ರಾಜಕೀಯ

ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ: ಸಂಪ್ರದಾಯ ಮುರಿದು ಸಂಭ್ರಮಾಚರಣೆಗೆ ಸಿದ್ದರಾಮಯ್ಯ ಬ್ರೇಕ್; ಆಡಳಿತ ಯಂತ್ರಕ್ಕೆ ಚುರುಕು!

ಹಿಂದಿನ ಸಂಪ್ರದಾಯವನ್ನು ಮುರಿದಿರುವ ಸಿದ್ದರಾಮಯ್ಯ ಅವರು ಮೇ 21 ಮತ್ತು 22 ಕ್ಕೆ ಯಾವುದೇ ಸಂಭ್ರಮಾಚರಣೆ ಮಾಡದೆ, ಸಂಪೂರ್ಣವಾಗಿ ಆಡಳಿತವನ್ನು ಸುಗಮಗೊಳಿಸುವತ್ತ ಗಮನಹರಿಸಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ: ಸಂಪ್ರದಾಯ ಮುರಿದು ಸಂಭ್ರಮಾಚರಣೆಗೆ ಸಿದ್ದರಾಮಯ್ಯ ಬ್ರೇಕ್; ಆಡಳಿತ ಯಂತ್ರಕ್ಕೆ ಚುರುಕು!
ಸಿಎಂ ಸಿದ್ದರಾಮಯ್ಯ
Published On :

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೇ 21-22ಕ್ಕೆ ಎರಡು ವರ್ಷ ಪೂರೈಸುತ್ತಿದೆ. ಇದ್ ವೇಳೆ, ಯಾವುದೇ ಅದ್ಧೂರಿ ಆಚರಣೆಗಳು, ಅಭಿನಂದನಾ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬದಲಾಗಿ, ಅವರು ಎರಡು ದಿನಗಳ ಕಾಲ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಅಧಿಕಾರಿಗಳ ಜೊತೆ ಮ್ಯಾರಥಾನ್ ಸಭೆ ನಡೆಸಲಿದ್ದಾರೆ. ಹಿಂದಿನ ಸಂಪ್ರದಾಯವನ್ನು ಮುರಿದಿರುವ ಸಿದ್ದರಾಮಯ್ಯ ಅವರು ಮೇ 21 ಮತ್ತು 22 ಕ್ಕೆ ಯಾವುದೇ ಸಂಭ್ರಮಾಚರಣೆ ಮಾಡದೆ, ಸಂಪೂರ್ಣವಾಗಿ ಆಡಳಿತವನ್ನು ಸುಗಮಗೊಳಿಸುವತ್ತ ಗಮನಹರಿಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಉನ್ನತ ಅಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ಜಿಲ್ಲಾ ಮಟ್ಟದ ಆಡಳಿತವನ್ನು ಬಿಗಿಗೊಳಿಸಲು ಮತ್ತು ಸಾರ್ವಜನಿಕ ಸೇವೆಗಳ ವಿತರಣೆಯನ್ನು ವೇಗಗೊಳಿಸಲು ಸಿದ್ದರಾಮಯ್ಯ ಮ್ಯಾರಥಾನ್ ಪರಿಶೀಲನೆ ನಡೆಸಲಿದ್ದಾರೆ.

ಸರ್ಕಾರಗಳು 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸುವುದು ವಾಡಿಕೆಯಾಗಿತ್ತು, ಆದರೆ ಇಂತಹ ಸಂಭ್ರಮಾಚರಣೆಗಳು ರಾಜಕೀಯ ದುರಾದೃಷ್ಟಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಎಚ್ಚರದಿಂದ ಹೆಜ್ಜೆ ಇಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಎರಡು ವರ್ಷದ ಸಂಭ್ರಮದ “ಸಾಧನೆಯ ಹಾದಿಯಲ್ಲಿ” ಸಂಭ್ರಮಾಚರಣೆಯ ನಂತರ ಅವರು ಸಿಎಂ ಹುದ್ದೆಯಿಂದ ನಿರ್ಗಮಿಸಿದರು, ಅದಾದ ನಂತರ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸರ್ಕಾರದ ಎರಡನೇ ವಾರ್ಷಿಕೋತ್ಸವದ ದಿನದ ಸಂಜೆ ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಬೇಕಾಯಿತು ಎಂಬುದನ್ನು ರಾಜಕೀಯ ವೀಕ್ಷಕರು ನೆನಪಿಸಿಕೊಳ್ಳುತ್ತಾರೆ. ಆದರೆ ಸಿದ್ದರಾಮಯ್ಯ ಅವರಿಗೆ ವಿಧಿಯ ಜೊತೆ ಆಟವಾಡುವ ಮೂಡ್ ಇಲ್ಲ ಎಂದು ಹೇಳಲಾಗುತ್ತಿದೆ.

"ಆಚರಣೆಗೆ ಸಮಯವಿಲ್ಲ. ಜನರು ಶೀಘ್ರವಾಗಿ ಕೆಲಸ ಮಾಡುವುದುನ್ನು ಬಯಸುತ್ತಾರೆಯೇ ಹೊರತು, ನಾಟಕವಲ್ಲ" ಎಂದು ಅವರು ತಮ್ಮ ತಂಡಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅವರ ಸಂದೇಶ ಸ್ಪಷ್ಟವಾಗಿದೆ: ಇದು ಕೆಲಸ ಮಾಡುವ ಸಮಯ, ಸಂಭ್ರಮಾಚರಣೆಗಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಡಿಸೆಂಬರ್‌ನಲ್ಲಿ ಡಿಸಿ ಮತ್ತು ಸಿಇಒಗಳೊಂದಿಗಿನ ಕೊನೆಯ ಸಭೆ ನಡೆದಿತ್ತು ಎಂದು ಸಿಎಂಒ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.