ಸಿಟಿ ರವಿ ಕೃತ್ಯದಿಂದ ತಮ್ಮ ವಾಂತಿಯನ್ನು ತಾವೇ ತಿನ್ನುವಂತಾಗಿದೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮಾಂಸದಹಾರ ಸೇವಿಸಿ ದೇವಸ್ಥಾನಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು,....

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮಾಂಸದಹಾರ ಸೇವಿಸಿ ದೇವಸ್ಥಾನಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸಿಟಿ ರವಿ ಕೃತ್ಯದಿಂದ ತಮ್ಮ ವಾಂತಿಯನ್ನು ತಾವೇ ತಿನ್ನುವಂತಾಗಿದೆ ಎಂದು ಗುರುವಾರ ತಿರುಗೇಟು ನೀಡಿದ್ದಾರೆ.
ಈ ಹಿಂದೆ ನನ್ನ ವಿರುದ್ಧ ಮೀನು ತಿಂದು ದೇಗುಲಕ್ಕೆ ಹೋದೆ ಎಂದು ಅಪಪ್ರಚಾರ ಮಾಡಿದ್ದವರೆಲ್ಲ ಸಿಟಿ ರವಿ ಕೃತ್ಯದಿಂದ ತಮ್ಮ ವಾಂತಿಯನ್ನು ತಾವೇ ತಿನ್ನುವಂತಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮಾಂಸ ತಿನ್ನುವುದು ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಹೋಗದಿರುವುದು ವೈಯಕ್ತಿಕ ಆಯ್ಕೆಗಳು. ಇದು ರಾಜಕೀಯ ಚರ್ಚೆಯ ವಸ್ತು ಆಗಬಾರದು. ರಾಜಕೀಯ ನಾಯಕರು ಜನತೆಯ ಕಲ್ಯಾಣ, ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚಿಸಬೇಕು. ಪರದೂಷಣೆಯಲ್ಲಿ ನಿರತರಾಗಿರುವ ಸಿಟಿ ರವಿ ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರುವ ವಿಡಿಯೋ ಜಗತ್ತಿಗೆಲ್ಲ ಸತ್ಯ ಸಾರುತ್ತಿರುವಾಗ ತಾನು ತಿಂದದ್ದು ನಿಜ, ದೇವಸ್ಥಾನದ ಒಳಪ್ರವೇಶಿಸಿಲ್ಲ, ರಸ್ತೆಯಲ್ಲಿಯೇ ನಿಂತು ಕೈಮುಗಿದಿದ್ದೆ ಎಂಬ ಸಿಟಿ ರವಿ ಅವರ ವಾದ, ಸದಾ ಹಸಿಹಸಿ ಸುಳ್ಳು ಹೇಳುವ ಅವರ ಹುಟ್ಟು ಗುಣಕ್ಕೆ ತಕ್ಕ ಹಾಗೆ ಇದೆ ಎಂದು ಮಾಜಿ ಸಿಎಂ ವಾಗ್ದಾಳಿ ನಡೆಸಿದ್ದಾರೆ.
ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂಬ ಸುಳ್ಳು ಸುದ್ದಿಯನ್ನೇ ಪ್ರಚಾರ ಮಾಡಿ ನನ್ನನ್ನು ಹಿಂದೂ ವಿರೋಧಿ ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡಿದ್ದರು. ಆ ರೀತಿ ಅಪಪ್ರಚಾರ ಮಾಡಿದವರೆಲ್ಲರೂ ಈಗ ಸಿಟಿ ರವಿ ಅವರ ಕೃತ್ಯದಿಂದಾಗಿ ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂಬ ಬಿಜೆಪಿ ನಾಯಕರ ಸುಳ್ಳು ಸುದ್ದಿಯನ್ನು ನಂಬಿ ನನ್ನನ್ನು ಟೀಕಿಸಿದ್ದ ರಾಜ್ಯದ ಕೆಲವು ಮಠಾಧೀಶರು, ಸಿಟಿ ರವಿ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರುವ ಬಗ್ಗೆ ಮೌನವಾಗಿರುವುದು ನನಗೆ ಅಚ್ಚರಿ ಉಂಟುಮಾಡಿದೆ ಎಂದು ತಮ್ಮ ವಿರುದ್ಧ ಟೀಕೆ ಮಾಡಿದ್ದ ಮಠಾಧೀಶರ ಬಗ್ಗೆಯೂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


