ಹಾಸನ ರಾಜಕೀಯ ಬೇರೆ, ನನ್ನ ಹೆಂಡತಿ ರಾಜಕಾರಣ ಬೇರೆ, ಅನಿತಾ ರಾಜಕೀಯಕ್ಕೆ ಬಂದಿದ್ದು ಪಕ್ಷ ಉಳಿಸಲಿಕ್ಕೆ: ಹೆಚ್ ಡಿ ಕುಮಾರಸ್ವಾಮಿ
ನಿನ್ನೆ ಸೋಮವಾರ ಕೆ ಆರ್ ಪೇಟೆಯಲ್ಲಿ ಕಾರ್ಯಕ್ರಮ ಮುಗಿಸಿ ಬರುವಾಗ ತಡವಾಯಿತು. ಅದರಿಂದಾಗಿ ನಿನ್ನೆ ಜೆಡಿಎಸ್ ನ ಸ್ಪರ್ಧಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿಲ್ಲ ಹೊರತು ಬೇರೇನು ಗೊಂದಲಗಳಿಲ್ಲ. ಹಾಸನ ವಿಷಯದಲ್ಲಿಯೂ ಯಾವುದೇ ಸಮಸ್ಯೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು: ನಿನ್ನೆ ಸೋಮವಾರ ಕೆ ಆರ್ ಪೇಟೆಯಲ್ಲಿ ಕಾರ್ಯಕ್ರಮ ಮುಗಿಸಿ ಬರುವಾಗ ತಡವಾಯಿತು. ಅದರಿಂದಾಗಿ ನಿನ್ನೆ ಜೆಡಿಎಸ್ ನ ಸ್ಪರ್ಧಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿಲ್ಲ ಹೊರತು ಬೇರೇನು ಗೊಂದಲಗಳಿಲ್ಲ. ಹಾಸನ ವಿಷಯದಲ್ಲಿಯೂ ಯಾವುದೇ ಸಮಸ್ಯೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಇಂದು ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕೆಲವು ಮಾಧ್ಯಮಗಳಲ್ಲಿ ಅನಿತಾ ಕುಮಾರಸ್ವಾಮಿ ಹೆಸರು ತಂದಿದ್ದಾರೆ. ಭವಾನಿಗೆ ಟಿಕೆಟ್ ಕೊಡುವುದಾದರೆ ನನಗೆ ಕೂಡ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ವರದಿಗಳು ಬರುತ್ತಿವೆ. ನಮ್ಮ ಕುಟುಂಬದಲ್ಲಿ ಅನಿತಾ ಕುಮಾರಸ್ವಾಮಿಯವರನ್ನು ಎರಡು ಮೂರು ಬಾರಿ ಪಕ್ಷದ ಅಭ್ಯರ್ಥಿ ಇಲ್ಲದೇ ಇದ್ದಾಗ ನಿಲ್ಲಿಸಲಾಗಿತ್ತಷ್ಟೆ ಹೊರತು ಅವರಿಗೆ ಆಸಕ್ತಿಯಿರಲಿಲ್ಲ. ಕಾರ್ಯಕರ್ತರು ಮತ್ತು ದೇವೇಗೌಡರ ಸೂಚನೆ ಒತ್ತಡ ಮೇರೆಗೆ ಅನಿತಾ ಚುನಾವಣೆಗೆ ನಿಂತು ಗೆದ್ದರು. ಇನ್ನು ಮುಂದೆ ಅಭ್ಯರ್ಥಿಯಾಗಲು ಅವರಿಗೆ ಒಲವು ಇಲ್ಲ. ಚುನಾವಣಾ ರಾಜಕೀಯದಿಂದ ದೂರವುಳಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಅಭ್ಯರ್ಥಿ ಇಲ್ಲದಿದ್ದಾಗ ಪಕ್ಷದ ಗೌರವ ಉಳಿಸಲು ಕರೆದುಕೊಂಡು ಬಂದು ನಿಲ್ಲಿಸಿದೆವು, ನಾವೇ ಅವರನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಂಡಿದ್ದೇವೆ ಹೊರತು ಅವರಿಗೆ ಸ್ವಂತ ಆಸಕ್ತಿಯಿರಲಿಲ್ಲ. ಚುನಾವಣಾ ಕಣದಿಂದ ದೂರವುಳಿದು ನಿಖಿಲ್ ಕುಮಾರಸ್ವಾಮಿಗೆ ಬಿಟ್ಟುಬಿಟ್ಟಿದ್ದಾರೆ. ರಾಜಕೀಯದಿಂದ ದೂರ ಉಳಿದಿದ್ದಾರೆ ಎಂದರು.
