ಸುಯೋಗ ನನಗೆ ದೊರೆತಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ನಮ್ಮ ಸರ್ಕಾರದ ಮೇಲೆ ಸುಳ್ಳು ಅಪವಾದಗಳನ್ನು ಮಾಡುವ ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ? ಬಿಜೆಪಿಯವರು ರಾಜ್ಯದಲ್ಲಿ 9 ವರ್ಷಗಳು ಅಧಿಕಾರಿದಲ್ಲಿದ್ದರೂ ಇಂತಹ ಯೋಜನೆಯನ್ನು ಜಾರಿಗೆ ತರಲು ಅವರಿಂದ ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ಟೀಕಿಸಿದ್ದರು, ಈಗ ಅದನ್ನೇ ಕಾಪಿ ಮಾಡುತ್ತಿದ್ದಾರೆ. ಹಿಂದೆ ಅಧಿಕಾರ ನಡೆಸಿದ ರಾಜ್ಯದ ಬಿಜೆಪಿಯವರ ಸಾಧನೆ ಏನು?

ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ.1 ಆಗಿದೆ. ಈಗಾಗಲೇ 2,050 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ 2,400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದರಿಂದ ಪಾವಗಡದ ಚಿತ್ರಣವೇ ಬದಲಾಗಲಿದೆ. ನಂಜುಂಡಪ್ಪನವರ ವರದಿಯಲ್ಲಿ ಪಾವಗಡವನ್ನು ಅತ್ಯಂತ ಹಿಂದುಳಿದ ತಾಲ್ಲೂಕು ಎಂದು ಗುರುತಿಸಲ್ಪಟ್ಟಿತ್ತು. ಈಗ ತುಮಕೂರಿನ ತಾಲ್ಲೂಕಿನ ಪಟ್ಟಿಯಲ್ಲಿ ಪಾವಗಡ ಮೊದಲನೇ ಸ್ಥಾನದಲ್ಲಿದ್ದು, ಈ ಅಭಿವೃದ್ಧಿಗೆ ನಮ್ಮ ಸರ್ಕಾರವೇ ಕಾರಣ. ಈ ಭಾಗಕ್ಕೆ ಸೇರಿದ ನಮ್ಮ ಪಕ್ಷದ ಸಚಿವರು ಹಾಗೂ ಶಾಸಕರಿಗೆ ಜನರು ಸದಾ ಆಶೀರ್ವಾದ ಮಾಡಬೇಕು.

2004 ರಲ್ಲಿ ನಾನು ಜೆಡಿಎಸ್ ನಲ್ಲಿದ್ದಾಗ, ಜೆಡಿಎಸ್ ಪಕ್ಷ 59 ಸ್ಥಾನಗಳನ್ನು ಗೆದ್ದಿತ್ತು, ಆದ್ರೆ ಹಿಂದಿನ ಚುನಾವಣೆಯಲ್ಲಿ ಅವರು ಕೇವಲ 18 ಸ್ಥಾನಗಳನ್ನು ಗೆದ್ದರು. ಪಾವಗಡ ಕ್ಷೇತ್ರದಲ್ಲಿ ಜಿಡಿಎಸ್ ಪಕ್ಷ ಗೆಲ್ಲಲು ಸಾಧ್ಯವಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ಬಿಜೆಪಿ ಹಾಗೂ ಜೆಡಿಎಸ್ ಅನ್ನು ಕಂಗೆಡಿಸಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯ ನಂತರ ಸರ್ಕಾರ ಗ್ಯಾರಂಟಿಗಳನ್ನು ನಿಲ್ಲಿಸುತ್ತದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದರು. ಅಪಪ್ರಚಾರ, ತಪ್ಪು ಮಾಹಿತಿಯನ್ನು ಜನರಿಗೆ ನೀಡಬಾರದು ಎಂದು ಈಗಾಗಲೇ ಬಹಿರಂಗ ಚರ್ಚೆಗೆ ಬರಲು ಆಹ್ವಾನ ನೀಡಿದ್ದೇನೆ.

