ಹಿರಿಯ ಮುತ್ಸದ್ಧಿಯನ್ನೇ ಆಚೆ ಕಳಿಸಿದವರಿಗೆ ನಾನು ಯಾವ ಲೆಕ್ಕ? ಸ್ವರೂಪ್ ರಾಜಕೀಯ ಜೀವನದ ಜೊತೆ ಚೆಲ್ಲಾಟ; ಎ.ಟಿ ರಾಮಸ್ವಾಮಿ
ಇದು ರಾಜಕೀಯ ಸಂಕ್ರಮಣ ಕಾಲ. ನಾನು ಒಳ್ಳೆಯವನಾದರೆ ಆಶೀರ್ವಾದ ಮಾಡಿ, ಇಲ್ಲವಾದರೆ ಬೇಡ. ಯಾರಿಗೂ ಅನುಮಾನ ಬೇಡ ನಾನು ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ಹೇಳಿದ್ದಾರೆ

ಹಾಸನ: ಇದು ರಾಜಕೀಯ ಸಂಕ್ರಮಣ ಕಾಲ. ನಾನು ಒಳ್ಳೆಯವನಾದರೆ ಆಶೀರ್ವಾದ ಮಾಡಿ, ಇಲ್ಲವಾದರೆ ಬೇಡ. ಯಾರಿಗೂ ಅನುಮಾನ ಬೇಡ ನಾನು ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರು ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ. ಎಲ್ಲ ಪಕ್ಷದ ನಾಯಕರು ನನ್ನ ಜೊತೆ ಮಾತನಾಡುತ್ತಿರೋದು ನಿಜ. ಕ್ಷೇತ್ರದ ಜನರ ಜತೆ ಚರ್ಚೆಮಾಡಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.
ರಾಜಕೀಯ ಯುದ್ದ ಆರಂಭ ಆಗಿದೆ. ಎಲ್ಲಿಯವರೆಗೆ ಸಹಿಸೋದು ಹೇಳಿ. ಭೂಮಿ ಮಟ್ಟದವರೆಗೆ ಬಾಗಬಹುದು ಅದಕ್ಕಿಂತ ಕೆಳಗೆ ಬಾಗೋಕೆ ಆಗತ್ತಾ? ಮನೆಯ ಒಳ ಕರೆದು ಕೂರಿಸಿ ಮಾತನಾಡುವ ಸ್ಥಿತಿ ಕೂಡ ಇಲ್ಲ. ಹಾಸನದಲ್ಲಿ ಗುಲಾಮಗಿರಿ ಇದೆ, ಕೈಕಟ್ಟಿ ನಿಲ್ಲಬೇಕಿದೆ. ಆದಿ ಇರೋದಕ್ಕೆ ಅಂತ್ಯ ಇದ್ದೇ ಇರುತ್ತದೆ. ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುತ್ತಾರೆ. ಅವರೇ ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಾಗ ಏನಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕಾಂಗ ಸಭೆಗೆ ಎ.ಟಿ.ರಾಮಸ್ವಾಮಿ ಬಂದಿಲ್ಲ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಹೆಚ್ಡಿ ಕುಮಾರಸ್ವಾಮಿ ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಸತ್ಯ ಮರೆಮಾಚಬಾರದು. ಕುಮಾರಸ್ವಾಮಿಯೇ ಶಾಸಕಾಂಗ ಸಭೆಗೆ ಬಂದಿರಲಿಲ್ಲ, ನಾನು ಹೋಗಿದ್ದೆ. ಬೇಕಿದ್ದರೆ ಸಹಿ ಪುಸ್ತಕ ತೆಗೆದು ನೋಡಿ ಎಂದರು.
ಕ್ಷೇತ್ರದಲ್ಲಿ ಒಬ್ಬರು ನಾನೇ ಅಭ್ಯರ್ಥಿ ಎಂದು ಸಭೆ ಮಾಡುತ್ತಿದ್ದಾರೆ. ರೇವಣ್ಣ ಅನುಮತಿ ಇಲ್ಲದೆ ಇದೆಲ್ಲವೂ ನಡೆಯಲು ಸಾಧ್ಯವೇ? ಲೋಕಸಭೆ ಅಭ್ಯರ್ಥಿ ಆಯ್ಕೆ ಮಾಡುವಾಗ ಪ್ರಜ್ವಲ್ ಹೆಸರೇ ಇರಲಿಲ್ಲ. ಕಾರಣ ದೇವೇಗೌಡರು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿರಲಿಲ್ಲ. ಪ್ರಜ್ವಲ್ ಹೆಸರೇಳದಿದ್ದಕ್ಕೆ ಅಂದಿನಿಂದ ನನ್ನ ಮೇಲೆ ದ್ವೇಷ ಶುರುವಾಯ್ತು. ಹಿರಿಯ ಮುತ್ಸದ್ಧಿಯನ್ನೇ ಮನೆ, ಜಿಲ್ಲೆಯಿಂದ ಆಚೆ ಕಳಿಸಿದವರು ಇವರು. ಇನ್ನು ಇವರ ಮುಂದೆ ನಾನು ಯಾವ ಲೆಕ್ಕ. ಈಗಲೂ ಆ ಹಿರಿಯ ಜೀವ ನೋವಿನಿಂದ ನರಳಾಡುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕಳೆದ ಚುನಾವಣಾ ವೇಳೆ ಸೂಟ್ಕೇಸ್ ಕೊಟ್ಟವರಿಗೆ ಟಿಕೆಟ್ ಎಂದಿದ್ದರೂ. ಸಂಸದ ಪ್ರಜ್ವಲ್ ರೇವಣ್ಣ ಮಾತಿಗೆ ಯಾವುದೇ ಲಂಗು ಲಗಾಮು ಇಲ್ಲವೇ? ಹಾಗಿದ್ದರೆ ಟಿಕೆಟ್ ಕೊಡುತ್ತಿದ್ದವರು ಯಾರು? ಬೇರೆ ಯಾರಾದರೂ ಈ ಮಾತನ್ನು ಹೇಳಿದ್ದರೆ ಸುಮ್ಮನೆ ಬಿಡುತ್ತಿದ್ದರೇ? ನಾನು ಏನೂ ಪ್ರಶ್ನೆಯನ್ನೇ ಮಾಡಬಾರದು ಎಂದಾದರೆ ನಾನ್ಯಾಕೆ ಶಾಸಕನಾಗಿ ಇರಬೇಕು? ನಾನು ಎದೆ ಗುಂದೊದಿಲ್ಲ, ಇದನ್ನೆಲ್ಲ ಪ್ರೀತಿಯಿಂದಲೇ ಸ್ವೀಕಾರ ಮಾಡುತ್ತೇನೆ. ನನ್ನ ಋಣ ಇರೋದು ಜನರ ಮೇಲೆ. ರೈತರ ಭೂ ಮಂಜೂರಾತಿ ಮಾಡಬೇಡಿ ಅಂತಾರೆ. ಜನರ ಮುಂದೆ ರೈತರ ಪಕ್ಷ ರೈತರ ಪರ ಅಂತಾರೆ. ಇವರಿಗೆ ಬಹುಪರಾಕ್ ಹಾಕಿಕೊಂಡು ನಾನಿರಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


