ನಾಯಕತ್ವ ವಿಚಾರದಲ್ಲಿ ಗೊಂದಲ ಸೃಷ್ಟಿಸದಂತೆ ಹೈಕಮಾಂಡ್ ಸೂಚನೆ: ಸಚಿವ ಕೆ.ಎನ್. ರಾಜಣ್ಣ
'ನಾಯಕತ್ವ ಬದಲಾವಣೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳಲಿದೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಬೇಕು, ಈ ವಿಷಯಗಳಲ್ಲಿ ಯಾವುದೇ ಗೊಂದಲ ಇರಬಾರದು ಎಂದು ನಾನು ಭಾವಿಸುತ್ತೇನೆ'

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಹೇಳಿಕೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆದೇಶವನ್ನು ಬಹಿರಂಗವಾಗಿ ಧಿಕ್ಕರಿಸಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ನಾಯಕತ್ವ ಬದಲಾವಣೆ ಸಂಬಂಧದ ಹೇಳಿಕೆ ಮೂಲಕ ಗೊಂದಲ ಸೃಷ್ಟಿಸದಂತೆ ಹೈಕಮಾಂಡ್ ಸೂಚಿಸಿದೆ ಎಂದು ಸೋಮವಾರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ''ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ, ಸಿಎಂ ಬದಲಾವಣೆ ಬಗ್ಗೆ ಯಾರೂ ಮಾತನಾಡಬಾರದು. ನಾಯಕತ್ವ ಬದಲಾವಣೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳಲಿದೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಬೇಕು, ಈ ವಿಷಯಗಳಲ್ಲಿ ಯಾವುದೇ ಗೊಂದಲ ಇರಬಾರದು ಎಂದು ನಾನು ಭಾವಿಸುತ್ತೇನೆ. ಎಲ್ಲೆಲ್ಲಿ ಬದಲಾವಣೆ ಬೇಕಿದೆಯೋ ಅಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಬಿಂಬಿಸಿ ಅವರ ಹೆಸರಿನಲ್ಲಿ ಸಮಾವೇಶ ಆಯೋಜನೆ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಅಂತಹ ಯಾವುದೇ ಸಮಾವೇಶವನ್ನು ಯೋಜಿಸುತ್ತಿಲ್ಲ.ಅಂತಹ ವಿಚಾರಗಳನ್ನು ನಂತರ ಹಂಚಿಕೊಳ್ಳುತ್ತೇನೆ ಎಂದು ಹೇಳಿದರು.
ಡಿಸಿಎಂ ಶಿವಕುಮಾರ್ ಸ್ಥಾನವನ್ನು ದುರ್ಬಲಗೊಳಿಸಲು ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಸಚಿವ ರಾಜಣ್ಣ ತೀವ್ರವಾಗಿ ಒತ್ತಾಯಿಸಿದ್ದರು. ಹಾಲಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಅವಕಾಶ ಬಂದರೆ ದಲಿತ ಮುಖಂಡರೊಬ್ಬರನ್ನು ಸಿಎಂ ಸ್ಥಾನಕ್ಕೆ ತರುವುದಾಗಿಯೂ ಅವರು ಭರವಸೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



