ರಾಜಕೀಯ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದಿನಕ್ಕೊಂದು ಮಾನಭಂಗ-ಅತ್ಯಾಚಾರ ಪ್ರಕರಣ ಜನರನ್ನು ಬೆಚ್ಚಿ ಬೀಳಿಸುತ್ತಲೇ ಇದೆ: BJP

ಮೂವರು ದುಷ್ಕರ್ಮಿಗಳು ಬಾಲಕಿಗೆ ಕೇಕ್ ಕೊಡಿಸಿ ನಂತರ, ಚಾಕು ತೋರಿಸಿ ಬೆದರಿಸಿ ಶಾಲಾ ಆವರಣದಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾರೆ ಘಟನೆ ಮಂಡ್ಯ ನಗರದ ಹೊರವಲಯದಲ್ಲಿ ನಡೆದಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದಿನಕ್ಕೊಂದು ಮಾನಭಂಗ-ಅತ್ಯಾಚಾರ ಪ್ರಕರಣ ಜನರನ್ನು ಬೆಚ್ಚಿ ಬೀಳಿಸುತ್ತಲೇ ಇದೆ: BJP
ಆರ್. ಅಶೋಕ್
Published On :

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದ್ದು ದಿನಕ್ಕೊಂದು ಮಾನಭಂಗ, ಅತ್ಯಾಚಾರ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುತ್ತಲೇ ಇದೆ ಎಂದು ಬಿಜೆಪಿ ಕಿಡಿಕಾರಿದೆ.

ಮಂಡ್ಯ ಜಿಲ್ಲೆಯ ಸರ್ಕಾರಿ ಶಾಲೆ ಆವರಣದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ವಿಧಾನಸಭೆ ವಿರೋಧ ಪಕ್ಷಧ ನಾಯಕ ಆರ್.ಅಶೋಕ್ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದ್ದು ದಿನಕ್ಕೊಂದು ಮಾನಭಂಗ, ಅತ್ಯಾಚಾರ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುತ್ತಲೇ ಇದೆ.ಮಂಡ್ಯದಲ್ಲಿ 8 ವರ್ಷದ ಬಾಲಕಿಯನ್ನು ಬೆದರಿಸಿ ಸರ್ಕಾರಿ ಶಾಲಾ ಅವರಣದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಹೃದಯವಿದ್ರಾವಕ ಘಟನೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಅರಾಜಕತೆಗೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ.

ಸಿಎಂ ಸಿದ್ದರಾಮಯ್ಯ ನವರೇ, ಮಹಿಳೆಯರ ಮೇಲೆ ಅತ್ಯಾಚಾರವಾದರೆ ಬಿಜೆಪಿ ಕಾಲದಲ್ಲಿ ರೇಪ್ ಆಗಿಲ್ಲವಾ ಎಂದು ಉಡಾಫೆ ಕೊಡುತ್ತೀರಲ್ಲಾ, ನಿಮ್ಮ ಸರ್ಕಾರದ ಈ ಸಂವೇದನಾರಹಿತ ಧೋರಣೆ, ಅಲಕ್ಷ್ಯವೇ ಇವತ್ತಿನ ಅರಾಜಕತೆಗೆ ಕಾರಣ. ಆಕಸ್ಮಿಕ ಗೃಹ ಸಚಿವ ಪರಮೇಶ್ವರ್ ಅವರೇ, 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆ ಮೂವರು ಕಾಮುಕರನ್ನು ಪತ್ತೆ ಹಚ್ಚಿ, ಬಂಧಿಸಿ, ಕಾನೂನಿನ ವಶಕ್ಕೆ ಒಪ್ಪಿಸಿ. ಮಹಿಳೆಯರ ಸುರಕ್ಷತೆಯ ವಿಷಯವನ್ನ ಗಂಭೀರವಾಗಿ ಪರಿಗಣಿಸಿ ನಾಡಿನ ಹೆಣ್ಣುಮಕ್ಕಳಿಗೆ ನಿರ್ಭೀತಿಯಿಂದ ಓಡಾಡುವ ಗ್ಯಾರೆಂಟಿ ಕೊಡಿ ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಮಂಡ್ಯದಲ್ಲಿ ನಡೆದಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆ ಅತ್ಯಂತ ಹೇಯ ಹಾಗೂ ಪೈಶಾಚಿಕ ಮನಸ್ಥಿತಿಯ ವಿಕೃತರ ಅಟ್ಟಹಾಸದ ಪರಮಾವಧಿಯಾಗಿದೆ. ಈ ಘಟನೆಯು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನಿಷ್ಕ್ರೀಯಗೊಂಡಿದ್ದು, ಇದರ ಲಾಭ ಪಡೆಯುತ್ತಿರುವ ಸಮಾಜಘಾತುಕ ದುಷ್ಕರ್ಮಿಗಳು ಅಪ್ರಾಪ್ತರ ಮೇಲೆ ಅತ್ಯಾಚಾರ, ಮಹಿಳೆಯರ ಮೇಲೆ ದೌರ್ಜನ್ಯ, ಹಾಗೂ ಹಾಡು ಹಗಲಲ್ಲೇ ದರೋಡೆಗಳು ಎಗ್ಗಿಲ್ಲದೇ ಮುಂದುವೆರೆಸಿವೆ, ಸದ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾದಿಯಾಗಿ ಜವಾಬ್ದಾರಿ ಹೊತ್ತ ಸಚಿವರೆಲ್ಲರೂ ಪವರ್ ಶೇರಿಂಗ್ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಪವರ್ ಪಾಲಿಟಿಕ್ಸ್ ರಾಜಕಾರಣದಲ್ಲಿ ಮುಳುಗಿದ್ದಾರೆ.

