'ಯೋಗೇಶ್ವರ್ ರೈತರಿಗಾಗಿ ಕೆರೆ ತುಂಬಿಸಿದರು, ದಳದವರು ಕಣ್ಣೀರಿನಿಂದ ಕೆರೆ ತುಂಬಿಸುತ್ತಿದ್ದಾರೆ; ನಿಖಿಲ್ ಸೋತ ಕಾರಣಕ್ಕೆ HDK ಕೇಂದ್ರ ಮಂತ್ರಿಯಾಗಿದ್ದು'
ಕುಮಾರಸ್ವಾಮಿಯವರು ಎಲ್ಲರನ್ನು ಬ್ರದರ್ ಬ್ರದರ್ ಎಂದು ಕರೆಯುತ್ತಾರೆ. ಅದಕ್ಕೆ ರಾಮನಗರದ ಮುಖಂಡರೊಬ್ಬರು ಹೇಳಿದರು. ಕ್ಷೇತ್ರದಲ್ಲಿ ಯಾರ ಹೆಸರು ಗೊತ್ತಿಲ್ಲದ ಕಾರಣ ಅವರು ಬ್ರದರ್ ಎಂದು ಕರೆಯುತ್ತಾರೆ ಎಂದು ಕಾಲೆಳೆದರು.

ಚನ್ನಪಟ್ಟಣ: ರೈತರಿಗೆ, ಜನರಿಗೆ, ಜಾನುವಾರುಗಳಿಗೆ ಉಪಯೋಗವಾಗಲಿ ಎಂದು ಸಿ.ಪಿ.ಯೋಗೇಶ್ವರ್ ಅವರು ಕ್ಷೇತ್ರದ ಕೆರೆಗಳನ್ನು ತುಂಬಿಸಿದರು. ಬೇರೆಯವರು ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಕಣ್ಣೀರಿನಿಂದ ಕೆರೆಗಳನ್ನು ತುಂಬಿಸುತ್ತಿದ್ದಾರೆ" ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣದ ಬೇವೂರಿನಲ್ಲಿ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, "ಬಿಜೆಪಿ ಮತ್ತು ದಳದ ನಾಯಕರು ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಕ್ಷೇತ್ರದ ಉದ್ದಕ್ಕೂ ಪ್ರಚಾರ ಮಾಡುತ್ತಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದ ಜನ ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯ ಮಾಡಿದ್ದಾರೆಯೇ? ಇವರಿಗೆ ಅನ್ಯಾಯ ಮಾಡಿದವರು ಯಾರು? ಯಾರಿಗೆ ಅನ್ಯಾಯವಾಗಿದೆ ಎಂಬುದು ಜನರಿಗೆ ತಿಳಿದಿದೆ" ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ, ಚನ್ನಪಟ್ಟಣ ನಾಡು ಚಿನ್ನದ ನಾಡಾಗುತ್ತದೆ ಎಂದು ಕ್ಷೇತ್ರದ ಜನರು ದೂರದ ಬೆಟ್ಟ ನುಣ್ಣಗಿದೆ ಎಂದು ನಂಬಿದರು. ಇದರಿಂದ ರೈತರ ಬದುಕನ್ನು ಹಸನು ಮಾಡಿದ, ಕೆರೆಗಳನ್ನು ತುಂಬಿಸಿದ ಯೋಗೀಶ್ವರ್ ಅವರಿಗೆ ಅನ್ಯಾಯವಾಗಿದೆ" ಎಂದರು.
ನಿಮ್ಮ ಕಣ್ಣೀರನ್ನು ಒರೆಸಬೇಕು ಎಂದುಕೊಂಡಿದ್ದ ಯೋಗೇಶ್ವರ್ ಅವರಿಗೆ ಎರಡು ಬಾರಿ ಅನ್ಯಾಯವಾಗಿದೆ. ನಾವು ರೈತರಿಗೆ ಕರೆಂಟ್ ಕೊಟ್ಟೆವು. ನಮ್ಮ ಮುಖಂಡರು ಚನ್ನಪಟ್ಟಣ ಇಷ್ಟೊಂದು ಹಸಿರಾಗಿದೆಯಲ್ಲ ಎಂದು ಕೇಳಿದರು. ಅದಕ್ಕೆ ನಾನು ಇದು ಯೋಗೇಶ್ವರ್ ಕೊಡುಗೆ ಎಂದು ಹೇಳಿದೆ ಎಂದರು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಭಾವನಾತ್ಮಕವಾಗಿ ಕುಮಾರಸ್ವಾಮಿಯವರು ಮಾತನಾಡಿ ಲೋಕಸಭಾ ಚುನಾವಣೆ ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಹಾಗಾದರೆ ಇಲ್ಲಿ ಯಾರಿಗೆ ಅನ್ಯಾಯವಾಗಿದೆ. ನಿಖಿಲ್ ಕುಮಾರಸ್ವಾಮಿ ಸೋತ ಕಾರಣಕ್ಕೆ ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿದ್ದಾರೆ" ಎಂದರು. ರಾಮನಗರ ಜಿಲ್ಲೆಯ ಜನರು ದೇವೇಗೌಡರು, ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಅವರಿಗೆ ಅನ್ಯಾಯ ಮಾಡಿಲ್ಲ. ಅನ್ಯಾಯವಾಗಿರುವುದು ಮನೆ ಮಗ ಯೋಗೇಶ್ವರ್ ಅವರಿಗೆ. ಇವರು ಸತ್ತರೆ ಮಣ್ಣು ಮಾಡುವುದು ಚನ್ನಪಟ್ಟಣದ ಚಕ್ಕೆರೆಯಲ್ಲಿ" ಎಂದರು.