ನಮ್ಮ ಸರ್ಕಾರ ಒಂದು ಧರ್ಮದ ಪರವಾಗಿ ಕೆಲಸ ಮಾಡುತ್ತಿಲ್ಲ. ಅಕ್ಕಿ, ವಿದ್ಯುತ್, ನಿರುದ್ಯೋಗ ಭತ್ಯೆ, ಶಕ್ತಿ, ಗೃಹಲಕ್ಷ್ಮಿ ಯೋಜನೆಯನ್ನು ಬಿಜೆಪಿಯ ಬಡವರಿಗೂ ನೀಡಲಾಗಿದೆ. ಒಂದು ಪಕ್ಷಕ್ಕೆ, ಒಂದು ಜಾತಿ, ಒಂದು ಧರ್ಮಕ್ಕೆ ನೀಡಿಲ್ಲ. ರಾಜ್ಯ ಸರ್ವತೋಮುಖ ಅಭಿವೃದ್ಧಿಯಾಗಲು, ಹಿಂದುಳಿದ ತಾಲ್ಲೂಕುಗಳು ಮುಂದುವರೆಯಲು ಈ ಎಲ್ಲಾ ಕಾರ್ಯಕ್ರಮಗಳಿಂದ ಸಾಧ್ಯವಾಗಿದೆ. ಕರ್ನಾಟಕದ 240 ತಾಲ್ಲೂಕು, 224 ವಿಧಾನಸಭಾ ಕ್ಷೇತ್ರಗಳಿಗೆ ಎಲ್ಲಾ ಕಾರ್ಯಕ್ರಮಗಳನ್ನು ಒದಗಿಸಲಾಗುತ್ತಿದೆ.

ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳ ಒದಗಿಸುವುದಾಗಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರೂ ಇಲ್ಲಿಯವರೆಗೆ ಒಂದು ರೂಪಾಯಿ ಕೊಟ್ಟಿಲ್ಲ. ಎತ್ತಿನಹೊಳೆ ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುತ್ತೇವೆ. 23 ಕೆರೆಗಳಿಗೆ ಸಣ್ಣ ನೀರಾವರಿ ಇಲಾಖೆ ಮೂಲಕ ನೀರು ತುಂಬಿಸುವ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯನ್ನು ಅನುಷ್ಠಾನ ಮಾಡಿಯೇ ಮಾಡುತ್ತೇವೆ.

2028 ರಲ್ಲಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ. ಚರ್ಚೆಗೆ ಕರೆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಚುನಾವಣೆ ಮಾಡುವಂತೆ ಹೇಳುತ್ತಾರೆ. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಚುನಾವಣೆಗೆ ನಾವು ಹೆದರುವುದಿಲ್ಲ. ವಿಜಯೇಂದ್ರ ಕುರ್ಚಿ ಅಲ್ಲಾಡುತ್ತಿದ್ದು, 2028 ರ ವರೆಗೆ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ತಿಳಿದಿಲ್ಲ.

ನಾಳೆ ಚುನಾವಣೆಯಾದರೂ ನಾವು ಗೆದ್ದೆ ಗೆಲ್ಲುತ್ತೇವೆ. ಆದರೆ, ಜನ ನಮಗೆ 2028 ರ ಮೇ ವರೆಗೆ ಅಧಿಕಾರ ನೀಡಿದ್ದಾರೆ. ಅದರಂತೆ ಅಲ್ಲಿಯವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತೇವೆ. 2028 ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ, ಜೆಡಿಎಸ್ ಅನ್ನು ಸೋಲಿಸಿ ಪುನಃ ಅಧಿಕಾರಕ್ಕೆ ಬಂದೇ ಬರುತ್ತೇವೆ. 2050 ಮೆಗಾ ವ್ಯಾಟ್ ಸೌರಶಕ್ತಿ ಉತ್ಪಾದಿಸುವ ಘಟಕವನ್ನು ಲೋಕಾರ್ಪಣೆ ಮಾಡಲಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಪಾವಗಡ ತಾಲೂಕು ಮುಂದುವರೆಯುವ ಬಗ್ಗೆ ಸಂತೋಷವಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.