ಹಾಸನ ರಾಜಕೀಯ ಬೇರೆ: ಹಾಸನ ಜಿಲ್ಲೆ ರಾಜಕಾರಣ ಬೇರೆ, ನನ್ನ ಹೆಂಡತಿ ರಾಜಕಾರಣ ಬೇರೆ, ಸೊಸೆಯಂದಿರ ಮಧ್ಯೆ ಹೊಡೆದಾಟ ಇಲ್ಲ, ನನ್ನ ಹೆಂಡತಿ ರಾಜಕೀಯಕ್ಕೆ ಬಂದಿದ್ದು ಪಕ್ಷ ಉಳಿಸಲಿಕ್ಕೆ. ಹಾಗಾಗಿ ಆ ಕೆಟಗರಿಕೆ ಇಲ್ಲಿಯದನ್ನು ಸೇರಿಸಬೇಕಾಗಿಲ್ಲ. ಪಕ್ಷ ಉಳಿಸಲು ಕೆಲವು ತೀರ್ಮಾನ ಮಾಡಿದ್ದೇನೆ. ಪಕ್ಷ ಕಟ್ಟಿ ಅದನ್ನು ಉಳಿಸಲು ಪಟ್ಟಿರುವ ಕಷ್ಟ ನನಗೆ ಗೊತ್ತು. ಹಾಗಾಗಿ ನನ್ನ ಕುಟುಂಬವನ್ನು ಅನಿತಾ ಕುಮಾರಸ್ವಾಮಿಯನ್ನು ಮಧ್ಯೆ ತರಬೇಡಿ, ಅವರು ಗೌರವಯುತವಾಗಿ ಕುಟುಂಬದ ಮರ್ಯಾದೆ ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.
ಮಂಡ್ಯದಲ್ಲಿ ಷಡ್ಯಂತ್ರ ನಡೆಯುತ್ತಿದೆ: ಮಂಡ್ಯದಲ್ಲಿ ಜೆಡಿಎಸ್ ನ್ನು ಸೋಲಿಸಲು ಕಾಂಗ್ರೆಸ್, ರೈತಸಂಘಗಳು ಒಟ್ಟಾಗುತ್ತಿರುವುದನ್ನು ನೋಡುತ್ತಿದ್ದೀರಿ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅದನ್ನು ಮಾಡಿದ್ದರು, ಈ ಬಾರಿ ಕೂಡ ಮುಂದುವರಿಸಿದ್ದಾರೆ ಎಂದರು.
ನಾನು ಕಿಂಗ್ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಯಕೆ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ನಾನು ಕಿಂಗ್ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಬಾರಿ ನಾವು 100-120 ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್ ಹಾಗೂ ಬಿಜೆಪಿ 60ರಿಂದ 70 ಸ್ಥಾನ ದಾಟುವುದಿಲ್ಲ. ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಗಳ ಕೋಟಾ ದೊಡ್ಡದಿದೆ. ಸಿದ್ದರಾಮಯ್ಯ ನಾನೇ ಸಿಎಂ ಆಗ್ತೀನಿ ಎಂದು ಅನ್ಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


