ರಾಜಕೀಯ

ನನ್ನ ಕೊನೆ ಉಸಿರು ಇರೋವರೆಗೂ ಸಾರ್ವಜನಿಕ ಜೀವನದಲ್ಲಿ ಇರ್ತೀನಿ: ಬಿಎಸ್ ಯಡಿಯೂರಪ್ಪ

ಸುಳ್ಳು ಭ್ರಷ್ಟಾಚಾರದ ಆರೋಪದ ಮೂಲಕ ಪ್ರತಿಪಕ್ಷಗಳಿಗೆ ಬೆದರಿಕೆ ಹಾಕಲು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಧೈರ್ಯವಿದ್ದರೆ ನಮ್ಮ ವಿರುದ್ಧದ ಹಗರಣಗಳ ಆರೋಪವನ್ನು ಸಾಬೀತುಪಡಿಸಿ

ನನ್ನ ಕೊನೆ ಉಸಿರು ಇರೋವರೆಗೂ ಸಾರ್ವಜನಿಕ ಜೀವನದಲ್ಲಿ ಇರ್ತೀನಿ: ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ ಮತ್ತಿತರರು
Published On :

ಮೈಸೂರು: ಕೊನೆ ಉಸಿರು ಇರುವವರೆಗೂ ಸಾರ್ವಜನಿಕ ಜೀವನದಲ್ಲಿ ಇರುವುದಾಗಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಶನಿವಾರ ತಿಳಿಸಿದ್ದಾರೆ.

ಬಿಜೆಪಿ- ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುವಂತೆ ಸಿದ್ದರಾಮಯ್ಯ ಹೇಳುತ್ತಾರೆ. ನನ್ನ ಕೊನೆ ಉಸಿರು ಇರುವವರೆಗೂ ಸಾರ್ವಜನಿಕ ಜೀವನದಲ್ಲಿ ಇರುತ್ತೇನೆ. ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ನಡೆಸುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

'ಬಿಜೆಪಿ- ಜೆಡಿಎಸ್ ಒಗ್ಗೂಡಿದೆ. ಕಾಂಗ್ರೆಸ್ ಪಾಪಗಳು ಉತ್ತುಂಗಕ್ಕೇರಿದ್ದು, ರಾಜ್ಯದ ಜನ ನಿಮ್ಮನ್ನು ಆದಷ್ಟು ಬೇಗ ಮನೆಗೆ ಕಳುಹಿಸುತ್ತಾರೆ, ಧೈರ್ಯವಿದ್ದರೆ ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸಿ, ಶಕ್ತಿ ಪ್ರದರ್ಶನ ಮಾಡಿ. ಇಂದು ಚುನಾವಣೆ ನಡೆದರೆ ಬಿಜೆಪಿ ಮತ್ತು ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸುಳ್ಳು ಭ್ರಷ್ಟಾಚಾರದ ಆರೋಪದ ಮೂಲಕ ಪ್ರತಿಪಕ್ಷಗಳಿಗೆ ಬೆದರಿಕೆ ಹಾಕಲು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಧೈರ್ಯವಿದ್ದರೆ ನಮ್ಮ ವಿರುದ್ಧದ ಹಗರಣಗಳ ಆರೋಪವನ್ನು ಸಾಬೀತುಪಡಿಸಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಅವರ ಪತ್ನಿ ಮುಡಾದಿಂದ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ. ಇದು 5 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಹಗರಣದ ಭಾಗವಾಗಿದೆ. 3.16 ಎಕರೆ ಜಮೀನಿಗೆ ಬದಲಾಗಿ ಅವರು 14 ನಿವೇಶನ ಪಡೆದಿರುವುದು ಅಕ್ರಮವಾಗಿದೆ ಎಂದು ವಾಗ್ದಾಳಿ ನಡೆಸಿದ ವಿಜಯೇಂದ್ರ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣದಲ್ಲೂ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂದು ಆರೋಪಿಸಿದರು.

'ಮೈಸೂರು ಚಲೋʼ ಬೃಹತ್ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಶೋಷಿತ ಸಮುದಾಯಗಳಿಗೆ, ಆದಿವಾಸಿ ಜನರಿಗಾಗಿ, ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಾಗಿದ್ದ ಹಣವನ್ನು ದರೋಡೆ ಮಾಡಿದ ಈ ನೀಚ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಮುಖವನ್ನು ಕಳಚುವುದಕ್ಕಾಗಿ ನಡೆದು ಬಂದಿದ್ದೇವೆ. ರಾಜ್ಯದ ಜನತೆ ಈ ಸರ್ಕಾರದ ವಿರುದ್ಧ ಸೆಟೆದು ನಿಂತಿದ್ದಾರೆ. ಕಾಂಗ್ರೆಸ್ ಪಾಪದ ಕೊಡ ತುಂಬಿದೆ. ಆದಷ್ಟು ಬೇಗ ಇಂತಹ ಭ್ರಷ್ಟರನ್ನು ಸಲುಹುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಳ್ಳದೇ ಹೋದರೆ ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಭ್ರಷ್ಟತನ ಬಯಲಿಗೆ ಬರಲಿದೆ ಎಂದು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.