ಬಿಎಸ್ ವೈ ಕುಟುಂಬಕ್ಕೆ ಯಾರ ಸಹಾನುಭೂತಿಯೂ ಬೇಡ; ಕೋವಿಡ್ ಆರೋಪಕ್ಕೆ ಸರ್ಕಾರ ಯಾವುದೇ ತನಿಖೆ ನಡೆಸಲಿ: ವಿಜಯೇಂದ್ರ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯ ಬಿ ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯ ಬಿ ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಸತ್ಯವನ್ನು ಹೊರತೆಗೆಯಲು ಯಾವುದೇ ತನಿಖೆಗೆ ಆದೇಶಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಯಾವುದೇ ತನಿಖೆಗೆ ಆದೇಶಿಸಲು ಸರ್ಕಾರವು ಸ್ವತಂತ್ರವಾಗಿದೆ. ತನಿಖೆ ನಡೆಸುವಾಗ ಯಡಿಯೂರಪ್ಪ ಅಥವಾ ಅವರ ಕುಟುಂಬಕ್ಕೆ ಸರ್ಕಾರ ಯಾವುದೇ ಸಹಾನುಭೂತಿ ತೋರಿಸುವುದು ನನಗೆ ಇಷ್ಟವಿಲ್ಲ. ನಾನು ಯಾವುದೇ ತನಿಖೆಗೆ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಯಡಿಯೂರಪ್ಪ ಸರ್ಕಾರದ ಅಡಿಯಲ್ಲಿ 40,000 ಕೋಟಿ ರೂಪಾಯಿ ದುರ್ಬಳಕೆಯಾಗಿದೆ ಎಂದು ಇತ್ತೀಚೆಗೆ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದರು.
ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲೆಗೆ ಮೊದಲ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ನಾಯಕತ್ವವು ಪರಿಸ್ಥಿತಿಗೆ ಅನುಗುಣವಾಗಿ ಯಾರ ವಿರುದ್ಧವೂ ಕ್ರಮ ಕೈಗೊಳ್ಳಬಹುದು. ಯಾರ ವಿರುದ್ಧವೂ ಕೇಂದ್ರ ನಾಯಕತ್ವಕ್ಕೆ ದೂರು ನೀಡಿಲ್ಲ ಎಂದಿರುವ ಅವರು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಪಕ್ಷದ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ ಎಂದರು.
ಜೆಡಿಎಸ್-ಬಿಜೆಪಿ ಮೈತ್ರಿಕೂಟವು ರಾಜ್ಯದ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕೆಂದು ನಾನು ಬಯಸುತ್ತೇನೆ, ನನ್ನ ಗುರಿ ಸ್ಪಷ್ಟವಾಗಿದೆ. ನನಗೆ ನಮ್ಮ ಪಕ್ಷದ ನಾಯಕರ ಸಂಪೂರ್ಣ ಬೆಂಬಲ ಸಿಕ್ಕಿದೆ, ಆದರೆ ಕೆಲವರು ಕೆಲವು ಕಾರಣಗಳಿಂದ ಅಸಮಾಧಾನಗೊಂಡಿರಬಹುದು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಗುವುದು. ಹಳೇಯದನ್ನಲ್ಲ ಬಿಟ್ಟು ಪೂರ್ಣ ಉತ್ಸಾಹದಿಂದ ಮುನ್ನಡೆಯಲು ನಾನು ಬಯಸುತ್ತೇನೆ ಎಂದಿದ್ದಾರೆ.
ಬರದಿಂದ ಕಂಗೆಟ್ಟಿರುವ ರೈತರ ಹಿತಕಾಯುವ ಬದಲು ಅಲ್ಪಸಂಖ್ಯಾತರ ಓಲೈಕೆಯಲ್ಲಿ ಕಾಂಗ್ರೆಸ್ ಸರಕಾರ ನಿರತವಾಗಿದೆ ಎಂದು ಆರೋಪಿಸಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ರೈತರನ್ನು ಕಡೆಗಣಿಸುತ್ತಿರುವ ಸರಕಾರ ಅಲ್ಪಸಂಖ್ಯಾತರಿಗೆ ಮನೆ ನಿರ್ಮಿಸಲು 1,000 ಕೋಟಿ ಅನುದಾನ ನೀಡುವ ಮೂಲಕ ಅವರನ್ನು ಓಲೈಸುವ ಕಾರ್ಯದಲ್ಲಿ ನಿರತವಾಗಿದೆ. ಅಲ್ಪಸಂಖ್ಯಾತರಿಗೆ ಹಣ ನೀಡುವುದನ್ನು ಬಿಜೆಪಿ ವಿರೋಧಿಸುವುದಿಲ್ಲ, ಆದರೆ ರೈತರಿಗೆ ಸಹಾಯ ಮಾಡಬೇಕು ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


