ತಾರಕಕ್ಕೇರಿದ ಬಿಜೆಪಿ ಸಂಸದ-ಕಾಂಗ್ರೆಸ್ ಶಾಸಕರ ಜಟಾಪಟಿ: ವೇದಿಕೆ ಮೇಲೆ ಮುನಿಸ್ವಾಮಿ-ನಾರಾಯಣಸ್ವಾಮಿ ಮಾತಿನ ಚಕಮಕಿ
ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಂಸದ ಎಸ್ ಮುನಿಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕ ಎಸ್‌ಎನ್ ನಾರಾಯಣಸ್ವಾಮಿ ನಡುವೆ ವೇದಿಕೆಯ ಮೇಲೆಯೇ ಮಾತಿನ ಚಕಮಕಿ ನಡೆದಿದ್ದು, ಬಹಿರಂಗವಾಗಿಯೇ ಕೈ-ಕೈ ಮಿಲಾಯಿಸಲು ಜನಪ್ರತಿನಿಧಿಗಳು ಮುಂದಾಗಿದ್ದ ಘಟನೆ ನಡೆದಿದೆ.

ಕೋಲಾರ: ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಂಸದ ಎಸ್ ಮುನಿಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕ ಎಸ್‌ಎನ್ ನಾರಾಯಣಸ್ವಾಮಿ ನಡುವೆ ವೇದಿಕೆಯ ಮೇಲೆಯೇ ಮಾತಿನ ಚಕಮಕಿ ನಡೆದಿದ್ದು, ಬಹಿರಂಗವಾಗಿಯೇ ಕೈ-ಕೈ ಮಿಲಾಯಿಸಲು ಜನಪ್ರತಿನಿಧಿಗಳು ಮುಂದಾಗಿದ್ದ ಘಟನೆ ನಡೆದಿದೆ.
ಪೊಲೀಸರು ಮಧ್ಯಪ್ರವೇಶಿಸಿ ಸಂಸದರನ್ನು ವೇದಿಕೆಯಿಂದ ಕರೆದುಕೊಂಡು ಹೋಗಿದ್ದಾರೆ. ಕೋಲಾರದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಮಾತನಾಡಿದರು. ಈ ವೇಳೆ ಅರಣ್ಯ ಜಮೀನು ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರಿಗೆ ಭೂಗಳ್ಳರನ್ನು ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದೀರಾ ಎಂದು ಕುಟುಕಿದರು.
ಇದರಿಂದ ಬೈರತಿ ಸುರೇಶ್ ಅವರ ಪಕ್ಕದಲ್ಲಿ ಕುಳಿತಿದ್ದ ಶಾಸಕ ಎಸ್‌ಎನ್ ನಾರಾಯಣಸ್ವಾಮಿ ಕೆರಳಿ ಸಂಸದ ಎಸ್ ಮುನಿಸ್ವಾಮಿ ಅವರಿಗೆ ಏಕವಚನದಲ್ಲಿಯೇ ಸವಾಲು ಹಾಕಿದರು. ಇದರಿಂದ ಕೆರಳಿದ ಸಂಸದ ಎಸ್ ಮುನಿಸ್ವಾಮಿ ಶಾಸಕರತ್ತ ನುಗ್ಗಿ ಬಂದರು. ಈ ವೇಳೆ ಅಲ್ಲಿಯೇ ಇದ್ದ ಎಸ್ ಪಿ ಸಂಸದರನ್ನು ಎಳೆದೊಯ್ದರು.
ನಂತರ ಮುನಿಸ್ವಾಮಿ ಅವರನ್ನು ಉನ್ನತ ಮಟ್ಟದ ಜಿಲ್ಲಾಧಿಕಾರಿಗಳು ಸಮಾಧಾನಪಡಿಸಿ ವೇದಿಕೆಗೆ ಹಿಂತಿರುಗಿ ಕರೆತಂದರು. ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಚುನಾಯಿತ ಪ್ರತಿನಿಧಿಗಳು ಈ ರೀತಿ ನಡೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಕಾರ್ಯಕ್ರಮವು ಜನರ ಹಿತದೃಷ್ಟಿಯಿಂದ ಕೂಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸುವುದು ಸಂಸದರು ಮತ್ತು ಶಾಸಕರ ಬದ್ಧ ಕರ್ತವ್ಯವಾಗಿದೆ. ತಮ್ಮ ವೈಯಕ್ತಿಕ ವಿಚಾರಗಳಿಂದ ದೂರವಿದ್ದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು. "ನಾನು ಅವರಿಬ್ಬರ ಜೊತೆ ಮಾತನಾಡುತ್ತೇನೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


