'ಕೈ' ಕೊಟ್ಟು 'ಕಮಲ' ಹಿಡಿದ ಜಗದೀಶ್ ಶೆಟ್ಟರ್: ಸಿಎಂ, ಡಿಸಿಎಂ ಪ್ರತಿಕ್ರಿಯೆ ಹೀಗಿದೆ...
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಹೋಗಿ ಈಗ ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಂದರೆ ಮತ್ತೆ ತಮ್ಮ ಮಾತೃ ಪಕ್ಷಕ್ಕೆ ವಾಪಸ್ಸಾಗಿದ್ದಾರೆ.

ಮಡಿಕೇರಿ/ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಹೋಗಿ ಈಗ ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಂದರೆ ಮತ್ತೆ ತಮ್ಮ ಮಾತೃ ಪಕ್ಷಕ್ಕೆ ವಾಪಸ್ಸಾಗಿದ್ದಾರೆ.
ದಿಢೀರ್ ಬೆಳವಣಿಗೆಯಲ್ಲಿ ಅವರು ಮಾಜಿ ಸಿಎಂ ಯಡಿಯೂರಪ್ಪ, ಬಿ ವೈ ವಿಜಯೇಂದ್ರ ಅವರ ಜೊತೆಗೆ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಅವರ ಸೇರ್ಪಡೆಗೆ ಅಮಿತ್ ಶಾ ಅವರಿಂದ ಸಂಪೂರ್ಣ ಒಪ್ಪಿಗೆ ಸಿಕ್ಕಿದೆ.
ಈ ಬಗ್ಗೆ ಮಡಿಕೇರಿ ಪ್ರಸಾದಲ್ಲಿರುವ ಸಿಎಂ ಸಿದ್ದರಾಮಯ್ಯ, ವಿರಾಜಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿ, ಶೆಟ್ಟರ್ ಅವರಿಗೆ ಕಾಂಗ್ರೆಸ್‌ನಿಂದ ಯಾವುದೇ ಅನ್ಯಾಯ ಆಗಿಲ್ಲ. ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ವಿಚಾರವೂ ಗೊತ್ತಿಲ್ಲ, ನನಗೆ ಈ ಬೆಳವಣಿಗೆ ಬಗ್ಗೆ ಮಾಹಿತಿ ಇಲ್ಲ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ಬಿಜೆಪಿ ವಂಚಿಸಿದೆ ಎಂದು ಹೇಳಿ ಅವರು ಕಾಂಗ್ರೆಸ್ ಗೆ ಬಂದರು. ಪಕ್ಷವು ಅವರಿಗೆ ಟಿಕೆಟ್ ನೀಡಿತು. ಸ್ವಕ್ಷೇತ್ರದಲ್ಲಿಯೇ ಸೋತರು. ಆದರೂ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಲಾಯಿತು.
ಇತ್ತೀಚೆಗೆ ನಾನು ಅವರನ್ನು ಭೇಟಿ ಮಾಡಿದ್ದ ವೇಳೆ ಶೆಟ್ಟರ್, ಬಿಜೆಪಿ ನನಗೆ ಅನ್ಯಾಯ ಮಾಡಿದೆ. ವಾಪಸ್ ಪಕ್ಷಕ್ಕೆ ಹೋಗುವುದಿಲ್ಲ ಎಂದಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ನಿಗಮ ಮಂಡಳಿ ನೇಮಕ ವಿಚಾರ ಸಂಬಂಧ ಮಾತನಾಡಿದ ಸಿಎಂ, ನಾವೇನು ಗುಲಾಮರಾ ಎಂಬ ಸಚಿವ ಕೆ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬೊಬ್ಬರು ಒಂದೊಂದು ಹೆಸರನ್ನ ಸಜೆಸ್ಟ್ ಮಾಡ್ತಾರೆ. ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ ಎಂದರು.
