ರಾಜಕೀಯ

ಗಾಯತ್ರಿ ಸಿದ್ದೇಶ್ವರ ಅಡುಗೆ ಮಾಡಲಷ್ಟೇ ಲಾಯಕ್ಕು: ಶಾಮನೂರು ಶಿವಶಂಕರಪ್ಪ ಹೇಳಿಕೆ, ವ್ಯಾಪಕ ಟೀಕೆ

‘ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕೇವಲ ಅಡುಗೆ ಮಾಡಲಷ್ಟೇ ಲಾಯಕ್ಕು’ ಎಂದು ಹೇಳುವ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ವಿವಾದ ಸೃಷ್ಟಿಸಿದ್ದಾರೆ. ಶಿವಶಂಕರಪ್ಪ ಅವರ ಹೇಳಿಕೆಗೆ ವಿವಿಧ ವಲಯಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಗಾಯತ್ರಿ ಸಿದ್ದೇಶ್ವರ ಅಡುಗೆ ಮಾಡಲಷ್ಟೇ ಲಾಯಕ್ಕು: ಶಾಮನೂರು ಶಿವಶಂಕರಪ್ಪ ಹೇಳಿಕೆ, ವ್ಯಾಪಕ ಟೀಕೆ
ಗಾಯತ್ರಿ ಸಿದ್ದೇಶ್ವರ - ಶಾಮನೂರು ಶಿವಶಂಕರಪ್ಪ
Published On :

ದಾವಣಗೆರೆ: ‘ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕೇವಲ ಅಡುಗೆ ಮಾಡಲಷ್ಟೇ ಲಾಯಕ್ಕು’ ಎಂದು ಹೇಳುವ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ವಿವಾದ ಸೃಷ್ಟಿಸಿದ್ದಾರೆ. ಶಿವಶಂಕರಪ್ಪ ಅವರ ಹೇಳಿಕೆಗೆ ವಿವಿಧ ವಲಯಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಇತ್ತೀಚೆಗಷ್ಟೇ ಜಿಲ್ಲೆಯ ಬಂಟ್ಸ್ ಭವನದಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ ಅವರು, ಎದುರಾಳಿ ಅಭ್ಯರ್ಥಿಗೆ ಜನರ ಮಧ್ಯೆ ಮಾತನಾಡಲು ಸಹ ಬರುವುದಿಲ್ಲ. ಅವರು ಕೇವಲ ಅಡುಗೆ ಮಾಡಲು ಮಾತ್ರ ಲಾಯಕ್ಕು. ಲೋಕಸಭೆ ಚುನಾವಣೆಯಲ್ಲಿ ಜನಬೆಂಬಲ ಪಡೆಯುವ ಮುನ್ನ ಅವರು ದಾವಣಗೆರೆಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲಿ ಎಂದಿದ್ದರು.

ಮುಂದುವರಿದು, ಬಿಜೆಪಿ ಅಭ್ಯರ್ಥಿ ದಾವಣಗೆರೆಯಿಂದ ಗೆದ್ದು ಪ್ರಧಾನಿ ನರೇಂದ್ರ ಮೋದಿಗೆ ಕಮಲದ ಹೂವು ಅರ್ಪಿಸುತ್ತೇನೆ ಎನ್ನುತ್ತಿದ್ದಾರೆ. ಈ ಹಿಂದೆಯೂ ಗೆದ್ದಿದ್ದು ನೀವೆ (ಜಿಎಂ ಸಿದ್ದೇಶ್ವರ) ಅಲ್ಲವೇ? ಆಗ ಹೂವನ್ನು ಕಳುಹಿಸಿದ್ರಾ?. ಮೋದಿಗೆ ಹೂವನ್ನು ಕಳುಹಿಸಿದರೆ ಅಭಿವೃದ್ಧಿ ಆಗುವುದಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಕೇವಲ ಮೋದಿ ಮೋದಿ ಎನ್ನುವುದರಿಂದ ಅಭಿವೃದ್ಧಿಯಾಗಲ್ಲ ಎಂದು ಕಿಡಿಕಾರಿದ್ದರು.

ಗಾಯತ್ರಿ ಸಿದ್ದೇಶ್ವರ ತಿರುಗೇಟು

ಶಿವಶಂಕರಪ್ಪ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿರುವ ಗಾಯತ್ರಿ, ಶಾಮನೂರು ಶಿವಶಂಕರಪ್ಪ ಅವರು ತಮ್ಮ ಮಾತುಗಳಿಂದ ಮಹಿಳೆಯರನ್ನು ಅವಮಾನಿಸಿದ್ದಾರೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ. ಅವರು ಸಮರ್ಥವಾಗಿ ಅಧಿಕಾರವನ್ನು ನಡೆಸುತ್ತಾರೆ. ಇದು ‘ಅಜ್ಜ’ನಿಗೆ ತಿಳಿದಿಲ್ಲದಂತಿದೆ ಎಂದಿದ್ದರು.

