'ರಾಜಕೀಯ ಬೇಕಾ, ಸನ್ಯಾಸತ್ವ ಸಾಕಾ, ಯೋಚನೆ ಮಾಡಿ ಶ್ರೀಗಳೇ': ದಿಂಗಾಲೇಶ್ವರ ಸ್ವಾಮಿಗೆ ಭಕ್ತರ ಮನವಿ!
ಲೋಕಸಭೆ ಚುನಾವಣೆ-2024ರಲ್ಲಿ ಧಾರವಾಡ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿರುವ ದಿಂಗಾಲೇಶ್ವರ ಸ್ವಾಮಿಗಳು ತಮ್ಮ ನಿರ್ಧಾರವನ್ನು ಮರುಯೋಚನೆ ಮಾಡುವಂತೆ ಭಕ್ತಾದಿಗಳು ಮನವಿ ಮಾಡಿದ್ದು ಅಚ್ಚರಿ ಮತ್ತು ಆಘಾತ ತಂದಿದೆ.

ಗದಗ: ಲೋಕಸಭೆ ಚುನಾವಣೆ-2024ರಲ್ಲಿ ಧಾರವಾಡ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿರುವ ದಿಂಗಾಲೇಶ್ವರ ಸ್ವಾಮಿಗಳು ತಮ್ಮ ನಿರ್ಧಾರವನ್ನು ಮರುಯೋಚನೆ ಮಾಡುವಂತೆ ಭಕ್ತಾದಿಗಳು ಮನವಿ ಮಾಡಿದ್ದಾರೆ. ಲಿಂಗಾಯತ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಶ್ರೀಗಳು ಹರಿಹಾಯ್ದಿದ್ದರು.
ಸ್ವಾಮಿಗಳ ಕ್ರಮಕ್ಕೆ ಮಠದ ಭಕ್ತಾದಿಗಳು ಏಪ್ರಿಲ್ 18 ರವರೆಗೆ ಕಾಯಲು ನಿರ್ಧರಿಸಿದ್ದು, ಅವರು ಹಿಂದೆ ಸರಿಯದೆ ಸ್ಪರ್ಧಿಸಲು ಬಯಸಿದರೆ ಶಿರಹಟ್ಟಿ ಫಕೀರೇಶ್ವರ ಮಠವನ್ನು ತೊರೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಶಿರಹಟ್ಟಿ ಫಕೀರೇಶ್ವರ ಮಠವು ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿದ್ದು, ಶ್ರೀಗಳು ರಾಜಕೀಯಕ್ಕೆ ಬರದೆ ಭಕ್ತರಿಗೆ ದಾರಿ ತೋರಿಸಬೇಕು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಲಿಂಗಾಯತರಿಗೆ ಅನ್ಯಾಯ ಮಾಡಿದ್ದರೆ ಅದನ್ನು ಪ್ರಜ್ಞಾವಂತರು ಬಹಿರಂಗಪಡಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವುದು ಸಮಾಜದಲ್ಲಿ ನೋಡುಗರಿಗೆ ಸರಿಕಾಣುವುದಿಲ್ಲ ಎಂದು ಭಕ್ತಾದಿಗಳು ಹೇಳುತ್ತಿದ್ದಾರೆ.
ಗದಗ, ಲಕ್ಷ್ಮೇಶ್ವರ ಸೇರಿದಂತೆ ವಿವಿಧ ಭಾಗಗಳ ಮಠದ ಗಂಗಣ್ಣ ಮಹಾಂತಶೆಟ್ಟರ, ವೆಂಕನಗೌಡ ಗೋವಿಂದಗೌಡರ ಹಾಗೂ ಇತರ ಭಕ್ತರು ಶುಕ್ರವಾರದಿಂದ ಸರಣಿ ಸಭೆ ನಡೆಸಿ ಏಪ್ರಿಲ್ 18ರವರೆಗೆ ಕಾಯಲು ನಿರ್ಧರಿಸಿದ್ದು, ದಿಂಗಾಲೇಶ್ವರ ಸ್ವಾಮಿಗಳು ಸ್ಪರ್ಧಿಸಲು ಮುಂದಾದರೆ ಸಮೀಕ್ಷೆ ನಡೆಸಿ ಬೇರೊಬ್ಬ ಮಠಾಧೀಶರನ್ನು ಆಯ್ಕೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶ್ರೀಗಳ ನಡೆಯಿಂದ ಆಘಾತ: ಭಕ್ತಾದಿಗಳ ಈ ನಡೆ ದಿಂಗಾಲೇಶ್ವರ ಸ್ವಾಮೀಜಿಯವರಿಗೆ ಆಘಾತ ತಂದಿದೆ. ಆದರೆ ಅವರು ಮನಸ್ಸು ಬದಲಾಯಿಸಿದರೆ ಅವರು ಇನ್ನೂ ಪೀಠದ ಮುಖ್ಯಸ್ಥರಾಗಿ ಮುಂದುವರಿಯಬಹುದು ಎಂದು ಭಕ್ತರು ಹೇಳುತ್ತಿದ್ದಾರೆ.
ಮಠದ ಭಕ್ತ ವೆಂಕನಗೌಡ ಗೋವಿಂದಗೌಡರ, ಶ್ರೀಗಳು ರಾಜಕೀಯ ಪ್ರವೇಶಿಸಿ ಯಾವುದೇ ಒಂದು ಪಕ್ಷದ ಭಾಗವಾಗಬಾರದು. ಅವರು ಸಮುದಾಯದ ಜನರಿಗಾಗಿ ಇದ್ದಾರೆ. ಇತರರಿಗೆ ಮಾರ್ಗವನ್ನು ತೋರಿಸಬೇಕು ಮತ್ತು ಮಾದರಿಯಾಗಬೇಕು. ದಿಂಗಾಲೇಶ್ವರ ಶ್ರೀಗಳಿಗೆ ಇನ್ನೂ ಸಮಯವಿದೆ. ಅವರು ನಿರ್ಧಾರವನ್ನು ಪುನರ್ವಿಮರ್ಶಿಸಬಹುದು. ಮತದಾನವನ್ನು ಸೇಡು ತೀರಿಸಿಕೊಳ್ಳಲು ಅಥವಾ ಕೋಪವನ್ನು ವ್ಯಕ್ತಪಡಿಸಲು ಬಳಸಬಾರದು. ಇದು ಪ್ರಜಾಪ್ರಭುತ್ವ. ಶ್ರೀಗಳು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಅಥವಾ ನಾವು ಏಪ್ರಿಲ್ 18 ರಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಮಠಾಧೀಶರು ರಾಜಕೀಯ ಮಾಡದೆ ಧಾರ್ಮಿಕ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಬೇಕು. ದಿಂಗಾಲೇಶ್ವರ ಶ್ರೀಗಳು ಸ್ಪರ್ಧಿಸಬೇಕೆಂದರೆ ಕೇಸರಿ ವಸ್ತ್ರ ತೆಗೆದು ಪೀಠ ತೊರೆಯಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



