ಸಿಎಂ ಬದಲಾವಣೆ: ಸ್ವಾಮೀಜಿ ಹೇಳಿಕೆ ಹಿಂದೆ BJP ಕೈವಾಡ- ಸಚಿವ ಚಲುವರಾಯಸ್ವಾಮಿ
ಇದರಲ್ಲಿ ಯಾರದ್ದೋ ಕೈವಾಡ ಇರಬಹುದು. ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಸ್ಥಾನಗಳು ಹೆಚ್ಚಾಗಿವೆ. ಹಾಗಾಗಿ ಸದ್ಯದ ಪರಿಸ್ಥಿತಿಯ ಹಿಂದೆ ವಿರೋಧ ಪಕ್ಷಗಳ ಕೈವಾಡ ಇರಬಹುದು.

ಬೆಂಗಳೂರು: ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕೆಂಬ ವಿಚಾರ ಒಂದೆಡೆಯಾದರೆ, ಮತ್ತೊಂದೆಡೆ ಲಿಂಗಾಯತರು ಸಿಎಂ ಆಗಬೇಕೆಂಬ ಕೂಗೆದ್ದಿದೆ.
ಡಿ.ಕೆ.ಶಿವಕುಮಾರ್ಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂಬ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಹಾಗೂ ಲಿಂಗಾಯತರು ಸಿಎಂ ಆಗಬೇಕು ಎಂಬ ಶಿವಾಚಾರ್ಯ ಶ್ರೀಗಳ ಹೇಳಿಕೆಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಸ್ವಾಮೀಜಿಗಳ ಹೇಳಿಕೆಯ ಹಿಂದೆ ಬಿಜೆಪಿ ಕೈವಾಡ ಇರಬಹುದು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದರಲ್ಲಿ ಯಾರದ್ದೋ ಕೈವಾಡ ಇರಬಹುದು. ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಸ್ಥಾನಗಳು ಹೆಚ್ಚಾಗಿವೆ. ಹಾಗಾಗಿ ಸದ್ಯದ ಪರಿಸ್ಥಿತಿಯ ಹಿಂದೆ ವಿರೋಧ ಪಕ್ಷಗಳ ಕೈವಾಡ ಇರಬಹುದು ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಬೇಕು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಹಳ ಚೆನ್ನಾಗಿದ್ದಾರೆ. ಅವರಿಬ್ಬರ ನಡುವೆಯೂ ಹೊಂದಾಣಿಕೆಯೂ ಚೆನ್ನಾಗಿದೆ. ಹೈಕಮಾಂಡ್ ಸಹ ಅವರಿಬ್ಬರನ್ನು ಕೂರಿಸಿಕೊಂಡು ಚರ್ಚೆ ಮಾಡುತ್ತದೆ ಎಂದರು.
ಸಿಎಂ ಬದಲಾವಣೆ, ಹೆಚ್ಚುವರಿ ಡಿಸಿಎಂ ವಿಚಾರವಾಗಿ ಹೈಕಮಾಂಡ್ ಯಾವಾಗ ತೀರ್ಮಾನ ಮಾಡಬೇಕೋ ಆಗ ಮಾಡುತ್ತಾರೆ. ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ, ಹೇಳುವ ವೇದಿಕೆ ಅದಲ್ಲ ಎನ್ನುವ ಚರ್ಚೆಯಿದೆ. ಸ್ವಾಮೀಜಿಗಳಿಗೆ ಅಲ್ಲಿ ಇಲ್ಲಿ ಮಾತಾಡಿ ಎಂದು ನಾವು ನಿರ್ದೇಶನ ನೀಡಲು ಆಗುವುದಿಲ್ಲ.
ಸ್ವಾಮೀಜಿಗೆ ಅವರ ಭಾವನೆ ಹಾಗೆ ಬಂದಾಗ ಹೇಳಿದ್ದಾರೆ. ಚುನಾವಣೆಗೂ ಮುನ್ನ ಡಿಕೆಶಿ- ಸಿದ್ದರಾಮಯ್ಯ ಒಡೆದಾಡುತ್ತಾರೆ ಎಂದು ಬಿಜೆಪಿ ಅವರು ಹೇಳಿದ್ದರು. ಆದರೆ ಹಾಗೇನು ಆಗಿಲಿಲ್ಲವಲ್ಲ ಎಂದು ಬಿಜೆಪಿ ವಿರುದ್ಧವೂ ಕಿಡಿಕಾರಿದರು.
