ಗೌಡರ ಹೆಸರು ಹೇಳದಿದ್ದರೆ ತಮ್ಮ ಬೇಳೆಕಾಳು ಬೇಯಲ್ಲ; ಹೀಗಾಗಿ ನಿತ್ಯ ದೇವೇಗೌಡರ ಹೆಸರೆತ್ತಿಯೇ ಮಾತು ಆರಂಭ!
ಒಕ್ಕಲಿಗ ಸಮುದಾಯದಲ್ಲಿ ಬೇರೆ ನಾಯಕರು ಬೆಳೆಯುವುದನ್ನು ಎಚ್.ಡಿ.ಕುಮಾರಸ್ವಾಮಿ ಸಹಿಸುವುದಿಲ್ಲ. ಒಕ್ಕಲಿಗರು ಎಂಬ ಕಾರಣಕ್ಕೇ ನಮ್ಮ ವಿರುದ್ಧ ನಿಂತಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಶೃಂಗೇರಿ: ಒಕ್ಕಲಿಗ ಸಮುದಾಯದಲ್ಲಿ ಬೇರೆ ನಾಯಕರು ಬೆಳೆಯುವುದನ್ನು ಎಚ್.ಡಿ.ಕುಮಾರಸ್ವಾಮಿ ಸಹಿಸುವುದಿಲ್ಲ. ಒಕ್ಕಲಿಗರು ಎಂಬ ಕಾರಣಕ್ಕೇ ನಮ್ಮ ವಿರುದ್ಧ ನಿಂತಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಅವರು ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲೆಯ ಚಂದ್ರೇಗೌಡ ಎಂಬ ಅಧಿಕಾರಿಯನ್ನು ವರ್ಷದಲ್ಲಿ ಏಳು ಬಾರಿ ವರ್ಗಾವಣೆ ಮಾಡಿದ್ದರು. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ನಾಗರಾಜ್ ಅವರನ್ನು ತಪ್ಪಿಲ್ಲದಿದ್ದರೂ ಅಮಾನತು ಮಾಡಿದ್ದರು. ಇಬ್ಬರೂ ಮಂಡ್ಯದವರು, ಒಕ್ಕಲಿಗ ಸಮುದಾಯದವರು ಎಂದು ತಿಳಿಸಿದರು.
ಒಕ್ಕಲಿಗರಿಗೆ ಹೆಚ್ಚು ಅವಕಾಶ ಸಿಗಬಾರದು ಎಂಬುದು ಅವರಲ್ಲಿದೆ. ಆದರೆ, ಅವರ ಕುಟುಂಬದ ಬಗ್ಗೆ ನಮಗೆ ಗೌರವ ಇದೆ. ಕುಮಾರಸ್ವಾಮಿ 10 ಬಾರಿ ಮುಖ್ಯಮಂತ್ರಿಯಾದರೂ ನಮಗೆ ಖುಷಿ ಇದೆ. ನಮ್ಮನ್ನು ಸಹಿಸುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ ಎಂದರು.
ಹಳೇ ಮೈಸೂರು ಭಾಗದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ನಾನು ಒಕ್ಕಲಿಗ ನಾಯಕ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯಾಗಿದ್ದವರು. ನಾವೆಲ್ಲಾ ಅವರನ್ನು ಪ್ರೀತಿ ಮಾಡುತ್ತೇವೆ. ಕುಮಾರಸ್ವಾಮಿ ದೇವೇಗೌಡರ ಹೆಸರನ್ನು ತರದೆ ರಾಜಕೀಯ ಮಾಡುವುದಕ್ಕೆ ಆಗುವುದಿಲ್ಲ. ಅದಕ್ಕಾಗಿ ನಿತ್ಯ ದೇವೇಗೌಡರ ಹೆಸರೆತ್ತುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸದನದಲ್ಲಿ ನಾವು ದೇವೇಗೌಡರ ಹೆಸರು ಬಳಸಿಲ್ಲ. ದೇವೇಗೌಡರ ಹೆಸರು ಬಳಸುವವರೇ ಅವರು. ಗೌಡರ ಹೆಸರು ಹೇಳದಿದ್ದರೆ ತಮ್ಮ ಬೇಳೆಕಾಳು ಬೇಯಲ್ಲ ಅನ್ನುವುದು ಅವರಿಗೂ ಗೊತ್ತಿದೆ.
ಆದ್ದರಿಂದಲೇ ನಿತ್ಯ ದೇವೇಗೌಡರ ಹೆಸರೆತ್ತಿಯೇ ಮಾತು ಆರಂಭಿಸುತ್ತಾರೆ ಎಂದು ತಿರುಗೇಟು ನೀಡಿದರು.
ಪೆನ್‌ಡ್ರೈವ್ ದಾಖಲೆ ನೀಡಲಿ:
ವರ್ಗಾವಣೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಮ್ಮನೆ ಆರೋಪ ಮಾಡಿದರೆ ಸಾಲದು.
ಸರ್ಕಾರದ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಸರ್ಕಾರದ ವಿರುದ್ಧ ಅವರ ಬಳಿ ಯಾವುದೇ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಸಂತೋಷ. ಬೇಕಿದ್ದರೆ ಸದನದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಸುಮ್ಮನೆ ದಾಖಲೆ ಇದೆ ಎಂದು ಹೇಳಿ ಈ ಹಿಂದೆ ಜನಾರ್ದನರೆಡ್ಡಿ ಸಿಡಿಸಿದ ಸಿಡಿ ಬಾಂಬ್ ರೀತಿ ಆಗುವುದು ಬೇಡ ಎಂದು ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


