'ಸಿದ್ದರಾಮಯ್ಯನವರೇ ನಿಮ್ಮ ಪರಿಸ್ಥಿತಿಯ ಬಗ್ಗೆ ನನಗೆ ಕನಿಕರವಿದೆ, ಇನ್ನಾದರೂ ರಾಮನಿಗೆ ಶರಣಾಗಿ'
ಅಂತೂ ಇಂತೂ ತಮ್ಮ ಬಾಯಲ್ಲೂ ರಾಮ ನಾಮ ಹೊರಡುತ್ತಿದೆ. ತೋರಿಕೆಗೊ, ಜನಮೆಚ್ಚುಗೆಗೊ ಅಥವಾ ಸಮಾಜದ ಅಂಜಿಕೆಗೋ, ಒಟ್ಟಿನಲ್ಲಿ ನಿನ್ನೆ ತಾವೂ ಒಂದು ದೇವಸ್ಥಾನಕ್ಕೆ ಹೋಗಿದ್ದೀರಿ. ಇದು ಸಂತೋಷದ ವಿಷಯ.

ಬೆಂಗಳೂರು: ಅಂತೂ ಇಂತೂ ತಮ್ಮ ಬಾಯಲ್ಲೂ ರಾಮ ನಾಮ ಹೊರಡುತ್ತಿದೆ. ತೋರಿಕೆಗೊ, ಜನಮೆಚ್ಚುಗೆಗೊ ಅಥವಾ ಸಮಾಜದ ಅಂಜಿಕೆಗೋ, ಒಟ್ಟಿನಲ್ಲಿ ನಿನ್ನೆ ತಾವೂ ಒಂದು ದೇವಸ್ಥಾನಕ್ಕೆ ಹೋಗಿದ್ದೀರಿ. ಇದು ಸಂತೋಷದ ವಿಷಯ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಆರ್. ಅಶೋಕ್ ಹರಿಹಾಯ್ದಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಿಮ್ಮ ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯನ್ನ ರಾಮನ ವಿಷಯದಲ್ಲೂ ವಿಸ್ತರಿಸುವ ಪಾಪ ಕಟ್ಟಿಕೊಳ್ಳಬೇಡಿ. ನೀವು ಮಹಾತ್ಮ ಗಾಂಧಿಯವರು ಹೇಳಿದ ರಾಮನ ಭಕ್ತರು ಅಂತ ಹೇಳಿದ್ದೀರಿ. ಮಹಾತ್ಮ ಗಾಂಧಿಯವರು ಗೋಹತ್ಯೆ ನಿಷೇಧದ ಅತ್ಯಂತ ದೊಡ್ಡ ಪ್ರತಿಪಾದಕರಾಗಿದ್ದರು. ಆದರೆ ತಾವು ಗೋಹತ್ಯೆಯ ಪರ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನ ವಿಸರ್ಜನೆ ಮಾಡಿ ಅಂತ ಗಾಂಧೀಜಿ ಹೇಳಿದ್ದರು. ಆದರೆ ತಾವುಗಳು ಕಾಂಗ್ರೆಸ್ ಪಕ್ಷವನ್ನ ಒಂದು ಕುಟುಂಬದ ಜಹಗೀರು ಮಾಡಿಕೊಟ್ಟುಬಿಟ್ಟಿದ್ದೀರಿ. ಇದೇನಾ ತಮ್ಮ ಗಾಂಧೀವಾದ? ಎಂದು ಪ್ರಶ್ನಿಸಿದ್ದಾರೆ.