ಬಿಜೆಪಿ ಮುಖ್ಯ ಜನತಾ ದಳದವರು ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಆರೋಪಿಯನ್ನಾಗಿಸಬೇಕು ಎಂದು ಪ್ರಯತ್ನ ಪಡುತ್ತಿವೆ. ಈ ಎಲ್ಲಾ ಆರೋಪಗಳಿಗೆ ಚನ್ನಪಟ್ಟಣ ತಾಲೂಕಿನ ಜನತೆ ಕಾಂಗ್ರೆಸ್ ಗೆ ಮತ ನೀಡಿ ಉತ್ತರ ನೀಡಬೇಕು ಎಂದು ಮನವಿ ಮಾಡುತ್ತೇನೆ" ಎಂದು ಹೇಳಿದರು. ತಮ್ಮ ಭಾಷಣದ ಮಧ್ಯೆ ಚುನಾವಣೆ ವ್ಯವಸ್ಥೆ ಬಗ್ಗೆ ಕುಮಾರಸ್ವಾಮಿಯವರು ವಿಧಾನಸಭೆಯಲ್ಲಿ ಆಡಿದ ಮಾತಿನ ಆಡಿಯೋವನ್ನು ಸಭಿಕರಿಗೆ ಕೇಳಿಸಿದ ಡಿಕೆ ಸುರೇಶ್ ಅವರು ಕುಮಾರಸ್ವಾಮಿ ಅವರ ಧೋರಣೆ ಬಗ್ಗೆ ವ್ಯಂಗ್ಯವಾಡಿದರು.
ಕ್ಷೇತ್ರದಲ್ಲಿ ಐದು ವರ್ಷ ಕೆಲಸ ಮಾಡಿ ಚುನಾವಣೆ ಗೆಲ್ಲೋದು ಕಷ್ಟ. ಚುನಾವಣೆಗೆ ಒಂದು ವಾರ ಹತ್ತು ದಿನ ಇದೆ ಎನ್ನುವಾಗ ಈಗಿನ ಚುನಾವಣಾ ಪದ್ದತಿಗೆ ತಕ್ಕಂತೆ ತಯಾರಾಗಿ ಹೋಗಿ ಕೆಲಸ ಮಾಡಿದರೆ ಚುನಾವಣೆ ಗೆಲ್ಲಬಹುದು ಎಂದು ಚನ್ನಪಟ್ಟಣ ಜನರ ಮತವನ್ನು ಪಡೆದು ಕಾಣೆಯಾಗಿರುವ ಕುಮಾರಸ್ವಾಮಿ ಅವರ ಮಾತುಗಳು. ಇದು ಡಿಕೆ ಸುರೇಶ್ ಅಥವಾ ಡಿಕೆ ಸಹೋದರರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪವಲ್ಲ" ಎಂದು ಹೇಳಿದರು. ಅಧಿಕಾರದಲ್ಲಿ ಇದ್ದಾಗ ನಿಮ್ಮ ಕಷ್ಟ ಕೇಳಿದವರು ಈಗ ನಿಮ್ಮ ಊರುಗಳನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿ ಮತ್ತು ದೇವೇಗೌಡರು ಚುನಾವಣೆ ಬಂದಾಗ ಬರುತ್ತಿದ್ದಾರೆ" ಎಂದರು. ಈಗ ಊರು, ರಸ್ತೆ ಎಂದು ಕೇಳುತ್ತಿದ್ದಾರೆ
ವಿಪರ್ಯಾಸವೆಂದರೆ, ಚನ್ನಪಟ್ಟಣದಿಂದ ಆರುವರೆ ವರ್ಷಗಳ ಕಾಲ ಶಾಸಕರಾಗಿದ್ದ ಕುಮಾರಸ್ವಾಮಿಯವರು ಈ ಊರು ಯಾವುದು, ಈ ರಸ್ತೆ ಎಲ್ಲಿಗೆ ಹೋಗುತ್ತದೆ, ಈ ಮುಖಂಡ ಯಾರು ಎಂದು ಕೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ" ಎಂದು ಹೇಳಿದರು. ಕುಮಾರಸ್ವಾಮಿಯವರು ಎಲ್ಲರನ್ನು ಬ್ರದರ್ ಬ್ರದರ್ ಎಂದು ಕರೆಯುತ್ತಾರೆ. ಅದಕ್ಕೆ ರಾಮನಗರದ ಮುಖಂಡರೊಬ್ಬರು ಹೇಳಿದರು. ಕ್ಷೇತ್ರದಲ್ಲಿ ಯಾರ ಹೆಸರು ಗೊತ್ತಿಲ್ಲದ ಕಾರಣ ಅವರು ಬ್ರದರ್ ಎಂದು ಕರೆಯುತ್ತಾರೆ ಎಂದು" ಕಾಲೆಳೆದರು. "ಕುಮಾರಸ್ವಾಮಿ ಅವರು ನಾಲ್ಕು ತಿಂಗಳ ಹಿಂದೆ ರಾಜೀನಾಮೆ ಕೊಟ್ಟ ನಂತರ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಸುಮಾರು 500 ಕೋಟಿಗಳಷ್ಟು ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಸತ್ತೇಗಾಲ ಯೋಜನೆ ನನ್ನ ನೇತೃತ್ವದಲ್ಲಿ ಆಗಿದೆ. ಮುಂದಿನ ಒಂದು ವರ್ಷದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು" ಎಂದು ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