ಇನ್ನು ಈ ಬೆಳವಣಿಗೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ತೀಕ್ಷ್ಣವಾಗಿ ಶೆಟ್ಟರ್ ಅವರಿಗೆ ತಿರುಗೇಟು ನೀಡುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.ನಿನ್ನೆ ನಾನು ಕರೆ ಮಾತಾಡಿದಾಗ ನಾನು ಬಿಜೆಪಿಗೆ ಹೋಗಲ್ಲ ಎಂದಿದ್ದರು. ನಾವು ಸೀನಿಯರ್ ಲೀಡರ್ ಎಂದು ಸ್ಥಾನಮಾನ ಕೊಟ್ಟಿದ್ವಿ. ಈಗ ನಾನು ಫ್ಯಾಕ್ಸ್ನಲ್ಲಿ ರಾಜೀನಾಮೆ ಕೊಟ್ತೇನೆ ಅಂದಿದ್ದಾರೆ. ಒತ್ತಡದಲ್ಲಿ ಕರೆದುಕೊಂಡು ಹೋಗಿದ್ದಾರೋ, ಅವರಾಗಿಯೇ ಹೋಗಿದ್ದಾರೋ ಏನೋ ಗೊತ್ತಿಲ್ಲ. ಟಿಕೆಟ್ ತಪ್ಪಿಸಿದಾಗ ಶೆಟ್ಟರ್ಗೆ ದೇಶದ ಹಿತ ಗೊತ್ತಿರಲಿಲ್ವಾ? ನಾವು ಅವರನ್ನು ಬಹಳ ಗೌರವದಿಂದ ನಡೆಸಿಕೊಂಡಿದ್ದೇವೆ. ನನಗೆ ಈವರೆಗೂ ರಾಜೀನಾಮೆ ಪತ್ರ ತಲುಪಿಲ್ಲ. ಶೆಟ್ಟರ್ ಅವರು ಮಾತಾಡಲಿ, ಈಗ ನಾನು ಏನೂ ಹೇಳಲ್ಲ, ಮುಂದಿನ ದಿನಗಳಲ್ಲಿ ನಾನು ಮಾತಾಡ್ತೇನೆ ಎಂದರು.
ಶೆಟ್ಟರ್ ಅಲ್ಲಿ ನಿಲ್ಲುತ್ತಾರೆ ಎಂದು ಏನು ಗ್ಯಾರಂಟಿ?: ತುಮಕೂರಿನಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿ ಸೇರಿದ ವಿಚಾರ ಈಗ ತಿಳಿಯಿತು. ನನಗೆ ನ್ಯೂಟನ್ ನೆನಪಾದ. ಅವರನ್ನು ಅವಮಾನ ಮಾಡಿ ಹೊರಹಾಕಿದ್ದರು. ಈಗ ಮತ್ತೆ ಅವರೇ ಸೇರ್ಪಡೆ ಮಾಡಿಕೊಂಡಿದ್ದಾರೆ. ಅಲ್ಲಿ ಇರುತ್ತಾರೆ ಅನ್ನೋದು ಯಾವ ಗ್ಯಾರಂಟಿ. ಯಾವುದೇ ತತ್ವ ಸಿದ್ದಾಂತ ಪಾಲನೆ ಮಾಡದೇ ಸ್ವಾರ್ಥಕ್ಕೋಸ್ಕರ ಪಕ್ಷ ಬದಲಾವಣೆ ಮಾಡಿದ್ದಾರೆ. ಯಾವುದೇ ತತ್ವ ಸಿದ್ದಾಂತದ ಗೋಜಿಗೆ ಹೋಗದೇ ವೈಯಕ್ತಿಕಗಾಗಿ ಪಕ್ಷಾಂತರ ಮಾಡುವುದು ಒಪ್ಪುವ ಕ್ರಮವಲ್ಲ. ಕಾಂಗ್ರೆಸ್ ನಿಂದ ಅವರಿಗೆ ಗೌರವ ಸಿಕ್ಕಿತ್ತು.
ಯಾವುದೋ ಒತ್ತಡದಿಂದ ಹೀಗೆ ಆಗಿರಬಹುದೆನೋ ಗೊತ್ತಿಲ್ಲ. ಅವರು ಬಿಜೆಪಿ ಸೇರ್ಪಡೆಯಿಂದ ಅವರ ಗೌರವ ಕಡಿಮೆ ಆಗಿದೆ ಎನ್ನೋದು ನನ್ನ ಅಭಿಪ್ರಾಯ. ಹೀಗೆ ಯಾರೇ ಮಾಡಿದ್ರೂ ಜನರು ಒಪ್ಪುವುದಿಲ್ಲ. ಲೋಕಸಭಾ ಚುನಾವಣೆ ಸಮೀಪ ಇರುವ ಕಾರಣ ಹೋಗೊದು ಬರೋದು ಇದ್ದೆ ಇರುತ್ತದೆ. ಇವರು ಹೋದರೆ ಬೇರೆಯವರು ಬರುತ್ತಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


