'ಕೇಂದ್ರದಿಂದ ಬಂದ ಅನುದಾನದ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ': ಆರ್.ಅಶೋಕ್ ಸವಾಲು
ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಕಾಂಗ್ರೆಸ್ ನಾಯಕರು ದೆಹಲಿ ಚಲೋಗೆ ಮುಂದಾಗಿದ್ದಾರೆ. ಅದಕ್ಕೂ ಮೊದಲು ಕಳೆದ 20 ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಂದ ಅನುದಾನದ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಸವಾಲು ಹಾಕಿದ್ದಾರೆ.

ಬೆಂಗಳೂರು: ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಕಾಂಗ್ರೆಸ್ ನಾಯಕರು ದೆಹಲಿ ಚಲೋಗೆ ಮುಂದಾಗಿದ್ದಾರೆ. ಅದಕ್ಕೂ ಮೊದಲು ಕಳೆದ 20 ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಂದ ಅನುದಾನದ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಒಂದು ಶ್ವೇತಪತ್ರ ಬಿಡುಗಡೆ ಮಾಡಿ. ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಎಷ್ಟು ಬಿಡುಗಡೆ ಮಾಡಿದ್ದರು ಅಂತ. ಅದರ ಬಗ್ಗೆ ನಮಗೆ ಟೋಟಲ್ ಎಷ್ಟು ಬಿಡುಗಡೆ ಮಾಡಿದ್ದರು ಎಂದು ಹೇಳಿ. ಅವರು ಎಷ್ಟು ಬಿಡುಗಡೆ ಮಾಡಿದ್ರು ಮೋದಿ ಎಷ್ಟು ಬಿಡುಗಡೆ ಮಾಡಿದ್ದರು ಎಲ್ಲರಿಗೂ ಗೊತ್ತಾಗಲಿ. ಒಟ್ಟು ಎಷ್ಟು ಹಣ ಬಂದಿದೆ ಎಂದು ಶ್ವೇತಪತ್ರ ಬಿಡುಗಡೆ ಮಾಡಿ. ಜನರು ತೀರ್ಮಾನ ಮಾಡಲಿ. ಕರ್ನಾಟಕದಿಂದ ಜಾಸ್ತಿ ಟ್ಯಾಕ್ಸಿ ಕಟ್ಟುತ್ತಿದ್ದೇವೆ ಒಪ್ಪುತ್ತೇವೆ. ಇನ್ನು ಮಹಾರಾಷ್ಟ್ರ ಅತಿ ಹೆಚ್ಚು ತೆರಿಗೆ ಕಟ್ಟುತ್ತಿದೆ ಅಲ್ಲವೇ, ಅವರಿಗೆ ಎಷ್ಟು ಕೊಟ್ಟಿದ್ದಾರೆ? ದೆಹಲಿಗೆ ಎಷ್ಟು ಕೊಟ್ಟಿದ್ದಾರೆ? ಎಂಬುದು ಎಲ್ಲರಿಗೂ ತಿಳಿಯಲಿ ಎಂದು ಸವಾಲು ಹಾಕಿದರು.
ನೀವು ಅನುದಾನದ ವಿಚಾರವಾಗಿ ದೇಶಕ್ಕೆ ಹೋಗಬೇಡಿ, ಇಲ್ಲಿ ನಮ್ಮ ರಾಜ್ಯದ ವಿಷಯವನ್ನೇ ಹೇಳಿ. ಬೆಂಗಳೂರು ಒಂದರಿಂದಲ್ಲೇ ಶೇ. 65 ಟ್ಯಾಕ್ಸ್ ಕಟ್ಟುತ್ತಿದ್ದಾರೆ. ಹಾಗಿದ್ರೆ ಬೆಂಗಳೂರಿಗೆ ಎಷ್ಟು ಕೊಟ್ಟಿರೋದು? ಉಳಿದ ಕರ್ನಾಟಕದ ಜಿಲ್ಲೆಗಳಿಗೆ ಎಷ್ಟು ಅನುದಾನ ಕೊಟ್ಟಿದ್ದೀರಿ.? ಅನುದಾನ ತಾರತಮ್ಯಕ್ಕಾಗಿ ಕರ್ನಾಟಕದಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಅಂತ ಕೂಗಿತ್ತು. ಕರ್ನಾಟಕಕ್ಕೆ ನಾವು ನೀರು ಕೊಡ್ತಿವಿ, ನಾವು ಕಾಫಿ ಬೆಳೆಯುತ್ತೇವೆ. ನಾವು ಹೆಚ್ಚಿಗೆ ಟ್ಯಾಕ್ಸ್ ಕಟ್ಟೋದು ಎಂದು ಹೇಳುತ್ತಿದ್ದರು. ಆಗ ಸಿದ್ದರಾಮಯ್ಯ ಅವರೇ ಟ್ಯಾಕ್ಸ್ ಮೇಲೆ ರಾಜ್ಯ ಇಬ್ಬಾಗ ಮಾಡೋದಕ್ಕೆ ಆಗೊಲ್ಲಾ ಅಂತ ಹೇಳಿದ್ದರು. ಈಗ ತಮ್ಮ ಪಕ್ಷದವರೇ ಟ್ಯಾಕ್ಸ್ ಹಾಗೂ ಅನುದಾನದ ಆಧಾರದಲ್ಲಿ ದೇಶ ಇಬ್ಭಾಗ ಮಾಡಲು ಮುಂದಾಗಿರುವುದು ಸರಿಯೇ ಎಂದು ಪ್ರಶ್ನೆ ಮಾಡಿದರು.
