ಜಗದೀಶ್ ಶೆಟ್ಟರ್ ನಿರ್ಗಮನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ತಂದಿದೆ: ಡಿಕೆ.ಶಿವಕುಮಾರ್
ಜಗದೀಶ್ ಶೆಟ್ಟರ್ ನಿರ್ಗಮನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸವನ್ನು ತರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಹೇಳಿದರು.

ಬೆಂಗಳೂರು: ಜಗದೀಶ್ ಶೆಟ್ಟರ್ ನಿರ್ಗಮನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸವನ್ನು ತರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ಬಿಜೆಪಿ ಆಂತರಿಕ ವಿಚಾರದಿಂದ ಬೇಸತ್ತು ಆ ಪಕ್ಷದ ವಿರುದ್ಧ ದೊಡ್ಡ ಆರೋಪ ಮಾಡಿ ಕಾಂಗ್ರೆಸ್ ಸೇರಿದ್ದರು. ಅವರಿಗೆ ಪಕ್ಷದ ಟೆಕೆಟ್ ನೀಡಿದ್ದೆವು. 35 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಆದರೂ ಅವರಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿದ್ದೆವು. ಕಳೆದ 2-3 ತಿಂಗಳಿನಿಂದ ಬಿಜೆಪಿ ನಾಯಕರು ಅವರನ್ನು ಸಂಪರ್ಕ ಮಾಡುತ್ತಿದ್ದರು. ಮೊನ್ನೆ ಕೂಡ ಬಿಜೆಪಿ ಸೇರುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ಗುರುವಾರ ಏಕಾಏಕಿ ಪಕ್ಷ ತೊರೆದಿದ್ದಾರೆ ಎಂದು ಹೇಳಿದರು.
ನಮ್ಮ ಪಕ್ಷ 136 ಸೀಟು ಗೆದ್ದಿದೆ. ನಮ್ಮ ತಪ್ಪಿನಿಂದ 6-7 ಸೀಟು ಸೋತಿದ್ದೇವೆ. ಈಗಲೂ ಬಹಳ ಮಂದಿ ನಮ್ಮ ಪಕ್ಷ ಸೇರಲು ಎದುರು ನೋಡುತ್ತಿದ್ದಾರೆ. ನಾವು ಸಿದ್ಧಾಂತ, ನೀತಿ ಮೇಲೆ ರಾಜಕಾರಣ ಮಾಡುವವರು. ಬೆಳಗಾವಿ ಹಾಗೂ ಇತರೆ ಭಾಗದ ನಾಯಕರು, ಕಾರ್ಯಕರ್ತರು ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಹೋಗಿದ್ದು ಒಳ್ಳೆಯದಾಯಿತು ಎಂದು ಹೇಳಿದ್ದಾರೆ.
ದೂರದೃಷ್ಟಿ ಇಟ್ಟುಕೊಂಡು ಅವರಿಗೆ ನಾವು ಅವಕಾಶ ಮಾಡಿಕೊಟ್ಟಿದ್ದೆವು. ಅವರು ಬಿಜೆಪಿ ವಿರುದ್ಧ ಕೊಟ್ಟ ಹೇಳಿಕೆಗಳಿಗೆ ಈಗ ಅವರೇ ಉತ್ತರ ನೀಡಬೇಕು. ಅದರ ಬಗ್ಗೆ ನಾವು ಮಾತನಾಡುವ ಅಗತ್ಯವಿಲ್ಲ. ಅವರ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಿಗೆ ನೀಡುತ್ತೇವೆ ಎಂದು ತಿಳಿಸಿದರು.
ಇನ್ನು ಲಕ್ಷ್ಮಣ್ ಸವದಿ ಅವರ ಕುರಿತು ಮಾತನಾಡಿ, ನಾನು ಶೆಟ್ಟರ್ ಅವರ ಜೊತೆಗೆ ಬಂದವನಲ್ಲ. ನಾನು ನನ್ನ ವೈಯಕ್ತಿಕ ನಿರ್ಧಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಸವದಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಜೊತೆಗೆ ಅವರೇ ಮಾಧ್ಯಮಗಳಿಗೆ ಉತ್ತರ ನೀಡಿದ್ದಾರೆ. ಅವರು ಈಗ ನಮ್ಮ ಪಕ್ಷದ ನಾಯಕರು ಹಾಗೂ ಪ್ರಮುಖ ಆಸ್ತಿ ಎಂದರು.
ಬಿಜೆಪಿಯವರು ಸವದಿ ಅವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಗ್ಗೆ ಮಾತನಾಡಿದ, ಬಿಜೆಪಿಯವರು ಯಾರನ್ನೂ ಬಿಡುತ್ತಿಲ್ಲ. ಎಲ್ಲರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಮಗೂ ಆ ಕೆಲಸ ಗೊತ್ತಿದೆ. ನಾವು ಮನಸ್ಸು ಮಾಡಿದ್ದರೆ ಎಷ್ಟೋ ಮನೆಗಳು ಖಾಲಿಯಾಗಿರುತ್ತಿದ್ದವು ಎಂದು ತಿರುಗೇಟು ನೀಡಿದರು.
ನಮ್ಮ ಸಿದ್ಧಾಂತದಲ್ಲಿದ್ದವರನ್ನು ಮತ್ತೆ ಕರೆತರುವ ಪ್ರಯತ್ನದಲ್ಲಿದ್ದೇವೆ ಎಂಬ ಸುನೀಲ್ ಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದಿಂದ ಕರೆದುಕೊಂಡು ಹೋದರಲ್ಲ, ಅವರಿಗೆ ಯಾವ ಸಿದ್ಧಾಂತವಿತ್ತು? ಈಗ ಅವರಿಗೆ ಯಾವ ಸಿದ್ಧಾಂತದ ಪಾಠ ಮಾಡುತ್ತಿದ್ದಾರೆ? ಆಗ ಅವರೆಲ್ಲರೂ ಆ ಸಿದ್ಧಾಂತ ಒಪ್ಪಿದ್ದಾರಾ? ಈ ಬಗ್ಗೆ ಅವರ ಕ್ಷೇತ್ರದ ಕಾರ್ಯಕರ್ತರನ್ನು ಕೇಳಿ ನೋಡಿ, ಹೇಳುತ್ತಾರೆ. ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ತತ್ವ ಸಿದ್ಧಾಂತಕ್ಕೆ ಬದ್ಧರಾಗಿರುವವರನ್ನು ಸೇರಿಸಿಕೊಳ್ಳಿ ಎಂದು ಖರ್ಗೆ ಅವರು ಸಲಹೆ ನೀಡಿದ್ದಾರೆ. ಖಂಡಿತವಾಗಿ ದೊಡ್ಡವರು ಹೇಳಿದ ಸಲಹೆಗಳನ್ನು ಸ್ವೀಕರಿಸುತ್ತೇವೆ. ಕೆಲವು ವಿಚಾರದಲ್ಲಿ ಹಿರಿಯರ ಸಲಹೆ ಬಹಳ ಮುಖ್ಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


