ರಾಜಕೀಯ

ಮಂಡ್ಯ ಜಿಲ್ಲೆಗೆ 25 ಸಾವಿರ ಕೋಟಿ ರೂ ಅನುದಾನ ಕೊಡಿಸಲಿ: HDK ಗೆ ಸಚಿವ ಚಲುವರಾಯಸ್ವಾಮಿ ಸವಾಲು

ಕೇಂದ್ರ ಸಚಿವರಾಗಿ ಮಂಡ್ಯ ಆಟೊರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ರೂ.30‌ ಲಕ್ಷ ಅನುದಾನ ಕೊಟ್ಟಿದ್ದಾರೆ. ಸಂಸದರಿಗೆ ರೂ.5 ಕೋಟಿ ಅನುದಾನ ಬರುತ್ತದೆ, ಅದರಲ್ಲಿ ನೀಡಿದ್ದಾರೆ. ಈ ಕೆಲಸವನ್ನು ಹಿಂದಿನ ಸಂಸದೆ ಸುಮಲತಾ ಕೂಡ ಮಾಡಿದ್ದರು.

ಮಂಡ್ಯ ಜಿಲ್ಲೆಗೆ 25 ಸಾವಿರ ಕೋಟಿ ರೂ ಅನುದಾನ ಕೊಡಿಸಲಿ: HDK ಗೆ ಸಚಿವ ಚಲುವರಾಯಸ್ವಾಮಿ ಸವಾಲು
ಸಚಿವ ಚಲುವರಾಯಸ್ವಾಮಿ
Published On :

ಮೈಸೂರು: ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು, ತಾವು ಪ್ರತಿನಿಧಿಸುವ ಮಂಡ್ಯ ಜಿಲ್ಲೆಗೆ 25 ಸಾವಿರ ಕೋಟಿ ರೂ. ಅನುದಾನ ಕೊಡಿಸಲಿ’ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಶುಕ್ರವಾರ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ ಜಿಲ್ಲೆಗೆ ಕುಮಾರಸ್ವಾಮಿ ಅವರು ಪ್ರಮುಖ ಕಾರ್ಯಕ್ರಮ ತಂದರೆ ನಾವು ಅವರನ್ನು ಪ್ರಶಂಸಿಸುತ್ತೇವೆ ಮತ್ತು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಕೇಂದ್ರ ಸಚಿವರಾಗಿ ಮಂಡ್ಯ ಆಟೊರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ರೂ.30‌ ಲಕ್ಷ ಅನುದಾನ ಕೊಟ್ಟಿದ್ದಾರೆ. ಸಂಸದರಿಗೆ ರೂ.5 ಕೋಟಿ ಅನುದಾನ ಬರುತ್ತದೆ, ಅದರಲ್ಲಿ ನೀಡಿದ್ದಾರೆ. ಈ ಕೆಲಸವನ್ನು ಹಿಂದಿನ ಸಂಸದೆ ಸುಮಲತಾ ಕೂಡ ಮಾಡಿದ್ದರು. ಎಲ್ಲರೂ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.

‘ನಮಗೂ, ಅವರಿಗೂ, ಶಾಸಕ, ಸಂಸದರಿಗೂ ನಿಧಿ ಬರುತ್ತದೆ. ಅದನ್ನು ಎಲ್ಲರೂ ಖರ್ಚು ಮಾಡುತ್ತಾರೆ. ಆದರೆ, ಕುಮಾರಸ್ವಾಮಿ ದೊಡ್ಡ ಮಂತ್ರಿ ಆಗಿದ್ದಾರೆ. ರಾಜ್ಯಕ್ಕೆ ಬರಬೇಕಾದ ತೆರಿಗೆ ಬಾಕಿಯನ್ನು ಕೊಡಿಸಲಿ. ಅದನ್ನು ಬಿಟ್ಟು ಸಹಜವಾಗಿಯೇ ಬರುವ ಲೋಕಸಭಾ ಸದಸ್ಯರ ನಿಧಿ ತರುವುದರಲ್ಲೇನು ವಿಶೇಷವಿದೆ?’ ಎಂದು ಟೀಕಿಸಿದರು.

ಅವರು ವಿಶೇಷ ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿಪಡಿಸಲಿ. ಇನ್ನೂ ಸಮಯ ಇದೆ. ಈ ನಿಟ್ಟಿನಲ್ಲಿ ಅವರು ಕೆಲಸ ಮಾಡಲಿ ಎಂದು ತಿಳಿಸಿದರು.

ಕುಮಾರಸ್ವಾಮಿ ಕರೆದಿರುವ ದಿಶಾ ಸಭೆ ವಿಚಾರವಾಗಿ ಉತ್ತರಿಸಿ, ಅವರಿಗೆ ಒಳ್ಳೆಯದಾಗಲಿ. ನಾನು ಸಭೆ ಕರೆದಾಗ ಅವರು ಬಂದಿಲ್ಲ. ನನಗೆ ಮೈಸೂರಿನಲ್ಲಿ ಅಧಿಕಾರಿಗಳ ಸಭೆ ಇದ್ದ ಕಾರಣ, ದಿಶಾ ಸಭೆಗೆ ಹೋಗಲಿಲ್ಲ ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ಜನಪರವಾಗಿ ಕೆಲಸ ಮಾಡುತ್ತಿದೆ. ಹೆಚ್ಚಿನ ಕೆಲಸ ಮಾಡುವ ನಿಟ್ಟಿನಲ್ಲಿ ಜನರ ಅಭಿಪ್ರಾಯ ಹೇಗಿದೆ ಎಂದು ಕೇಳಲೆಂದು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಬಂದಿದ್ದರು. ಜೊತೆಗೆ ಶಾಸಕರ ಅಭಿಪ್ರಾಯವನ್ನೂ ಕೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ–ಡಿಸಿಎಂ ಡಿ.ಕೆ. ಶಿವಕುಮಾರ್‌ ಒಗ್ಗಟ್ಟಾಗಿದ್ದಾರೆ. ಯಾರು ಏನೇ ಮಾಡಿದರೂ ಅವರ ಒಗ್ಗಟ್ಟು ಹೀಗೆಯೇ ಇರುತ್ತದೆ. ‘ಸಿದ್ದರಾಮಯ್ಯ ಅವರೇ ಮುಂದುವರಿಯಬೇಕಾ, ಬೇಡವಾ, ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ನಿರ್ಧರಿಸುವುದು ಹೈಕಮಾಂಡೇ ಹೊರತು ಹೇಳಿಕೆ ನೀಡುವವರಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.