ರಾಜಕೀಯ

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಇಂಡಿಯಾ ಮೈತ್ರಿಕೂಟಕ್ಕೆ ತೀವ್ರ ಮರ್ಮಾಘಾತ: ವಿಜಯೇಂದ್ರ

ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ತೀವ್ರ ಮರ್ಮಾಘಾತವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಇಂಡಿಯಾ ಮೈತ್ರಿಕೂಟಕ್ಕೆ ತೀವ್ರ ಮರ್ಮಾಘಾತ: ವಿಜಯೇಂದ್ರ
ರಾಜ್ಯ ಬಿಜೆಪಿ ನಾಯಕರು
Published On :

ಬೆಂಗಳೂರು: ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ತೀವ್ರ ಮರ್ಮಾಘಾತವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

ನಗರದ ಹೊಟೇಲ್ ವೊಂದರಲ್ಲಿ ಇಂದು ನಡೆದ ಬಿಜೆಪಿ ಲೋಕಸಭಾ ಚುನಾವಣೆ ಕಾರ್ಯತಂತ್ರ ಸಭೆಯಲ್ಲಿ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಬಿಜೆಪಿ ಗೆದ್ದಿದೆ. ಈ ಮೂಲಕ ಇಂಡಿಯಾ ಒಕ್ಕೂಟ, ಕಾಂಗ್ರೆಸ್‍ಗೆ ಮರ್ಮಾಘಾತ ಆಗಿದೆ. ಇದೊಂದು ಸ್ಪಷ್ಟ ಸಂದೇಶವಾಗಿದೆ ಎಂದರು.

ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ರಾಜ್ಯದ ಮತದಾರರು ಸಜ್ಜಾಗಿದ್ದಾರೆ. ಬಿಜೆಪಿ, ಸಂಘಟನೆಗೆ, ಪೂರಕ ಕ್ರಮಗಳನ್ನು ಪಕ್ಷ ಕೈಗೊಳ್ಳಲಿದೆ. ಪಕ್ಷವು ರಾಜ್ಯದಲ್ಲಿ ಎಲ್ಲ 28 ಸ್ಥಾನಗಳನ್ನೂ ಗೆಲ್ಲಲಿದೆ. ಇದಕ್ಕಾಗಿ ಎಲ್ಲರೂ ಶ್ರಮಿಸಲಿದ್ದಾರೆ ಎಂದರು. 

ದೇಶ- ರಾಜ್ಯದ ಜನರು, ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷದ ಗಿಮಿಕ್ ಗ್ಯಾರಂಟಿಯನ್ನು ನಂಬಲು ತಯಾರಿಲ್ಲ. ಇದರಿಂದ ಮೋದಿ ಗ್ಯಾರಂಟಿಯೇ ಶ್ರೇಷ್ಠ ಎಂದು ಪ್ರಜ್ಞಾವಂತ ಮತದಾರರು ತಿಳಿದಿದ್ದಾರೆ ಎಂದು ನುಡಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿ ಮೋದಿಜೀ ಮೂರನೇ ಬಾರಿ ಪ್ರಧಾನಮಂತ್ರಿ ಆಗಲಿದ್ದು, ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರಕಾರದ ಅಸಮರ್ಥ, ಅಸಮರ್ಪಕ ಆಡಳಿತದಿಂದ ಹಣಕಾಸು ವ್ಯವಸ್ಥೆ ಹದಗೆಟ್ಟಿದೆ. ಕಾನೂನು- ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. 14 ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪನ್ಮೂಲ ಕ್ರೋಡೀಕರಣದ ವಿಚಾರದಲ್ಲಿ ಪೂರ್ಣಪ್ರಮಾಣದಲ್ಲಿ ವಿಫಲವಾಗಿದ್ದಾರೆ. ಇದರಿಂದ ಭೀಕರ ಬರಗಾಲ, 500 ರೈತರ ಆತ್ಮಹತ್ಯೆ ಹೊರತಾಗಿಯೂ ರಾಜ್ಯ ಸರಕಾರವು ಪರಿಹಾರ ಕೊಡದೆ, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ಅತಿವೃಷ್ಟಿ ಎದುರಾದಾಗ ತಕ್ಷಣವೇ ಜನಸ್ಪಂದನೆ ತೋರಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪ್ರಕೃತಿ ವಿಕೋಪಕ್ಕೆ ಕೂಡಲೇ ಸ್ಪಂದಿಸಿದ್ದನ್ನು ಜನರು ಮರೆತಿಲ್ಲ. ಈ ಸರಕಾರವು ಎಸ್‍ಸಿ, ಎಸ್‍ಟಿಗಳಿಗೆ ಮೀಸಲಿಟ್ಟ ಹಣವನ್ನೂ ಬೇರೆಡೆಗೆ ವರ್ಗಾಯಿಸಿ ದಲಿತರಿಗೂ ಅನ್ಯಾಯ ಮಾಡಿದೆ. ಇದಕ್ಕಾಗಿ ಜನರು ಈ ಕಾಂಗ್ರೆಸ್ ಸರಕಾರವನ್ನು ಶಪಿಸುವಂತಾಗಿದೆ ಎಂದು ತಿಳಿಸಿದರು.

ಕೋಟ್ಯಂತರ ಹಿಂದೂಗಳು ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಎದುರು ನೋಡುತ್ತಿದ್ದು, ಹಬ್ಬದ ವಾತಾವರಣವಿದೆ. ಮನೆಮನೆಗಳಲ್ಲಿ ಹಬ್ಬದ ಸಂಭ್ರಮ ಇದೆ. ಆದರೆ, ಭಗವಾನ್ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಕಾಂಗ್ರೆಸ್ ಪಕ್ಷದವರು ವಿಧಿ ಇಲ್ಲದೇ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಲು ಸುತ್ತೋಲೆ ಹೊರಡಿಸಿದೆ. ಇದು ರಾಮಭಕ್ತರಿಗೆ ಸಂದ ಜಯ ಎಂದರು. 

ಈ ಸಂದರ್ಭದಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ,  ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತಿತರರು ಪಾಲ್ಗೊಂಡಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.