ಮಕ್ಮಲ್ ಟೋಪಿ ಹಾಕಿದ ಷರತ್ತಿನ ಸರ್ಕಾರವನ್ನು ಜನ ಕ್ಷಮಿಸುವುದಿಲ್ಲ: ಎಚ್.ಡಿ ಕುಮಾರಸ್ವಾಮಿ
ಜನರ ತಲೆ ಮೇಲೆ ಐದು ಮಕ್ಮಲ್ ಟೋಪಿಗಳನ್ನು ಹಾಕಿದ ಈ ‘ಷರತ್ತು ಸರ್ಕಾರ’ವನ್ನು ಜನರು ಕ್ಷಮಿಸುವುದಿಲ್ಲ. ಕಂಡಿಷನ್ಸ್ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಿಯೇ ಕಲಿಸುತ್ತಾರೆ .

ಬೆಂಗಳೂರು: ಜನರ ತಲೆ ಮೇಲೆ ಐದು ಮಕ್ಮಲ್ ಟೋಪಿಗಳನ್ನು ಹಾಕಿದ ಈ ‘ಷರತ್ತು ಸರ್ಕಾರ’ವನ್ನು ಜನರು ಕ್ಷಮಿಸುವುದಿಲ್ಲ. ಕಂಡಿಷನ್ಸ್ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಿಯೇ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಗ್ಯಾರಂಟಿ ಯೋಜನೆಗಳ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ಷರತ್ತು ಸಹಿತವಾಗಿ ಘೋಷಣೆ ಮಾಡಲಾಗಿರುವ 5 ಗ್ಯಾರಂಟಿಗಳ ಬಗ್ಗೆ ಈಗಾಗಲೇ ಜನರಿಗೆ ಒಂದು ನಿರ್ದಿಷ್ಟ ಅಭಿಪ್ರಾಯ ಬಂದಿದೆ. ಹರುಷದ ಕೂಳಿಗೆ ಆಸೆಪಟ್ಟು ವರುಷದ ಕೂಳು ಕಳೆದುಕೊಂಡರು ಎನ್ನುವ ಮಾತನ್ನು ಹೇಳಲಾರೆ. ಆದರೆ, ರಾಜ್ಯದ ಜನತೆಗೆ ಇದರ ಒಳಮರ್ಮ ಅರ್ಥವಾಗಲು ಬಹಳ ದಿನ ಬೇಕಿಲ್ಲ’ ಎಂದು ಲೇವಡಿ ಮಾಡಿದ್ದಾರೆ.
ಗ್ಯಾರಂಟಿಗಳ ಬಗ್ಗೆ ಚರ್ಚೆ ಅಥವಾ ವಿಮರ್ಶೆಗೆ ನನಗೆ ಆತುರವಿಲ್ಲ, ನನಗೆ ತಾಳ್ಮೆ ಇದೆ. ಆದರೆ, ಮತ ಗಳಿಕೆಗೆ ಮುನ್ನ ಕೊಟ್ಟ ಭರವಸೆಗಳು ಅಧಿಕಾರಕ್ಕೆ ಬಂದ ಮೇಲೆ ‘ಷರತ್ತು ಸಹಿತ’ ಎಂದಾಗಿದ್ದರ ಬಗ್ಗೆ ನನಗೆ ನೋವಿದೆ. ಜನರ ಸಹನೆ ಎನ್ನುವುದು ಖಂಡಿತಾ ಕಟ್ಟೆಯೊಡೆಯುತ್ತದೆ. ನಾನು ಕಾಯುತ್ತೇನೆ ಹಾಗೂ ಅವರ ಜತೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಹಾಲಿ ಮುಖ್ಯಮಂತ್ರಿಗಳು 2013-18ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ 2.75 ಲಕ್ಷದಷ್ಟು ಸರಕಾರಿ ಹುದ್ದೆಗಳನ್ನು ಖಾಲಿ ಇಟ್ಟಿದ್ದರು. ಆ ಖಾಲಿ ಹುದ್ದೆಗಳನ್ನು ತುಂಬಲು ಅವರು ಆ ಸಂದರ್ಭದಲ್ಲಿ ಎಳ್ಳಷ್ಟೂ ಪ್ರಯತ್ನ ಮಾಡಲಿಲ್ಲ. ಅಂದು ಕಾಣದ ನಿರುದ್ಯೋಗ ಈ ಚುನಾವಣೆಗೆ ಮುನ್ನ ಕಂಡಿತು, ಮತ ಫಸಲು ತಂದುಕೊಟ್ಟಿದೆ’ ಎಂದು ಎಚ್‌ಡಿಕೆ ತಿಳಿಸಿದ್ದಾರೆ.
