ಕ್ಷಣಿಕ ರಾಜಕೀಯ ಲಾಭಕ್ಕಾಗಿ, ರಾಜ್ಯದ ಭವಿಷ್ಯ ಬಲಿ ಕೊಡುತ್ತಿದ್ದಾರೆ: CAG ವರದಿ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ BJP ಕಿಡಿ
ಸ್ವಯಂಘೋಷಿತ ಆರ್ಥಿಕ ತಜ್ಞ, ಸಿಎಂ ಸಿದ್ದರಾಮಯ್ಯ ಅವರ ದುರಾಡಳಿತ ಮತ್ತು ತಪ್ಪು ಹಣಕಾಸಿನ ನಿರ್ವಹಣೆಯಿಂದ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಯಾವ ಅಧೋಗತಿಗೆ ತಲುಪುತ್ತಿದೆ ಎನ್ನುವುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಬೆಂಗಳೂರು: ಗ್ಯಾರಂಟಿ ಯೋಜನೆ ರಾಜ್ಯದಲ್ಲಿ ಆರ್ಥಿಕ ಕೊರತೆ ಸೃಷ್ಟಿಸಿದ್ದು, ಮೂಲಸೌಕರ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಸಿಎಜಿ ವರದಿ ನೀಡಿರುವ ಬೆನ್ನಲ್ಲೇ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷಧ ನಾಯಕ ಆರ್.ಅಶೋಕ್ ಅವರು, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಇಂದಿನ ಕ್ಷಣಿಕ ರಾಜಕೀಯ ಲಾಭಕ್ಕಾಗಿ, ನಾಳಿನ ಕರ್ನಾಟಕದ ಭವಿಷ್ಯ ಬಲಿ ಕೊಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಸ್ವಯಂಘೋಷಿತ ಆರ್ಥಿಕ ತಜ್ಞ, ಸಿಎಂ ಸಿದ್ದರಾಮಯ್ಯ ಅವರ ದುರಾಡಳಿತ ಮತ್ತು ತಪ್ಪು ಹಣಕಾಸಿನ ನಿರ್ವಹಣೆಯಿಂದ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಯಾವ ಅಧೋಗತಿಗೆ ತಲುಪುತ್ತಿದೆ ಎನ್ನುವುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ ಎಂದು ಹೇಳಿದ್ದಾರೆ. ಇದೇ ವೇಳೆ ವರದಿಯ ಪ್ರಮುಖಾಂಶಗಳನ್ನು ಉಲ್ಲೇಖಿಸಿದ್ದಾರೆ.
ವಿತ್ತೀಯ ಕೊರತೆ ಭಾರೀ ಏರಿಕೆ
2022–23ರಲ್ಲಿ ರೂ.46,623 ಕೋಟಿ ಇದ್ದ ವಿತ್ತೀಯ ಕೊರತೆ, 2023–24ರಲ್ಲಿ ರೂ.65,522 ಕೋಟಿಗೆ ಏರಿದೆ. ಏರುತ್ತಿರುವ ಈ ವಿತ್ತೀಯ ಕೊರತೆ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಅವೈಜ್ಞಾನಿಕ ಗ್ಯಾರೆಂಟಿಗಳು ಕರ್ನಾಟಕವನ್ನು ಹೇಗೆ ದಿವಾಳಿತನದತ್ತ ತಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಸಾಲದ ಕುಣಿಕೆ ಬಿಗಿಯಾಗುತ್ತಿದೆ
ಕಾಂಗ್ರೆಸ್ ಸರ್ಕಾರವು ಮಾರುಕಟ್ಟೆಯಿಂದ ರೂ.63,000 ಕೋಟಿ ಸಾಲ ಪಡೆದಿದ್ದು, ಇದು ಕಳೆದ ವರ್ಷಕ್ಕಿಂತ ರೂ.37,000 ಕೋಟಿ ಹೆಚ್ಚು. ಇದು ಮುಂದಿನ ತಲೆಮಾರಿನ ಮೇಲೆ ಭಾರಿ ಬಡ್ಡಿ ಹೊರೆ ಹಾಕುತ್ತದೆ ಎಂದು ಸಿಎಜಿ ವರದಿ ಎಚ್ಚರಿಕೆ ನೀಡಿದೆ.
ಮೂಲಸೌಕರ್ಯ ಹೂಡಿಕೆ ಕುಸಿತ
ರಸ್ತೆ, ನೀರಾವರಿ, ಮೂಲಸೌಕರ್ಯ ಹೂಡಿಕೆಯಲ್ಲಿ ₹5,229 ಕೋಟಿ ಕಡಿತವಾಗಿದ್ದು, ಇದರಿಂದ ಅಪೂರ್ಣ ಯೋಜನೆಗಳು 68% ಏರಿಕೆ ಕಂಡಿವೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ರಾಜ್ಯದ ಭವಿಷ್ಯವೇ ಅಪಾಯದಲ್ಲಿದೆ ಎಂದು ಎಚ್ಚರಿಕೆ ನೀಡಿದೆ.