'ಅಡುಗೆ ಮಾಡಿ ಕೈತುತ್ತು ಕೊಡುವ ಪ್ರೀತಿ ಅವರಿಗೆ ಗೊತ್ತಿಲ್ಲ. ಮಹಿಳೆ ಅಡುಗೆಯನ್ನೂ ಮಾಡುತ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ. ಮೋದಿ ಅವರು ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡುತ್ತಿದ್ದಾರೆ. ಆದರೆ, ಇಂತಹವರು ಮಹಿಳೆಯರಿಗೆ ಅಪಮಾನ ಮಾಡುತ್ತಾರೆ' ಎಂದು ಶಿವಶಂಕರಪ್ಪ ಅವರ ವಿರುದ್ಧ ಕಿಡಿಕಾರಿದ್ದಾರೆ.

ಸೈನಾ ನೆಹ್ವಾಲ್ ಕಿಡಿ

ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ವಿಶ್ವದ ನಂ 1 ಬ್ಯಾಡ್ಮಿಂಟನ್ ಮಾಜಿ ಆಟಗಾರ್ತಿ ಸೈನಾ ನೆಹ್ವಾಲ್, 'ಮಹಿಳೆಯನ್ನು ಅಡುಗೆಮನೆಗೆ ಸೀಮಿತಗೊಳಿಸಬೇಕು' ಎಂದು ಕರ್ನಾಟಕದ ಪ್ರಮುಖ ನಾಯಕರಾದ ಶಾಮನೂರು ಶಿವಶಂಕರಪ್ಪ ಜಿ ಹೇಳಿದ್ದಾರೆ. 'ಲಡ್ಕಿ ಹೂಂ, ಲಡ್ ಸಕ್ತಿ ಹೂಂ' (ನಾನು ಹುಡುಗಿ, ನಾನು ಹೋರಾಡಬಲ್ಲೆ) ಎಂದು ಹೇಳುವ ಪಕ್ಷದಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

2020ರಲ್ಲಿ ಬಿಜೆಪಿ ಸೇರಿದ ಸೈನಾ, ತಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸಿದಾಗ ಮತ್ತು ಕ್ರೀಡೆಯಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದಾಗ ಕಾಂಗ್ರೆಸ್ ಪಕ್ಷ ಏನು ಮಾಡಬೇಕೆಂದು ನಿರೀಕ್ಷಿಸಿತ್ತು ಎಂದು ಪ್ರಶ್ನಿಸಿದ್ದಾರೆ.

ಎಲ್ಲ ಯುವತಿಯರು ಮತ್ತು ಮಹಿಳೆಯರು ತಮಗಿಷ್ಟವಾದ ಯಾವುದೇ ಕ್ಷೇತ್ರದಲ್ಲಿ ದೊಡ್ಡದಾಗಿ ಸಾಧಿಸಬೇಕೆಂದು ಕನಸು ಕಾಣುತ್ತಿರುವಾಗ, ಮತ್ತೊಂದೆಡೆ ನಾವು 'ನಾರಿ ಶಕ್ತಿ ಕೋ ವಂದನ್' ಮಾಡುತ್ತಿರುವಾಗ ಮಹಿಳೆಯರ ಬಗ್ಗೆ ಈ ರೀತಿಯ ಹೇಳಿಕೆಯನ್ನು ನಿರೀಕ್ಷಿಸಲು ಸಾಧ್ಯವೇ?. ಇಂತಹ ಸ್ತ್ರೀದ್ವೇಷದ ಮಾತುಗಳು ಬೇಸರ ತರಿಸುತ್ತವೆ ಎಂದಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಯನ್ನು ನಮ್ಮ ಪ್ರಧಾನಿ ಮೋದಿ ನೇತೃತ್ವದಲ್ಲಿ ಅಂಗೀಕರಿಸಲಾಗಿದೆ ಮತ್ತು ಮತ್ತೊಂದೆಡೆ ನಾರಿ ಶಕ್ತಿಗೆ ಅಪಮಾನ ಮಾಡುವಂತೆ ಮತ್ತು ಸ್ತ್ರೀದ್ವೇಷದ ಜನರಿದ್ದಾರೆ. ನಿಜಕ್ಕೂ ಇದು ಬೇಸರ ತರಿಸುತ್ತದೆ ಎಂದು ಸೈನಾ ಪೋಸ್ಟ್ ಮಾಡಿದ್ದಾರೆ.

ಬಿಜೆಪಿ ನಾಯಕಿ ಶೈನಾ ಚುಡಸಾಮ ಮುನೋಟ್ ಪ್ರತಿಕ್ರಿಯಿಸಿ, 'ಭಾರತದ ಮಹಿಳೆಯರು ವಿಜ್ಞಾನ, ವಾಯುಯಾನ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಸಮರ್ಥರಾಗಿದ್ದಾರೆ. ಆದಾಗ್ಯೂ, ಶಿವಶಂಕರಪ್ಪ ಮತ್ತು ಕಾಂಗ್ರೆಸ್ ಪಕ್ಷವು ಮಹಿಳೆಯರನ್ನು ಒಂದು ಕಡೆಗೆ ಸೀಮಿತಗೊಳಿಸುತ್ತಿದೆ. 'ಲಡ್ಕಿ ಹೂಂ, ಲಡ್ ಸಕ್ತಿ ಹೂಂ' ನಂತಹ ಅಭಿಯಾನವನ್ನು ಕಾಂಗ್ರೆಸ್ ನಡೆಸಿತ್ತು. ಇದೀಗ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸೋನಿಯಾ ಗಾಂಧಿ ಏಕೆ ಮೌನವಾಗಿದ್ದಾರೆ? ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.