ಮೋದಿ ಸಮಾವೇಶಕ್ಕೆ ಆಹ್ವಾನ ಬಂದಿಲ್ಲ, ನಾನು ಹೋಗಲ್ಲ: ಸಿಎಂ ಭೇಟಿ ಬಳಿಕ ಶ್ರೀನಿವಾಸ್ ಪ್ರಸಾದ್ ಹೇಳಿಕೆ; ಬಿಜೆಪಿಯಲ್ಲಿ ತಳಮಳ
ಮೈಸೂರಿನಲ್ಲಿ ನಡೆಯಲಿರುವ ಮೋದಿ ಸಮಾವೇಶಕ್ಕೆ ಆಹ್ವಾನ ಬಂದಿಲ್ಲ, ಬರುವುದೂ ಇಲ್ಲ. ಕರೆದಿಲ್ಲ, ಕರೆಯುವುದೂ ಇಲ್ಲ. ನಾನು ಹೋಗುವುದೂ ಇಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಶನಿವಾರ ಭೇಟಿಯಾಗಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.
ಮೈಸೂರಿನಲ್ಲಿರುವ ಜಯಲಕ್ಷ್ಮಿಪುರಂ ನಲ್ಲಿರುವ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಕಾಂಗ್ರೆಸ್‌ಗೆ ಬಿಜೆಪಿಯ ಪ್ರಭಾವಿ ದಲಿತ ನಾಯಕನ ಬೆಂಬಲ ಪಡೆಯುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ, ಮುನಿಸು ಮರೆತು ಪ್ರಸಾದ್ ಅವರನ್ನು ಭೇಟಿಯಾಗಿರುವುದು ಚರ್ಚೆಗೆ ಕಾರಣವಾಗಿದೆ. ಉಭಯ ನಾಯಕರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಈ ಚುನಾವಣೆಯಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸುನೀಲ್ ಬೋಸ್ ಅವರನ್ನು ಬೆಂಬಲಿಸುವಂತೆ ಕೋರಿದರು ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಹಾಗೂ ಪ್ರಸಾದ್ ದೀರ್ಘಕಾಲದಿಂದ ಸ್ನೇಹಿತರು. ಜೊತೆಯಲ್ಲೇ ರಾಜಕಾರಣ ಮಾಡಿದವರು. ರಾಜಕೀಯವಾಗಿ ನಾನು ಕಾಂಗ್ರೆಸ್‌ನಲ್ಲಿದ್ದೆ, ಅವರು ಬಿಜೆಪಿಗೆ ಹೋಗಿದ್ದರು. ಅವರೀಗ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗಲು ಹಾಗೂ ಆರೋಗ್ಯ ವಿಚಾರಿಸಲು ಭೇಟಿಯಾಗಿದ್ದೆ ಎಂದು ತಿಳಿಸಿದರು.
ನಾನು ಯಾವ ಪಕ್ಷಕ್ಕೂ ಬೆಂಬಲ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಅವರಿಂದ ರಾಜಕೀಯವಾಗಿ ಬೆಂಬಲ ಕೋರುವುದರಲ್ಲಿ ಅರ್ಥವಿಲ್ಲ. ಹೀಗಾಗಿ ರಾಜಕೀಯವಾಗಿ ಏನನ್ನೂ ಚರ್ಚೆ ಮಾಡಿಲ್ಲ. ಆದರೆ, ಕಾಂಗ್ರೆಸ್ ಬಗ್ಗೆ ಅನುಕಂಪವಿರಲಿ ಎಂದು ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶ್ರೀನಿವಾಸ ಪ್ರಸಾದ್, ನಾಳೆ (ಏ.14) ಮೈಸೂರಿನಲ್ಲಿ ನಡೆಯಲಿರುವ ಮೋದಿ ಸಮಾವೇಶಕ್ಕೆ ಆಹ್ವಾನ ಬಂದಿಲ್ಲ, ಬರುವುದೂ ಇಲ್ಲ. ಕರೆದಿಲ್ಲ, ಕರೆಯುವುದೂ ಇಲ್ಲ. ನಾನು ಹೋಗುವುದೂ ಇಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಜೊತೆ ರಾಜಕೀಯದ ಚರ್ಚೆ ನಡೆದಿಲ್ಲ. ಅವರ ಭೇಟಿ ನನಗೆ ಸಹಜವಾಗಿಯೇ ಖುಷಿ ಕೊಟ್ಟಿದ್ದೆ. ಅವರು ನನ್ನ ಬೆಂಬಲ ಕೇಳಿದ್ದಾರೆ. ನಾನು ರಾಜಕೀಯವಾಗಿ ನಿವೃತ್ತಿಯಾಗಿದ್ದೇನೆ ಎಂದು ಹೇಳಿದ್ದೇನಷ್ಟೆ. ಚಾಮರಾಜನಗರದಲ್ಲಿ ಕಾಂಗ್ರೆಸ್‌ಗೆ ಉತ್ತಮವಾದ ವಾತಾವರಣ ಇದೆ ಎಂದು ಹೇಳಿದರು.
ಶ್ರೀನಿವಾಸ ಪ್ರಸಾದ್ ಅವರ ಬೆಂಬಲ ನಮಗಿದೆ ಎಂದು ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಬಹಿರಂಗ ಹೇಳಿಕೆ ನೀಡಿದ್ದು, ಸಹಜವಾಗಿ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಚಾಮರಾಜನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸುನೀಲ್ ಬೋಸ್, ಶ್ರೀನಿವಾಸ ಪ್ರಸಾದ್ ಅವರ ಸಂಪೂರ್ಣ ಬೆಂಬಲ ಕಾಂಗ್ರೆಸ್‌ಗೆ ಇದೆ. ಬಿಜೆಪಿ ಸಂಸದರ ಆಶೀರ್ವಾದ ಪಡೆದಿದ್ದೇನೆ. ಗೆದ್ದು ಬಾ ಎಂದು ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಬೆಂಬಲಿಗರು ಕೂಡ ಕಾಂಗ್ರೆಸ್ ಸೇರಿದ್ದಾರೆ. ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



