'ಜೇನು ನೊಣಗಳಿಂದ ಕಚ್ಚಿಸಿಕೊಂಡು ಜೇನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ': ಬಸವರಾಜ ಬೊಮ್ಮಾಯಿ
ಚುನಾವಣೆ ಹೊತ್ತಿನಲ್ಲಿ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಹೆಜ್ಜಾಗುತ್ತಿವೆ. ಬೊಮ್ಮಾಯಿ ಶಕುನಿಯ ಹಾಗೆ ಎಂಬ ಕಾಂಗ್ರೆಸ್ ನಾಯಕ ರಣ್ದೀಪ್ ಸಿಂಗ್ ಸುರ್ಜೆವಾಲಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಜೇನು ನೊಣಗಳಿಂದ ಕಚ್ಚಿಸಿಕೊಂಡರೂ ನಾನು ಜೇನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ. ಆದರೆ ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದ

ಹುಬ್ಬಳ್ಳಿ: ಚುನಾವಣೆ ಹೊತ್ತಿನಲ್ಲಿ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಹೆಜ್ಜಾಗುತ್ತಿವೆ. ಬೊಮ್ಮಾಯಿ ಶಕುನಿಯ ಹಾಗೆ ಎಂಬ ಕಾಂಗ್ರೆಸ್ ನಾಯಕ ರಣ್ದೀಪ್ ಸಿಂಗ್ ಸುರ್ಜೆವಾಲಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಜೇನು ನೊಣಗಳಿಂದ ಕಚ್ಚಿಸಿಕೊಂಡರೂ ನಾನು ಜೇನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ. ಆದರೆ ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಒಳ ಮೀಸಲಾತಿ ವಿಚಾರ 30 ವರ್ಷಗಳಿಂದ ಇತ್ತು. ಆದರೆ ಕಾಂಗ್ರೆಸ್ ನಾಯಕರು ಆ ಜನಾಂಗದವರ ಮೂಗಿಗೆ ತುಪ್ಪ ಹಚ್ಚಿ ಕೊನೆ ಘಳಿಗೆಯಲ್ಲಿ ಕೈಕೊಟ್ಟಿತು. ನಮಗೆ ಬದ್ಧತೆ ಇದೆ. ಹೀಗಾಗಿ ಇದರ ಬಗ್ಗೆ ಅಧ್ಯಯನ ಮಾಡಿ, ಸಚಿವ ಸಂಪುಟ ಉಪ ಸಮಿತಿ ರಚಿಸಿ, ಕಾನೂನು ಪ್ರಕಾರ ಮಾಡಿದ್ದೇವೆ ಎಂದರು.
ನಾವು ಮಾಡಲು ಆಗದ್ದನ್ನು ಬಿಜೆಪಿಯವರು ಮಾಡಿದ್ದಾರೆ ಅಂತ ಕಾಂಗ್ರೆಸ್ನವರು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಆದರೆ ಅದ್ಯಾವುದಕ್ಕೂ ಬೆಲೆ ಇಲ್ಲ. ಅವರು ಯಾವಾಗಲೂ ಎಸ್ಸಿ ಎಸ್ಟಿ ಸಮುದಾಯದವರನ್ನು ಯಾಮಾರಿಸಿಕೊಂಡೇ ಬಂದಿದ್ದರು. ಹೇಳಿಕೆಗಳ ಮೂಲಕ ಸಹಾನುಭೂತಿ ತೋರಿಸಿ ಈ ಚುನಾವಣೆಯಲ್ಲಿಯೂ ಯಾಮಾರಿಸಬಹುದು ಅಂತ ಅಂದುಕೊಂಡಿದ್ದರು ಎಂದು ಟೀಕಿಸಿದರು.
