ಬೆಲೆ ಏರಿಕೆ ಖಂಡಿಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ: ಪ್ರತಿಪಕ್ಷ ನಾಯಕ ಆರ್ ಅಶೋಕ್
ಬೆಲೆ ಏರಿಕೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಮಂಗಳವಾರ ಹೇಳಿದ್ದಾರೆ.

ಬೆಳಗಾವಿ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಕೆಎಂಎಫ್ ಹಾಲಿನ ದರ ಏರಿಕೆ ಮಾಡಿದ್ದು, ಇದಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಇನ್ನು ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು ಬೆಲೆ ಏರಿಕೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್, ಬೆಲೆ ಏರಿಕೆ ಖಂಡಿಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ಜುಲೈ 3 ಅಥವಾ 4ರಂದು ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರ ಒಂದು ರೀತಿಯ ಹುಚ್ಚರ ಸಂತೆಯಾಗಿದೆ. ಮೊನ್ನೆಯಷ್ಟೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದರು. ಈಗ ಹಾಲಿನ ದರ ಲೀಟರ್ಗೆ 2 ರೂಪಾಯಿ ಏರಿಕೆ ಮಾಡಿದ್ದಾರೆ. ಒಂದೇ ವರ್ಷದಲ್ಲಿ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿದ್ದಾರೆ. ಗ್ಯಾರಂಟಿಗೆ ಹಣ ಹೊಂದಿಸಲು ಆಗದೇ ಬೆಲೆ ಏರಿಕೆ ಮಾಡುತ್ತಿದೆ ಎಂದು ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ತುಘಲಕ್ ರೀತಿ ಸರ್ಕಾರವನ್ನು ನಡೆಸುತ್ತಿದೆ. ಈ ತಿಂಗಳು, ಮುಂದಿನ ತಿಂಗಳು ಸರ್ಕಾರದ ಬಳಿ ಹಣವೇ ಖಾಲಿಯಾಗಲಿದೆ. ಇದೇ ವೇಳೆ ವೇತನ ಪರಿಷ್ಕರಣೆ ಕೂಡ ಕ್ಯಾಬಿನೆಟ್ ಬಳಿ ಬಂದಿದೆ. ಐದಲ್ಲ ಐವತ್ತು ಗ್ಯಾರಂಟಿ ಕೊಡಿ, ಆದರೆ ವೈಜ್ಞಾನಿಕವಾಗಿ ಮಾಡಿ. ಚುನಾವಣೆಯಲ್ಲಿ ಜನ ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ. ಜನ ಇಷ್ಟು ಛೀಮಾರಿ ಹಾಕಿದ್ರೂ ನಿಮಗೆ ನಾಚಿಗೆ ಆಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿಲ್ಲ ಎಂದು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಯಾವುದೇ ಮುಂದಾಲೋಚನೆ ಇಲ್ಲದೆ ಅವೈಜ್ಞಾನಿಕವಾಗಿ ಗ್ಯಾರಂಟಿ ಜಾರಿಗೆ ತಂದು ಈಗ ಗ್ಯಾರಂಟಿಗೆ ಹಣ ಹೊಂದಿಸಲು ಆಗದೇ ಬೆಲೆ ಏರಿಕೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಒಂದು ರೂಪಾಯಿ ಜಾಸ್ತಿ ಮಾಡಿದಾಗ ಹೆಣದ ಮೆರವಣಿಗೆ ಮಾಡಿದ್ರಿ. ಸರ್ಕಾರ ದೀವಾಳಿಯಾಗಿದೆ, ಹಣ ಇಲ್ಲ. ಪಾಪಾರ್ ಆಗಿದೆ. ಸಂಬಳ ಕೊಡಲು ಹಣವಿಲ್ಲ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



