ಗೌಡ್ರೇ ಇನ್ನೂ ಎಷ್ಟು ಮನೆ ಹಾಳ್ ಮಾಡ್ತೀರಿ? ಯಾವ ಒಕ್ಕಲಿಗ ನಾಯಕರನ್ನು ಬೆಳೆಸಿದ್ದೀರಿ? ದಳಪತಿಗಳ ವಿರುದ್ಧ ಇಬ್ರಾಹಿಂ ಕಿಡಿ
ಇವತ್ತಿನವರೆಗೂ ದೇವೇಗೌಡರನ್ನು ನಾನು ನನ್ನ ತಂದೆ ಸಮಾನ ಅಂದುಕೊಂಡಿದ್ದೆ. ಇದೇನಾ ಮಗನಿಗೆ ಕೊಡುವ ಪ್ರೀತಿ ಎಂದು ಪ್ರಶ್ನಿಸಿದ್ದಾರೆ, ಇನ್ನೂ ನಾಲ್ಕು ವರ್ಷ ಇದ್ದ ನನ್ನ ಪರಿಷತ್ ಸ್ಥಾನ ಬಿಟ್ಟು ನಿಮ್ಮ ಬಳಿ ಬಂದೆ ಆದರೆ ನೀವು ಹೀಗೆ ಮಾಡಿದ್ದೀರಿ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ವಿಸರ್ಜಿಸಿ ಹೆಚ್ಡಿ ದೇವೇಗೌಡ ಆದೇಶ ಹೊರಡಿಸಿದ್ದಾರೆ. ಅಲ್ಲದೇ ತಾತ್ಕಾಲಿಕವಾಗಿ ಹೆಚ್ಡಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಲೋಕಸಭಾ ಚುನಾವಣೆಗೆ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ, ಪ್ರತ್ಯೇಕ ಸಭೆ ನಡೆಸುವುದರೊಂದಿಗೆ ತೀವ್ರ ಅಸಮಾಧಾನ ಹೊರಹಾಕಿದ್ದ ಸಿಎಂ ಇಬ್ರಾಹಿಂ ಇದೀಗ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳ ವಿಸರ್ಜನೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಚುನಾವಣಾ ಆಯೋಗದಲ್ಲಿ ನಿಮ್ಮ ನಿರ್ಧಾರ ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇವತ್ತಿನವರೆಗೂ ದೇವೇಗೌಡರನ್ನು ನಾನು ನನ್ನ ತಂದೆ ಸಮಾನ ಅಂದುಕೊಂಡಿದ್ದೆ. ಇದೇನಾ ಮಗನಿಗೆ ಕೊಡುವ ಪ್ರೀತಿ ಎಂದು ಪ್ರಶ್ನಿಸಿದ್ದಾರೆ, ಇನ್ನೂ ನಾಲ್ಕು ವರ್ಷ ಇದ್ದ ನನ್ನ ಪರಿಷತ್ ಸ್ಥಾನ ಬಿಟ್ಟು ನಿಮ್ಮ ಬಳಿ ಬಂದೆ ಆದರೆ ನೀವು ಹೀಗೆ ಮಾಡಿದ್ದೀರಿ ಎಂದು ಕಿಡಿಕಾರಿದ್ದಾರೆ.
ಯಾವ ಒಕ್ಕಲಿಗ ನಾಯಕರನ್ನು ಬೆಳೆಸಿದ್ದೀರಿ ನೀವು. ಇಷ್ಟು ದೊಡ್ಡ ವಯಸ್ಸಿನಲ್ಲಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮಗೆ ಕೈ ಮುಗಿತಿನಿ, ಇನ್ನೂ ಎಷ್ಟು ಮನೆ ಹಾಳು ಮಾಡಬೇಕು ಅಂತಾ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಇವತ್ತಿನ ಸಭೆಗೆ ನನಗೆ ಆಹ್ವಾನ ಇರಲಿಲ್ಲ. ಸಭೆ ಬಗ್ಗೆ ನನಗೆ ಗೊತ್ತೂ ಇಲ್ಲ. ಕಂಡೋರ ಮಕ್ಕಳು ಸಿಕ್ಕಿದ್ದೇವೆ ಅಂತ ಹೀಗೆಲ್ಲಾ ಮಾಡುವುದು ಸರಿಯಲ್ಲ ಗೌಡ್ರೇ. ನನಗೆ ಅಧಿಕಾರದ ಆಸೆ ಇಲ್ಲ. ಜೆಡಿಎಸ್ ಕುಟುಂಬದ ಸ್ವತ್ತು ಅಂತ ತೋರಿಸಿಬಿಟ್ಟಿರಿ. ಗೌಡರಿಗೆ ಸ್ವಲ್ಪವಾದರೂ ಪ್ರಜ್ಞೆ ಬೇಡವಾ? ನನ್ನ ಜೊತೆ ಮಾತಾಡಬೇಕು ಅಂತ ಅನ್ನಿಸಲಿಲ್ವಾ? ರಾತ್ರಿ ಹಗಲು ಓಡಾಡಿ ಅವರ ಮಗನನ್ನು ಗೆಲ್ಲಿಸಿದ್ದೇನೆ. ನನಗೆ ಅವರು ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ನಾನು ಕೋರ್ಟ್ ಗೆ ಹೋಗುತ್ತೇನೆ, ವಕೀಲರಿಂದ ನಿಮ್ಮ ಆದೇಶಕ್ಕೆ ತಡೆಯಾಜ್ಞೆ ತರುತ್ತೇನೆ, ಅವರಿಗೆ ನನ್ನನ್ನು ತೆಗೆಯುವ ಅಧಿಕಾರ ಇಲ್ಲ. ಕಾರ್ಯಕಾರಿ ಸಮಿತಿಯ 3/2 ನೇ ಸದಸ್ಯರ ಅನುಮತಿ ಪಡೆದು ಮೊದಲು ನನಗೆ ನೋಟಿಸ್ ಕೊಡಬೇಕು. ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಏನಿರುತ್ತದೆ ಅಂತ ಕಾದು ನೋಡಿ ಎಂದು ಸವಾಲು ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