ಸಿಎಂ, ಡಿಸಿಎಂ ಬೆಂಬಲಿಗರುರು ಹೇಳಿಕೆ ಕೊಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದನ್ನು ಸಿಎಂ,ಡಿಸಿಎಂ ಅವರೇ ಬಗೆಹರಿಸಬೇಕು ಎಂದರು.
ಲಿಂಗಾಯತರು ಸಿಎಂ ಆಗಬೇಕು ಎಂಬ ಶಿವಾಚಾರ್ಯ ಶ್ರೀಗಳ ಹೇಳಿಕೆ ವಿಚಾರವಾಗಿ ಮಾತನಾಡಿ, ಇವೆಲ್ಲವನ್ನೂ ಸ್ವಾಮೀಜಿಗಳು ಪಬ್ಲಿಕ್ ನಲ್ಲಿ ಹೇಳುವ ಅವಶ್ಯಕತೆಯಿಲ್ಲ. ಕಾಂಗ್ರೆಸ್ ಹೈಕಮಾಂಡ್ ಬಳಿ ಮಾತಾನಾಡಬಹುದು.ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರ ಬಳಿಯೂ ಮಾತನಾಡಬಹುದು ಎಂದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಸ್ವಾಮೀಜಿಗಳ ಒತ್ತಾಯ ಹೊಸದೇನಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಹಕ್ಕಿದೆ. ಆದರೆ, ಸಿಎಂ ಸ್ಥಾನದ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಮತ್ತು ಶಾಸಕರು ನಿರ್ಧರಿಸಬೇಕು. ಪಕ್ಷದೊಳಗೆ ಎಲ್ಲವೂ ಚೆನ್ನಾಗಿದೆ ಎಂದು ಸಮರ್ಥಿಸಿಕೊಂಡರು.
ಈ ನಡುವೆ ಸಚಿವ ರಾಜಣ್ಣ ಅವರು ಸ್ವಾಮೀಜಿಗಳಿಗೆ ಸವಾಲು ಹಾಕಿ, ಹೇಳಿಕೆಯೊಂದನ್ನು ನೀಡಿದ್ದಾರೆ. ಸ್ವಾಮೀಜಿಯವರು ಈಗ ಅವರು ಇರುವ ಸ್ವಾಮೀಜಿ ಪಟ್ಟವನ್ನು ಬಿಟ್ಟುಕೊಡಲಿ, ನಾನು ಸ್ವಾಮೀಜಿ ಆಗುತ್ತೇನೆ, ಬಿಟ್ಟು ಕೊಡಲು ಅವರು ಸಿದ್ದರಿದ್ದಾರಾ? ನಾನು ಖಾವಿ ಬಟ್ಟೆ ಹಾಕಿಕೊಳ್ಳಲು ಸಿದ್ದ, ಅವರು ಖಾವಿ ಬಿಟ್ಟುಕೊಡಲು ಸಿದ್ದರಿದ್ದಾರಾ ಎಂದು ಪರೋಕ್ಷವಾಗಿ ಸ್ವಾಮೀಜಿಯವರನ್ನು ಪ್ರಶ್ನಿಸಿದ್ದಾರೆ.
ರಾಜಣ್ಣ ಅವರ ಸವಾಲಿಗೆ ಚಂದ್ರಶೇಖರನಾಥ ಸ್ವಾಮೀಜಿ ಏಕ ವಚನದಲ್ಲೇ ತಿರುಗೇಟು ನೀಡಿದ್ದಾರೆ. ಆತ್ಮಪೂರ್ತಿಯಾಗಿ ಮನೆಮಠ, ಹೆಂಡತಿ ಮಕ್ಕಳನ್ನು ಬಿಟ್ಟು ಬಂದರೆ, ಅವನಿಗೊಂದು ಮಠ ಮಾಡಿಕೊಡೋಣ, ಇದು ನಮ್ಮ ಜವಾಬ್ದಾರಿ. ಅವನು ರಾಜಣ್ಣ ಯಾವಾಗಲೂ ಕಿರಿಕಿರಿ, ಒಂದೂ ನೆಟ್ಟಗೆ ಮಾತನಾಡುವುದಿಲ್ಲ ಎಂದು ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ ಸವಾಲು ಹಾಕಿದ್ದಾರೆ.
ಸಚಿವ ರಾಜಣ್ಣ ಅವರ ಹೇಳಿಕೆಗೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿಯವರು ಕಿಡಿಕಾರಿದ್ದಾರೆ. ರಾಜಣ್ಣ ಹಿರಿಯ ನಾಯಕರು. ನಾನು ಅವರನ್ನು ಗೌರವಿಸುತ್ತೇನೆ ಆದರೆ ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




