ರಾಜಕೀಯ

ಕಾವೇರಿ ಸರ್ವಪಕ್ಷ ಸಭೆಗೆ ಗೈರು; ಗೊಡಂಬಿ, ಬಾದಾಮಿ ತಿನ್ನೊಕೆ ಹೋಗಬೇಕಿತ್ತಾ? ಕುಮಾರಸ್ವಾಮಿ ಪ್ರತಿಕ್ರಿಯೆ

'ರೈತರ ನೆಪದಲ್ಲಿ ನಾಲೆಗೆ ನೀರು ಹರಿಸುವ ನೆಪದಲ್ಲಿ ತಮಿಳುನಾಡಿಗೆ ನೀರು ಹರಿಸಿದ್ದಾರೆ. ಈಗ ಸರ್ವಪಕ್ಷ ಸಭೆ ಕರೆದರೆ ಹೋಗಿ ಏನು ಮಾಡೋದು? ನಾನು ಸಭೆಯಲ್ಲಿ ಕೊಡುವ ಗೊಡಂಬಿ, ಬಾದಾಮಿ ತಿನ್ನಲಿಕ್ಕೆ ಹೋಗಬೇಕಿತ್ತಾ? ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ

ಕಾವೇರಿ ಸರ್ವಪಕ್ಷ ಸಭೆಗೆ ಗೈರು; ಗೊಡಂಬಿ, ಬಾದಾಮಿ ತಿನ್ನೊಕೆ ಹೋಗಬೇಕಿತ್ತಾ? ಕುಮಾರಸ್ವಾಮಿ ಪ್ರತಿಕ್ರಿಯೆ
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
Published On :

ನವದೆಹಲಿ: ತಮಿಳುನಾಡಿಗೆ ಈ ಮಾಸಾಂತ್ಯದವರೆಗೂ 1 ಟಿಎಂಸಿ ನೀರು ಬಿಡಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಹಿನ್ನೆಲೆಯಲ್ಲಿ ಭಾನುವಾರ ನಡೆದ ಸರ್ವಪಕ್ಷ ಸಭೆಗೆ ಮಂಡ್ಯದ ಸಂಸದರು ಆಗಿರುವ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್. ಡಿ. ಕುಮಾರಸ್ವಾಮಿ ಗೈರಾಗಿದ್ದರು.

ಈ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರೈತರ ನೆಪದಲ್ಲಿ ನಾಲೆಗೆ ನೀರು ಹರಿಸುವ ನೆಪದಲ್ಲಿ ತಮಿಳುನಾಡಿಗೆ ನೀರು ಹರಿಸಿದ್ದಾರೆ. ಈಗ ಸರ್ವಪಕ್ಷ ಸಭೆ ಕರೆದರೆ ಹೋಗಿ ಏನು ಮಾಡೋದು? ನಾನು ಸಭೆಯಲ್ಲಿ ಕೊಡುವ ಗೊಡಂಬಿ, ಬಾದಾಮಿ ತಿನ್ನಲಿಕ್ಕೆ ಹೋಗಬೇಕಿತ್ತಾ? ಎಂದು ಖಾರವಾಗಿ ಪ್ರಶ್ನಿಸಿದರು.