ಆಡಳಿತ ವ್ಯವಸ್ಥೆ ಅಸ್ತಿರಗೊಳ್ಳುತ್ತಿರುವುದರ ಲಾಭ ಪಡೆಯುತ್ತಿರುವ ಅಧಿಕಾರಿಗಳಿಗೆ ಮೂಗುದಾರ ಹಾಕುವವರು ಇಲ್ಲವಾಗಿದೆ, ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆಯಲು ಸರತೀ ಸಾಲಿನಲ್ಲಿ ನಿಂತಿದ್ದಾರೆ. ಕಾನೂನು ಸುವ್ಯವಸ್ಥೆಯ ರಕ್ಷಣೆ ದೊರೆಯದ ಅಮಾಯಕ ಜನ ಕಳ್ಳತನ, ದರೋಡೆ, ದೌರ್ಜನ್ಯ ಹಾಗೂ ಅತ್ಯಾಚಾರಗಳು ಎದುರಾಗುವ ಪರಿಸ್ಥಿತಿಯ ಆತಂಕದಲ್ಲಿ ಬದುಕುತ್ತಿದ್ದಾರೆ.

ಕ್ರೌರ್ಯದ ಪರಮಾವಧಿ ಮೆರದಿರುವ ಅಪ್ರಾಪ್ತ ಬಾಲಕಿಯನ್ನು ಕೇಂದ್ರೀಕರಿಸಿಕೊಂಡಿರುವುದರ ಸಾಕ್ಷಿಯಾಗಿ ಮಂಡ್ಯದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯು ಸೇರ್ಪಡೆಗೊಂಡಿದೆ. ಈ ಕೂಡಲೇ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸರ್ಕಾರ ಕಠಿಣ ಕ್ರಮ ಜರುಗಿಸದಿದ್ದರೆ ಈ ಕಾಂಗ್ರೆಸ್ ಸರ್ಕಾರ ಸಮಾಜ ಪೀಡಕ ದುಷ್ಟರಿಗೆ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂಬ ತೀರ್ಮಾನಕ್ಕೆ ರಾಜ್ಯದ ಜನತೆ ಬರಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿ ಜನರ ನೆರವಿಗೆ ಧಾವಿಸಲು ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಮೂವರು ದುಷ್ಕರ್ಮಿಗಳು ಬಾಲಕಿಗೆ ಕೇಕ್ ಕೊಡಿಸಿ ನಂತರ, ಚಾಕು ತೋರಿಸಿ ಬೆದರಿಸಿ ಶಾಲಾ ಆವರಣದಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾರೆ ಘಟನೆ ಮಂಡ್ಯ ನಗರದ ಹೊರವಲಯದಲ್ಲಿ ನಡೆದಿದೆ.

ಅತೀವ್ರ ಹೊಟ್ಟೆ ನೋವು ಮತ್ತು ರಕ್ತಸ್ರಾವದಿಂದ ನರಳುತ್ತಿದ್ದ ಬಾಲಕಿಯನ್ನು ಕಂಡ ಆಕೆಯ ಚಿಕ್ಕಮ್ಮ ವಿಚಾರಿಸಿದಾಗ ನಡೆದ ಘಟನೆಯನ್ನು ಬಾಲಕಿ ವಿವರಿಸಿದಳು ಎನ್ನಲಾಗಿದ್ದು, ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಮಂಡ್ಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ, ಶಾಲೆಗೆ ಭೇಟಿ ನೀಡಿ ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.

ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ, ಬಾಲಕಿಯ ಹೇಳಿಕೆಗಳು ಸ್ಪಷ್ಟವಾಗಿಲ್ಲದ ಕಾರಣ, ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಆಕೆಗೆ ಕೌನ್ಸೆಲಿಂಗ್ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮೂವರು ಹುಡುಗರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಬಾಲಕಿ ಹೇಳಿದ್ದಾಳೆ. 2ನೇ ತರಗತಿ ವಿದ್ಯಾರ್ಥಿನಿಯ ಹೆಸರನ್ನು ಕೂಡ ಉಲ್ಲೇಖಿಸಿದ್ದಾಳೆ. ಆದರೆ ಆ ದಿನ ವಿದ್ಯಾರ್ಥಿನಿ ಶಾಲೆಗೆ ಹೋಗಿಲ್ಲ ಎಂಬುದು ತಿಳಿದುಬಂದಿದೆ. ಆಕೆ ವಿದ್ಯಾರ್ಥಿಗಳಿಂದ ಅಥವಾ ಇತರರಿಂದ ದೌರ್ಜನ್ಯಕ್ಕೊಳಗಾಗಿದ್ದಾಳೆಯೇ ಎಂಬುದು ಸ್ಪಷ್ಟವಾಗಿಲ್ಲ. ತನಿಖೆ ನಡೆಸುತ್ತಿದ್ದೇವೆ, ಆದರೆ. ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಬಾಲಕಿಯ ಆಕೆಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.