MUDA Case: 'ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುದನ್ನು ಸ್ಪಷ್ಟವಾಗಿ ನೋಡಿ'- ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್
ಕಪೋಲ ಕಲ್ಪಿತ ಕಟ್ಟುಕತೆಗಳ ಮೂಲಕ ನನ್ನನ್ನು ಹಾಗೂ ನನ್ನ ಕುಟುಂಬವನ್ನು ವಿನಾಃಕಾರಣ ಅಪರಾಧಿಗಳಂತೆ ಬಿಂಬಿಸಿ ಬಾಯಿಗೆ ಬಂದಂತೆ ಮಾತನಾಡಿರುವ ಬಿಜೆಪಿ – ಜೆಡಿಎಸ್ ಪಕ್ಷಗಳ ವಿವೇಕ ಶೂನ್ಯ ನಾಯಕರು ಇಂದು ಜನರೆದುರು ಬೆತ್ತಲಾಗಿದ್ದಾರೆ.

ಬೆಂಗಳೂರು: ಮುಡಾ ಹಗರಣದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ 'ವೈಟ್ನರ್' ಪ್ರಸಂಗಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುದನ್ನು ಸ್ಪಷ್ಟವಾಗಿ ನೋಡಿ ಎಂದು ಹೇಳಿದ್ದಾರೆ.
ಈ ಕುರಿತು ಸುಧೀರ್ಘ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, 'ಮುಡಾ ಅಕ್ರಮವಾಗಿ ಸ್ವಾದೀನಪಡಿಸಿಕೊಂಡ ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್ ಹೆಚ್ಚಿದನ್ನೇ ಮಹಾನ್ ಅಪಾರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ – ಜೆಡಿಎಸ್ ನಾಯಕರೇ, ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ, ನಿಮ್ಮ ದ್ವೇಷದ ಕನ್ನಡಕ ಕಳಚಿಟ್ಟು ಸರಿಯಾಗಿ ಕಣ್ಣುಬಿಟ್ಟು ನೋಡಿ ಎಂದಿದ್ದಾರೆ.
ಅಲ್ಲದೆ, 'ನನ್ನ ಪತ್ನಿ ಬದಲೀ ಭೂಮಿ ಕೇಳಿದ್ದು ತನ್ನದೇ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾದ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸಿದ ಸಮಾನಾಂತರ ಬಡಾವಣೆಯಲ್ಲಿ. ಅಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ “ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ” ಎಂಬ ನಾಲ್ಕೈದು ಪದಗಳಿಗೆ ವೈಟ್ನರ್ ಹಾಕಿ, ಪ್ರಾಧಿಕಾರ ಅಭಿವೃದ್ಧಿ ಪಡಿಸಿದ ಸಮಾನಂತರ ಬಡಾವಣೆಯಲ್ಲಿ ನಿವೇಶನ ನೀಡಬೇಕೆಂಬ ಮನವಿ ಮಾಡಿದ್ದಾರೆ. ಇದರಲ್ಲಿ ಟಿಪ್ಪಣಿಯೂ ಇಲ್ಲ, ಆದೇಶವೂ ಇಲ್ಲ, ಅಪ್ಪಣೆಯೂ ಇಲ್ಲ. ತನಗೆ ಸೇರಿದ ಭೂಮಿಯಲ್ಲೇ ನಿವೇಶನ ಕೊಡಿ ಎಂಬ ಮನವಿ ಅಷ್ಟೆ ಇದೆ'.
“ವೈಟ್ನರ್ ಹಚ್ಚಿ ಕಪ್ಪು ಚುಕ್ಕೆ ಅಳಿಸಿಕೊಳ್ಳಲು ಸಾಧ್ಯವಿಲ್ಲ, ಸಿಎಂ ಪತ್ನಿ ನಿವೇಶನ ಕೇಳಿದ್ದು ವಿಜಯನಗರದಲ್ಲಿ, ಮುಡಾ ವಿಚಾರ ಚರ್ಚೆಗೆ ಬಂದ ನಂತರ ಸಿದ್ದರಾಮಯ್ಯ ಅವರ ಪರವಾಗಿ ಯಾರೋ ಹೋಗಿ ವೈಟ್ನರ್ ಹಚ್ಚಿ ಬಂದಿದ್ದಾರೆಂದು” ಬೊಬ್ಬೆ ಹಾಕುತ್ತಿದ್ದ ಸ್ವಯಂ ಘೋಷಿತ ಕಾನೂನು ಪಂಡಿತರು ಈಗೇನು ಹೇಳುತ್ತಾರೆ? ಆತುರದಲ್ಲಿ ಮೂಗು ಕತ್ತರಿಸಿಕೊಂಡು, ರಾತ್ರಿಯೆಲ್ಲ ಕನ್ನಡಿ ಮುಂದೆ ನಿಂತು ಕಣ್ಣೀರು ಹಾಕಿದ್ದರಂತೆ ಹಾಗಾಯಿತು ಕೆಲವು ಅತಿ ಬುದ್ದಿವಂತರ ಕತೆ.
ಕಪೋಲ ಕಲ್ಪಿತ ಕಟ್ಟುಕತೆಗಳ ಮೂಲಕ ನನ್ನನ್ನು ಹಾಗೂ ನನ್ನ ಕುಟುಂಬವನ್ನು ವಿನಾಃಕಾರಣ ಅಪರಾಧಿಗಳಂತೆ ಬಿಂಬಿಸಿ ಬಾಯಿಗೆ ಬಂದಂತೆ ಮಾತನಾಡಿರುವ ಬಿಜೆಪಿ – ಜೆಡಿಎಸ್ ಪಕ್ಷಗಳ ವಿವೇಕ ಶೂನ್ಯ ನಾಯಕರು ಇಂದು ಜನರೆದುರು ಬೆತ್ತಲಾಗಿದ್ದಾರೆ. ಸತ್ಯ ಹಾಗೆಯೇ, ಅರಿವಿಗೆ ಬರುವುದು ಸ್ವಲ್ಪ ತಡವಾಗಬಹುದು, ಆದರೆ ಅಂತಿಮ ಗೆಲುವು ಸತ್ಯದ್ದೇ ಆಗಿರುತ್ತದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