ರಾಜ್ಯಕ್ಕೆ ಬೆಂಗಳೂರಿನಿಂದ ಶೇ.65 ಟ್ಯಾಕ್ಸ್ ಬರುತ್ತದೆ. ಆದರೆ. ಸರ್ಕಾರದಿಂದ ಬೆಂಗಳೂರಿಗೆ ಶೇ.5 ಪರ್ಸೆಂಟ್ ಅನುದಾನವನ್ನೂ ಕೊಟ್ಟಿಲ್ಲ. ಯಾವ ಜಿಲ್ಲೆಯಿಂದ ಎಷ್ಟು ಬರುತ್ತದೆಯೋ, ಅಷ್ಟು ಅನುದಾನ ಕೊಡಲು ಸಾಧ್ಯನಾ.? ಎಲ್ಲಿ ಜನ ಕಷ್ಟದಲ್ಲಿದ್ದಾರೆ ಅಂತವರಿಗೆ ಸಹಾಯ ಮಾಡಬೇಕಂತಾ ಸಂವಿಧಾನದಲ್ಲಿ ಹೇಳಿದ್ದಾರೆ. ಅಭಿವೃದ್ಧಿ ಆಗದ ಕಡೆ, ಜನ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು ಎಂದು ಸಂವಿಧಾನ ಹೇಳುತ್ತದೆ. ಮಕ್ಕಳು ಎಷ್ಟು ಸಂಪಾದನೆ ಮಾಡ್ತಾರೆ, ಎಂಬುದರ ಮೇಲೆ ತಾಯಿ ಊಟ ನೀಡಲ್ಲ. ಕಾಮನ್ ಸೆನ್ಸ್ ಬೇಕು ರೀ ಸಿದ್ದರಾಮಯ್ಯ.. ತೆರಿಗೆ ವಿಚಾರದಲ್ಲಿ ರಾಜ್ಯದ ಹೋಲಿಕೆ ಮಾಡಬಾರದು. ನೀವು ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ರಿ? ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದಿಂದ ಯಾವುದೇ ತಾರತಮ್ಯ ಆಗಿಲ್ಲ. ಕರ್ನಾಟಕಕ್ಕೆ ಬರಬೇಕಾದ ಎಲ್ಲಾ ಹಣ ರಾಜ್ಯಕ್ಕೆ ಬಂದಿದೆ. ಕರ್ನಾಟಕ ರಾಜ್ಯಕ್ಕೆ ಯಾವುದೇ ಬ್ಯಾಲೇನ್ಸ್ ಇಲ್ಲ ಎಂದು ನಿರ್ಮಾಲ ಸೀರಾಮನ್ ಹೇಳಿದ್ದಾರೆ. ಹಾಗೇನಾದರೂ ಬ್ಯಾಲೆನ್ಸ್ ತಾರತಮ್ಯ ಇದೆ, ಅನ್ನೋದಾಗಿದ್ರೆ ಖರ್ಗೆಯವರು ಹೇಳಬಹುದಾಗಿತ್ತು ಅಲ್ವಾ? ಡಿ.ಕೆ. ಸುರೇಶ್ ಗಿಂತ ಖರ್ಗೆ ಬುದ್ದಿವಂತರು ತಾನೇ. ಜೈರಾಮ್ ರಮೇಶ್ ಸಹ ಇದ್ದರು ಅಲ್ವಾ? ಅವರ್ಯಾರು ಯಾಕೆ ಮಾತನಾಡಿಲ್ಲ ಎಂದು ಹೇಳಿದರು.
ಇನ್ನು ಕರ್ನಾಟಕಕ್ಕೆ ಬಜೆಟ್ ನಲ್ಲಿ ಏನಾದರೂ ಅನ್ಯಾಯವಾಗಿದೆ ಎಂದರೆ, ಅದಕ್ಕೆ ಒಂದು ವೇದಿಕೆ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಂದು ವೇದಿಕೆ ಕೊಟ್ಟಿದ್ದಾರೆ ಅಲ್ಲಿ ಮಾತಡಬೇಕು. ಅಲ್ಲಿ ಮಾತನಾಡೋದು ಬಿಟ್ಟು ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಾರಂತೆ. ಅಲ್ಲಿ ಸೈಲೆಂಟ್ ಹೊರಗಡೆ ವೈಲೆಂಟ್, ಇದೇನಿದು ಕಾಂಗ್ರೆಸ್ ನಡೆ. 9 ವರ್ಷಗಳಿಂದ ಸೈಲೆಂಟ್ ಆಗಿದ್ದು, ಈಗ ಚುನಾವಣೆ ಬಂದಿದೆ ಎಂದು ನಾಟಕ ಶುರು ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಯಾವುದೇ ರಾಜ್ಯಕ್ಕೂ ಅನ್ಯಾಯಾವಾಗಿಲ್ಲ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


