ರಾಜಕೀಯ

ಸಿಎಂ ತಪ್ಪು ಮಾಡಿಲ್ಲ, ಇದೊಂದು ಷಡ್ಯಂತ್ರ: ಸಿದ್ದರಾಮಯ್ಯ ಬೆನ್ನಿಗೆ ನಿಂತ 'ಕೈ' ಪಡೆ

ಈ ಹಂತದಲ್ಲಿ ಯಾವುದೇ ಬದಲಾವಣೆಗೆ ಹೈಕಮಾಂಡ್ ಸಿದ್ಧವಾಗಿಲ್ಲ. ಬದಲಾವಣೆಗೆ ಮುಂದಾದರೆ ಇದು ಪಕ್ಷದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಸಿಎಂ ತಪ್ಪು ಮಾಡಿಲ್ಲ, ಇದೊಂದು ಷಡ್ಯಂತ್ರ: ಸಿದ್ದರಾಮಯ್ಯ ಬೆನ್ನಿಗೆ ನಿಂತ 'ಕೈ' ಪಡೆ
ಸಿದ್ದರಾಮಯ್ಯ
Published On :

ಬೆಂಗಳೂರು: ಮುಡಾ ಹಗರಣ ಪ್ರಕರಣದ ರಿಟ್ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ ಹೊರತಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಲು ಕಾಂಗ್ರೆಸ್‌ ನಾಯಕರು ತೀರ್ಮಾನಿಸಿದ್ದಾರೆ.

ಆದರೆ, ತನಿಖೆಯ ಭಾಗವಾಗಿ ಎಫ್‌ಐಆರ್ ದಾಖಲಾಗಿದ್ದೇ ಆದರೆ, ಈ ಬೆಂಬಲ ಇದೇ ರೀತಿ ಮುಂದುವರೆಯುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಹಂತದಲ್ಲಿ ಯಾವುದೇ ಬದಲಾವಣೆಗೆ ಹೈಕಮಾಂಡ್ ಸಿದ್ಧವಾಗಿಲ್ಲ. ಬದಲಾವಣೆಗೆ ಮುಂದಾದರೆ ಇದು ಪಕ್ಷದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಈ ನಡುವೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದು, ಇದು ದೊಡ್ಡ ಷಡ್ಯಂತ್ರವಾಗಿದೆ ಎಂದು ಹೇಳಿದ್ದಾರೆ.

ದೆಹಲಿಯಿಂದ ಗ್ರಾಮ ಮಟ್ಟದವರೆಗೆ ಇಡೀ ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತದೆ. ನಮ್ಮ ಸಿಎಂ ಯಾವುದೇ ತಪ್ಪು ಮಾಡಿಲ್ಲ, ಶೀಘ್ರದಲ್ಲೇ ದೋಷಮುಕ್ತರಾಗುತ್ತಾರೆಂದು ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಬಿಜೆಪಿಯವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ, ಕೇಸು ದಾಖಲಿಸಿ ಜೈಲಿಗೆ ಹಾಕಿದ ರೀತಿಯಲ್ಲಿಯೇ ನಮ್ಮ ಸಿಎಂ ವಿರುದ್ಧವೂ ಸಂಚು ರೂಪಿಸುತ್ತಿದ್ದಾರೆ, ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಕಾನೂನು ಸಚಿವ ಎಚ್‌ಕೆ ಪಾಟೀಲ್ ಅವರು ಮಾತನಾಡಿ, ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಮುಡಾ ಪ್ರಕರಣದ ತನಿಖೆಗೆ ಹೈಕೋರ್ಟ್ ಆದೇಶ ನೀಡಿರುವುದು ಕಾನೂನು ಕ್ರಮವಲ್ಲ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಬಿಜೆಪಿ ಬಳಿ ರಾಜ್ಯಪಾಲರು, ಸಿಬಿಐ, ಐಟಿ ಇಲಾಖೆ, ಇಡಿ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇದ್ದರೆ, ಕಾಂಗ್ರೆಸ್ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವಿದೆ ಎಂದು ತಿಳಿಸಿದರು.

ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಏನೇಲ್ಲ ಆಗಿದೆ? ದೆಹಲಿ, ಜಾರ್ಖಂಡ್ ಕೇಸ್‌ನಲ್ಲಿ ಏನಾಯಿತು? ಸುಪ್ರೀಂ ಕೋರ್ಟ್ ಛೀಮಾರಿ ಹಾಕಿಲ್ವಾ? ಇವರಿಗೆ ರಾಜೀನಾಮೆ ಕೇಳುವ ನೈತಿಕತೆ ಇದಿಯಾ? ಆಪರೇಷನ್ ಕಮಲ, ಹೆಣದ ಮೇಲೆ, ಕಸದ ಮೇಲೆ ಹಣ ಮಾಡೊದು ಇವರು. ದಲಿತರ ಮೇಲೆ ದೌರ್ಜನ್ಯ ಮಾಡುವುದು ಇವರು ಎಂದು ಕಿಡಿಕಾರಿದರು.

ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿಜಯೇಂದ್ರ ಮೊದಲು ರಾಜೀನಾಮೆ ನೀಡಬೇಕಾಗುತ್ತದೆ. ಅವರ ತಂದೆ ಮೇಲೆ ಪೋಕ್ಸೋ ಕೇಸ್ ಇದೆ. ಅವರು ರಾಜೀನಾಮೆ ಕೊಡಬೇಕು. ತನಿಖಾ ಸಂಸ್ಥೆಗಳು ಸಿಎಂ ಸಿದ್ದರಾಮಯ್ಯ ಹೆಸರು ಹೇಳುವಂತೆ ಒತ್ತಾಯ ಮಾಡಿಲ್ವಾ? ನಾವು ಎರಡು ನ್ಯಾಯಲಯಕ್ಕೆ ಹೋಗಲು ತಯಾರಿದ್ದೇವೆ. ಸುಪ್ರೀಂ ಕೋರ್ಟ್ ಮತ್ತು ಜನತಾ ನ್ಯಾಯಾಲಯಕ್ಕೆ ಹೋಗಲು ತಯಾರಿದ್ದೇವೆ ಎಂದು ಹೇಳಿದರು.

ಮತ್ತೋರ್ವ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ, ಯಾವುದೇ ಪತ್ರಕ್ಕೆ ಸಹಿ ಹಾಕಿಲ್ಲ. ನಾವು ಕಾನೂನು ಹೋರಾಟ ನಡೆಸುತ್ತೇವೆ. ಸಿದ್ದರಾಮಯ್ಯ ಅವರ ವಿರುದ್ಧದ ಆರೋಪ ರಾಜಕೀಯ ಪ್ರೇರಿತವಾಗಿದ್ದು, ಇಡೀ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದರು.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಹೈಕೋರ್ಟ್‌ ಆದೇಶವು ಪ್ರಾಥಮಿಕ ತನಿಖೆಗೆ ಮಾತ್ರ ಸಂಬಂಧಿಸಿದ್ದು, ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು ಎಂದು ತಿಳಿಸಿದರು.

ಏತನ್ಮಧ್ಯೆ, ಹೈಕೋರ್ಟ್ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲವು ದಲಿತ ಮುಖಂಡರು ಬೆಂಗಳೂರಿನಲ್ಲಿ ಗೈರುಹಾಜರಾಗಿರುವುದು ಎದ್ದು ಕಾಣುತ್ತಿತ್ತು.

ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು, ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದಾಗ ಯಾವ ದಲಿತ ಮುಖಂಡರೂ ಹಾಜರಿರಲಿಲ್ಲ. ಮುನಿಯಪ್ಪ ಮತ್ತು ಪ್ರಿಯಾಂಕ್ ದೆಹಲಿಯಲ್ಲಿದ್ದರೆ, ಡಾ ಪರಮೇಶ್ವರ ಅವರು ತಿರುವನಂತಪುರಂನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.