ಮತ್ತೊಮ್ಮೆ ಆದಾಯ ಕೊರತೆಯ ಕಡೆಗೆ
ಹಿಂದಿನ ಬಿಜೆಪಿ ಸರ್ಕಾರದ ಸಮರ್ಪಕ ಆಡಳಿತ ಮತ್ತು ಹಣಕಾಸಿನ ನಿರ್ವಹಣೆಯಿಂದ ಕೋವಿಡ್ ನಂತರ 2022–23ರಲ್ಲಿ ಚೇತರಿಸಿಕೊಂಡಿದ್ದ ಕರ್ನಾಟಕ, 2023–24ರಲ್ಲಿ ಮತ್ತೊಮ್ಮೆ ರೂ.9,271 ಕೋಟಿ ಆದಾಯ ಕೊರತೆಯ ಸುಳಿಗೆ ಸಿಕ್ಕಿದೆ. ಇದು ಕಾಂಗ್ರೆಸ್‌ನ ಅವೈಜ್ಞಾನಿಕ ಗ್ಯಾರೆಂಟಿಗಳು ಮತ್ತು ಹಣಕಾಸಿನ ತಪ್ಪು ನಿರ್ವಹಣೆಯ ನೇರ ಪರಿಣಾಮ.
ಅವೈಜ್ಞಾನಿಕ ಗ್ಯಾರೆಂಟಿಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತ
ಒಂದು ವರ್ಷದಲ್ಲಿ ಐದು ಗ್ಯಾರೆಂಟಿಗಳಿಗೆ ರೂ.36,538 ಕೋಟಿ, ಅಂದರೆ ರಾಜ್ಯದ ಒಟ್ಟು ಆದಾಯ ವೆಚ್ಚದ ಶೇ.15 ರಷ್ಟು ವ್ಯಯ ಮಾಡಲಾಗಿದ್ದು, ಇದರ ಜೊತೆಗೆ, ರೂ.60,774 ಕೋಟಿ ಸಬ್ಸಿಡಿ ಬಿಲ್ ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಆವರಿಸಿರುವ ಅಭಿವೃದ್ಧಿ ಶೂನ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
CAGನ ತೀಕ್ಷ್ಣ ಎಚ್ಚರಿಕೆ
ವಿತ್ತೀಯ ಕೊರತೆಯನ್ನು ತಕ್ಷಣ ನಿಯಂತ್ರಿಸದಿದ್ದರೆ, ರಾಜ್ಯದ ಆರ್ಥಿಕತೆ ಇನ್ನಷ್ಟು ಹಿಂದುಳಿಯುತ್ತದೆ, ಸಾಲದ ಒತ್ತಡ ಹೆಚ್ಚುತ್ತದೆ, ಅಭಿವೃದ್ಧಿ ಕುಸಿಯುತ್ತದೆ. ಇಂದಿನ ಗ್ಯಾರೆಂಟಿ ಯೋಜನೆಗಳು ಭವಿಷ್ಯದ ಕಗ್ಗತ್ತಲಿನ ಗ್ಯಾರೆಂಟಿ ಎಂದು CAG ಎಚ್ಚರಿಸಿದೆ.
ಇದು ಸ್ವಯಂ ಘೋಷಿತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರ ಕಾರ್ಯವೈಖರಿ. ಕಾಂಗ್ರೆಸ್ ಸರ್ಕಾರದ "ಕರ್ನಾಟಕ ಮಾಡೆಲ್". ನೆನಪಿರಲಿ, ಯಾರು ಎಷ್ಟು ಬಜೆಟ್ ಗಳನ್ನ ಮಂಡಿಸಿ ದಾಖಲೆ ಸೃಷ್ಟಿಸಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿ, ಆ ಬಜೆಟ್ ಗಳು ರಾಜ್ಯದ ಅಭಿವೃದ್ಧಿಗೆ, ದೀರ್ಘಕಾಲೀನ ಬೆಳವಣಿಗೆಗೆ ಎಷ್ಟು ಕೊಡುಗೆ ಕೊಟ್ಟಿದೆ ಎನ್ನುವುದನ್ನ ಇತಿಹಾಸ ದಾಖಲಿಸಿ ನೆನಪಿಟ್ಟುಕೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕರ್ನಾಟಕ ಆರ್ಥಿಕ ದಿವಾಳಿತನದಿಂದ ಚೇತರಿಸಿಕೊಳ್ಳಲಾಗದ ಸಾಲದ ಸುಳಿಗೆ ಸಿಲುಕಿ ಶಾಶ್ವತವಾದ ಅಭಿವೃದ್ಧಿ ಶೂನ್ಯತೆ ಎದುರಿಸುವುದು ಮಾತ್ರ ಗ್ಯಾರೆಂಟಿ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



