ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಲ್ಲ: ಮುರುಗೇಶ್ ನಿರಾಣಿ ತಿರುಗೇಟು
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುಳ್ಳು ಹೇಳುತ್ತಿದ್ದು, ಅವರು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಲ್ಲ. ಲಿಂಗಾಯತ ಬಣಜಿಗ ಸಮುದಾಯದಕ್ಕೆ ಸರಿದವರು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮುರುಗೇಶ್ ನಿರಾಣಿ ತಿರುಗೇಟು ನೀಡಿದ್ದಾರೆ.

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುಳ್ಳು ಹೇಳುತ್ತಿದ್ದು, ಅವರು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಲ್ಲ. ಲಿಂಗಾಯತ ಬಣಜಿಗ ಸಮುದಾಯದಕ್ಕೆ ಸರಿದವರು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮುರುಗೇಶ ನಿರಾಣಿ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆಗೆ ಮುನ್ನ ಲಕ್ಷ್ಮೀ ಹಟ್ಟಿಹೊಳಿಯಾಗಿದ್ದ ಅವರು ಹಿಂದೂ ಪರಂಪರೆಯಂತೆ ಈಗ ಅವರು ಮತ್ತು ಅವರ ಮಕ್ಕಳು ರವೀಂದ್ರ ಹೆಬ್ಬಾಳ್ಕರ್ ಸಮುದಾಯಕ್ಕೆ ಸೇರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪಂಚಮಸಾಲಿ ಸಮುದಾಯದ ಮತಗಳನ್ನು ಸೆಳೆಯಲು ಲಕ್ಷ್ಮಿ ಅಪ್ಪಟ ಸುಳ್ಳು ಹೇಳುತ್ತಿದ್ದಾರೆ. ಮೃಣಾಲ್ ಪಂಚಮಸಾಲಿ ಆಗಲು ಸಾಧ್ಯವೇ ಇಲ್ಲ ಎಂದು ಸವಾಲು ಹಾಕಿದರು.
ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಕಿತ್ತೂರು ರಾಣಿ ಚನ್ನಮ್ಮ ಅವರನ್ನು ಮತ್ತೊಬ್ಬರಿಗೆ ಹೋಲಿಕೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಮ್ಮನ್ನು ರಾಣಿ ಚನ್ನಮ್ಮ ಅವರೊಂದಿಗೆ ಹೋಲಿಸಿಕೊಳ್ಳುವುದು ಸೂಕ್ತವಲ್ಲ. ನಮ್ಮ ಮೀಸಲಾತಿ ಹೋರಾಟ ಕಳೆದ 25 ವರ್ಷಗಳಿಂದ ನಡೆಯುತ್ತಿದೆ. ಆದರೆ, ಲಕ್ಷ್ಮೀ ಹೆಬ್ಬಾಳ್ಕರ್ 3-4 ವರ್ಷಗಳಿಂದ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರವರ್ಗ ‘2ಎ’ ಮೀಸಲಾತಿ ಕೊಡಿಸಿದರೆ, ಬೆಳಗಾವಿಯಿಂದ ಕುಂದಾ ತಂದು ನಿಮ್ಮನ್ನು ಸನ್ಮಾನಿಸುವೆ ಎಂದು ಲಕ್ಷ್ಮಿ ಹೇಳಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೂರೇ ತಿಂಗಳಲ್ಲಿ ಮೀಸಲಾತಿ ಕೊಡಿಸುವೆ. ನಾನು ಮೀಸಲಾತಿ ಕೊಡಿಸಿದರೆ, ಚಿನ್ನದ ಬಳೆ ಕೊಟ್ಟು ಸನ್ಮಾನಿಸಬೇಕು ಎಂದಿದ್ದರು. ಈಗ ನಿಮ್ಮ ಸರ್ಕಾರವೂ ಬಂದಿದೆ. ಮಂತ್ರಿಯೂ ಆಗಿದ್ದೀರಿ. ಆದರೂ, ಮೀಸಲಾತಿ ನೀಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಮಾಡದೆ, ‘2ಡಿ’ ಮೀಸಲಾತಿ ಘೋಷಿಸಿತ್ತು. ಸಚಿವೆ ಹೆಬ್ಬಾಳಕರ್ ನಿಜವಾಗಿಯೂ ಪಂಚಮಸಾಲಿ ಸಮುದಾಯದವರಾಗಿದ್ದರೆ, ‘2ಎ’ ಮೀಸಲಾತಿ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳುತ್ತಿದ್ದರು. ‘ಈಗ ಹೆಬ್ಬಾಳ್ಕರ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೀಸಲಾತಿ ಸಿಕ್ಕ ಬಳಿಕವೇ ಸಂಪುಟ ಸೇರಬೇಕು. ನಮ್ಮ ಸಮಾಜಕ್ಕೆ ಮೀಸಲಾತಿ ಸಿಕ್ಕರೆ, ಹೆಬ್ಬಾಳಕರ ಅವರಿಗೆ 1 ಕೆ.ಜಿ ಚಿನ್ನಾಭರಣ ನೀಡಿ ಸನ್ಮಾನಿಸುತ್ತೇವೆ. ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯಾಗಿ, ಅವರಿಗೆ ಇದಕ್ಕಿಂತ ಹೆಚ್ಚಿನ ಸ್ಥಾನಮಾನ ನೀಡುವಂತೆ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ‘ಜಗದೀಶ ಶೆಟ್ಟರ್ ಹೊರಗಿನವರು’ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಅಮ್ಮಾ ನೀವೇ ಬೆಳಗಾವಿಯವರಲ್ಲ. ಖಾನಾಪುರ ತಾಲ್ಲೂಕಿನ ಹಟ್ಟಿಹೊಳಿಯವರು. ಇದು ಕೆನರಾ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಆದರೆ, ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಬಂದು ಶಾಸಕಿಯಾಗಿದ್ದಾರೆ. ಇದನ್ನು ಬೆಳಗಾವಿ ಜನರು ನಿಮ್ಮನ್ನು ಪ್ರಶ್ನಿಸಿಲ್ಲ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಶೆಟ್ಟರ್ ಬೆಳಗಾವಿ ಅಷ್ಟೇ ಅಲ್ಲ; ಭಾರತದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವ ಹಕ್ಕು ಹೊಂದಿದ್ದಾರೆ’ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