CWRC ಶಿಫಾರಸು ಹಿನ್ನಲೆ ಸರ್ವಪಕ್ಷ ಸಭೆ ಕರೆದಿದ್ದರು. ಯಾವ ವಿಚಾರ ಚರ್ಚಿಸಲು ಕರೆದಿದ್ದರು ಈ ಸಭೆಯನ್ನು? ಚರ್ಚೆಗೂ ಮುನ್ನವೇ ತಮಿಳುನಾಡಿಗೆ ನೀರು ಹರಿದು ಹೋಗಿದೆ. ಕಬಿನಿಯಿಂದ ನೀರು ಹರಿದಿದೆ. ಕೆಆರ್‌ಎಸ್ ನಿಂದ ರೈತರ ಹೆಸರಿನಲ್ಲಿ ತಮಿಳುನಾಡಿಗೆ ನೀರು ಹರಿಸಲಾಗಿದೆ. ನೀರು ಬಿಟ್ಟು ಕಾಟಾಚಾರಕ್ಕೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಸಭೆಯಲ್ಲಿ ಕೊಡುವ ಗೊಡಂಬಿ ಬಾದಾಮಿ ತಿನ್ನೊಕೆ ಹೋಗಬೇಕಿತ್ತಾ ನಾನು? ನೀರು ಬಿಟ್ಟಿದ್ದಕ್ಕೆ ಶಹಬ್ಬಾಸಗಿರಿ ಕೊಡಲು ಹೋಗಬೇಕಾಗಿತ್ತಾ? ಮಂಡ್ಯದಲ್ಲಿ ನಾನು ಜನತಾ ದರ್ಶನ ಮಾಡಿದರೆ ಅಧಿಕಾರಿಗಳು ಭಾಗಿಯಾಗಬಾರದು ಎಂದು ಆದೇಶ ಮಾಡಿದ್ದಾರೆ. ಅಧಿಕಾರಗಳ ಜತೆ ಸಭೆ ನಡೆಸಬಾರದು ಎಂದು ಆದೇಶದ ಮಾಡಿದ ಮೇಲೆ ನಮ್ಮಿಂದ ಏನು ಬಯಸ್ತಾರೆ ಇವರು? ಎಂದು ಗುಡುಗಿದರು.

ಪಾಂಡವಪುರದಲ್ಲಿ ಮತ ಕೊಟ್ಟ ಜನರಿಗೆ ಧನ್ಯವಾದ ಹೇಳಬೇಕಿತ್ತು. ಹೋಗಿದ್ದೆ. ಯಾವ ಸಂದರ್ಭದಲ್ಲಿ ಯಾವ ಕಾರ್ಯಕ್ರಮಕ್ಕೆ ಹೋಗಬೇಕು ಎಂಬುದು ನನಗೆ ಗೊತ್ತಿದೆ. ಇವರ ಅನುಮತಿ ಪಡೆಯಬೇಕಾ? ಏನಕ್ಕೆ ಸಭೆ ಮಾಡಿದ್ದೀರಿ? ಏನು ನಿರ್ಧಾರ ಮಾಡಿದ್ದೀರಿ? ಸಭೆ ಮಾಡಿದ ಮೇಲೂ ಕಡಿಮೆ ಪ್ರಮಾಣದ ನೀರು ಬಿಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕಿಡಿಕಾರಿದರು.

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಯಾವುದೇ ಕಾರ್ಯಕ್ರಮ ಮಾಡಿದರೂ ಪ್ರಾಮಾಣಿಕವಾಗಿ ಮಾಡುತ್ತೇವೆ. ಇವರ ಥರ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಅವರು ಎಷ್ಟು ಶಾಪ ಹಾಕ್ತಿದ್ದಾರೆ ಗೊತ್ತಿದೆ. ನಾನು ಕಾರ್ಪೋರೆಷನ್ ಕಸ ಎತ್ತಿದ್ದಿನಿ. ಸಿನಿಮಾ ಡಬ್ಬಾ ಹೊತ್ತಿದ್ದಿನಿ, ನಮ್ಮ ಕಾಲದಲ್ಲಿ ಸಿಡಿ ಇರಲಿಲ್ಲ. ಕಂಡ ಕಂಡ ಕೊಳ್ಳೆ ಹೊಡೆದು ಜೀವನ ಮಾಡಿಲ್ಲ. ಭಾನುವಾರವೂ ಸಭೆ ನಡೆಸಿ ನನ್ನ ವಿರುದ್ಧ ದಾಖಲೆ ಹುಡುಕುತ್ತಿದ್ದಾರೆ. ಸಣ್ಣ ಪುಟ್ಟ ಏನಾದರೂ ಸಿಗುತ್ತವಾ ಎಂದು ಹುಡುಕುತ್ತಿದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.