ಸಾಮಾಜಿಕ, ಅಭಿವೃದ್ಧಿ ವಿಚಾರದಲ್ಲಿ ಸಂಘ ಸಂಸ್ಥೆಗಳ ಜೊತೆ ಚರ್ಚಿಸಿ ಹಲವಾರು ತೀರ್ಮಾನ ಮಾಡಿದ್ದೇವೆ. ನಿರ್ಣಾಯಕ ತೀರ್ಮಾನ ಕೈಗೊಳ್ಳಲು ನಮ್ಮ ಬದ್ಧತೆಯೇ ಕಾರಣವಾಗಿದೆ. ಆ ಜನಾಂಗಕ್ಕೆ ನ್ಯಾಯ ಕೊಡಿಸುವವರೆಗೂ ವಿಶ್ರಮಿಸಲ್ಲ. ಇವರೆಲ್ಲ ಜೇನುಗೂಡಿಗೆ ಕೈಹಾಕುತ್ತಿದ್ದಾರೆ ಅಂತ ಹೇಳುತ್ತಿದ್ದರು. ಆದರೆ ಜೇನು ಗೂಡಿಗೆ ಕೈ ಹಾಕದೇ ಇದ್ದಲ್ಲಿ ಜೇನು ಸಿಗಲ್ಲ ಅಂತ ಗೊತ್ತಿತ್ತು. ನಾನು ಜೇನುಗೂಡಿಗೆ ಕೈ ಹಾಕುತ್ತೇನೆ, ಜೇನು ನೊಣದಿಂದ ಕಚ್ಚಿಸಿಕೊಂಡರೂ ಪರ್ವಾಗಿಲ್ಲ ಆ ಜನಾಂಗಕ್ಕೆ ಜೇನಿನ ಹನಿಯನ್ನು ಕೊಡಿಸಲು ಸಿದ್ಧ ಅಂತ ಹೇಳಿದ್ದೆ, ಈಗ ಅದನ್ನು ಮಾಡಿದ್ದೇನೆ ಎಂದರು.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಶಕುನಿ ಇದ್ದಂತೆ ಎಂದ ಸುರ್ಜೆವಾಲಾ: ಹೇಳಿಕೆ ಕಾಂಗ್ರೆಸ್ನ ವರ್ತನೆ ತೋರಿಸುತ್ತದೆ ಎಂದ ಅರುಣ್ ಸಿಂಗ್
ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಒಬಿಸಿ ಮೀಸಲಾತಿ ರದ್ದುಗೊಳಿಸಿ ಇಡಬ್ಲ್ಯುಎಸ್ಗೆ ಸೇರ್ಪಡೆ ಮಾಡಲಾಗಿದೆ. ಇದನ್ನ ಖಂಡಿಸಿರುವ ವಿಪಕ್ಷಗಳು ಅಲ್ಪಸಂಖ್ಯಾತರಿಗೆ ದೊಡ್ಡ ಅನ್ಯಾಯ ಮಾಡಿದೆ ಎಂದು ಆರೋಪಿಸಿವೆ. ಮೊದಲು ಶೇಕಡಾ4 ಪರ್ಸೆಂಟ್ ಮೀಸಲಾತಿ ಇತ್ತು. ಈಗ ಶೇಕಡಾ 10 ರಷ್ಟು ಮೀಸಲಾತಿ ಇರುವ ಕಡೆ ಹಾಕಿದ್ದೇವೆ. ಅದು ಹೇಗೆ ಅನ್ಯಾಯ ಆಗುತ್ತದೆ? ಅಲ್ಪಸಂಖ್ಯಾತರ ಹಿತರಕ್ಷಣೆ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು.
ಚುನಾವಣಾ ಪ್ರಕ್ರಿಯೆ ಮಹದಾಯಿ ಯೋಜನೆಗೆ ತೊಡಕಾಗಲ್ಲ: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪದಲ್ಲಿರುವುದರಿಂದ ಮಹದಾಯಿ ಯೋಜನೆ ಕಾಮಗಾರಿ ಆರಂಭಕ್ಕೆ ತೊಡಕಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಚುನಾವಣಾ ಪ್ರಕ್ರಿಯೆ ಇದಕ್ಕೆ ತೊಡಕಾಗುವುದಿಲ್ಲ. ನೀತಿ ಸಂಹಿತೆ ಜಾರಿಯಾದರೂ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಅಷ್ಟರೊಳಗಾಗಿ ಅರಣ್ಯ ಇಲಾಖೆ ಅನುಮೋದನೆ ಸಿಗುವ ವಿಶ್ವಾಸವಿದೆ. ಚುನಾವಣೆ ನಂತರ ಕಾಮಗಾರಿ ಆರಂಭವಾಗುತ್ತದೆ ಎಂದರು.
ಚುನಾವಣೆ ದಿನಾಂಕ ಘೋಷಣೆ ನಂತರ ಬಿಜೆಪಿ ಪಟ್ಟಿ ರಿಲೀಸ್: ಚುನಾವಣೆ ದಿನಾಂಕ ಘೋಷಣೆ ಆದ ನಂತರವೇ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತದೆ. ಸರಿಯಾದ ಸಮಯದಲ್ಲಿ ನಮ್ಮ ಪಟ್ಟಿ ಬಿಡುಗಡೆಯಾಗುತ್ತದೆ. ಇವತ್ತಿನ ಕೋರ್ ಕಮಿಟಿಯಲ್ಲಿ ಚುನಾವಣಾ ನಿರ್ವಹಣೆ ಬಗ್ಗೆ ಚರ್ಚೆಯಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