ಮುಗ್ಧ ಯುವಜನರಿಗೆ 3,000 ರು.ಮಾಸಿಕ ಭತ್ಯೆ ಎಂದು ಗ್ಯಾರಂಟಿ ಕೊಟ್ಟಾಗ ಷರತ್ತಿನ ಬಗ್ಗೆ ನಾಲಿಗೆ ಮೌನವಾಗಿತ್ತು! ಅದೇ ಯುವಜನರ ವೋಟಿನಿಂದ ಪಟ್ಟಕ್ಕೇರಿದ ಮೇಲೆ ‘ಪ್ರಸಕ್ತ ಸಾಲಿಗೆ ಮಾತ್ರ’ ಎನ್ನುವ ಷರತ್ತು ವಿಧಿಸಿ 24 ತಿಂಗಳಷ್ಟೇ ಭತ್ಯೆ ಎಂದಿದ್ದು ನನ್ನನ್ನು ಬಾಧಿಸಿದೆ. ಯುವಕರಿಗೆ ಟೋಪಿ ಹಾಕಿದ ‘ನಕಲಿ ಗ್ಯಾರಂಟಿ’ಗೆ ಶಾಸ್ತಿ ದೂರವಿಲ್ಲ ಎಂದು ಸರ್ಕಾರವನ್ನು ಕುಟುಕಿದ್ದಾರೆ.
‘ನಾನು ತುಟಿಗೆ ತುಪ್ಪ ಸವರುವವರನ್ನು ನೋಡಿದ್ದೆ. ಹಣೆಗೆ ತುಪ್ಪ ಸವರುವವರನ್ನು ನೋಡಿರಲಿಲ್ಲ. ಗ್ಯಾರಂಟಿ ಕಾರ್ಡ್‌ಗೆ ಸಹಿ ಹಾಕಿ ಕೊಟ್ಟು ಯಾಮಾರಿಸಿದ ಮಹಾನುಭಾವರು ಹಣೆಗೆ ತುಪ್ಪ ಸವರಿ ನಯಗಾರಿಕೆಯಿಂದ ಭಂಡತನ ಮೆರೆದು ಯುವಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಯುವಜನರೂ ತಮ್ಮ ಶಕ್ತಿಯನ್ನು ತೋರಿಸಲಿದ್ದಾರೆ, ನಾನು ಕಾಯುತ್ತೇನೆ’ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
‘ಈಗ ಒಂದು ಗ್ಯಾರಂಟಿ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಉಳಿದವುಗಳ ಬಗ್ಗೆ ಕ್ರಮೇಣ ಮಾತನಾಡುತ್ತೇನೆ. ಜನರ ತಲೆ ಮೇಲೆ ಐದು ಮಕ್ಮಲ್ ಟೋಪಿಗಳನ್ನು ಹಾಕಿದ ಈ 'ಷರತ್ತು ಸರಕಾರ'ವನ್ನು ಆ ಜನರು ಕ್ಷಮಿಸುವುದಿಲ್ಲ. ಕಂಡಿಷನ್ಸ್ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಿಯೇ ಕಲಿಸುತ್ತಾರೆ’ ಎಂದು ಎಚ್‌ಡಿಕೆ ಭವಿಷ್ಯ ನುಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