ರಾಮ ಸತ್ಯವಂತ. ಕೊಟ್ಟ ಮಾತಿಗೆ ಎಂದೂ ತಪ್ಪದ ವ್ಯಕ್ತಿತ್ವ. ಆದರೆ ತಾವು ಮಾಡಿದ್ದೇನು? ಮಾಡುತ್ತಿರುವುದೇನು? ತಮ್ಮ ಮೊದಲ ಅವಧಿಯಲ್ಲಿ ಜನತೆಗೆ ಕೊಟ್ಟಿದ್ದ ಭರವಸೆಗಳಲ್ಲಿ ಅರ್ಧ ಭಾಗವೂ ಈಡೇರಿಸಲಿಲ್ಲ. ಅದರ ಮೇಲೆ ನುಡಿದಂತೆ ನಡೆದ ಸರ್ಕಾರ ಎಂಬ ಮತ್ತೊಂದು ಸುಳ್ಳು. ಈಗ ಎರಡನೇ ಅವಧಿಯಲ್ಲಿ ತಾವು ಮಾಡುತ್ತಿರುವುದೇನು? ಎಲ್ಲರಿಗೂ 200 ಯೂನಿಟ್ ಕರೆಂಟ್ ಉಚಿತ ಅಂತ ಸುಳ್ಳು ಭರವಸೆ ನೀಡಿ ಕಡೆಗೆ ಸರಾಸರಿ ಎಂದು ವರಸೆ ಬದಲಿಸಿದ್ದೀರಿ. 10 ಕೆಜಿ ಅಕ್ಕಿ ನೀಡುತ್ತೇನೆ ಎಂದು ಹೇಳಿ ಈಗ ಮಾತು ತಪ್ಪಿದ್ದೀರಿ. ರಾಜ್ಯದ ಎಲ್ಲಾ ನಿರುದ್ಯೋಗಿ ಪದವೀಧರರು, ಡಿಪ್ಲೋಮಾ ಪದವೀಧರರಿಗೆ ಯುವನಿಧಿ ಗ್ಯಾರೆಂಟಿ ಅಂತ ಸುಳ್ಳು ಹೇಳಿ ಈಗ ಕಂಡೀಷನ್ ಮೇಲೆ ಕಂಡೀಷನ್ ಹಾಕಿ ಕಡೆಗೆ 3,000 ಯುವಕರು ಮಾತ್ರ ಅರ್ಹರು ಎಂದು ಯುವಕರಿಗೆ ಟೋಪಿ ಹಾಕಿದ್ದೀರಿ ಎಂದು ತಪರಾಕಿ ಹಾಕಿದ್ದಾರೆ.
ಇದನ್ನೂ ಓದಿ: ನಾನು ನಾಸ್ತಿಕನಲ್ಲ-ಆಸ್ತಿಕ: ಸಿಎಂ ಸಿದ್ದರಾಮಯ್ಯ ಘೋಷಣೆ
ತಾವು ರಾಮನ ಭಕ್ತರೂ ಅಲ್ಲ, ಗಾಂಧೀಜಿ ಅವರ ಅನುಯಾಯಿಗಳೂ ಅಲ್ಲ. ತಾವೇನಿದ್ದೇರೂ ಅಧಿಕಾರದ ಅನುಯಾಯಿಗಳು, ಅಧಿಕಾರ ಕೊಡುವ ಹೈಕಮಾಂಡ್ ಭಕ್ತರು. ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ, ರಾಮ ಮಂದಿರದ ಆಹ್ವಾನ ತಿರಸ್ಕರಿಸಿದ ತಮ್ಮ ಪಕ್ಷಕ್ಕೆ ಶ್ರೀರಾಮನ ಬಗ್ಗೆ, ಕೊಟ್ಟ ಮಾತಿನಂತೆ ರಾಮನ ಮಂದಿರ ನಿರ್ಮಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಉಳಿದಿಲ್ಲ. ಕನ್ನಡಿಗರ ರಾಮಭಕ್ತಿ, ಹಿಂದೂಗಳ ಒಗ್ಗಟ್ಟು ನೋಡಿ ತಮಗೆ ನಡುಕ ಉಂಟಾಗಿದೆ ಎಂದು ಗೊತ್ತು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲದಿದ್ದರೆ ಪಾಪ ತಮ್ಮ ಕುರ್ಚಿಗೇ ಕಂಟಕ. ಸಿದ್ದರಾಮಯ್ಯನವರೇ ತಮ್ಮ ಪರಿಸ್ಥಿತಿಯ ಬಗ್ಗೆ ನನಗೆ ಕನಿಕರವಿದೆ. ಇನ್ನಾದರೂ ರಾಮನಿಗೆ ಶರಣಾಗಿ ಎಂದು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


