ರಾಜಕೀಯ ದ್ವೇಷದಿಂದ ಡಿಕೆಶಿ ವಿರುದ್ಧ ಬಿಜೆಪಿ ತನಿಖೆಗೆ ಆದೇಶಿಸಿತ್ತು: ಸಚಿವ ಎಂಬಿ ಪಾಟೀಲ್ ಆರೋಪ
ಹಿಂದಿನ ಬಿಜೆಪಿ ಸರ್ಕಾರ ಕೇವಲ ರಾಜಕೀಯ ದ್ವೇಷ ಸಾಧಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿತ್ತು ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಗುರುವಾರ ಆರೋಪಿಸಿದರು.

ವಿಜಯಪುರ: ಹಿಂದಿನ ಬಿಜೆಪಿ ಸರ್ಕಾರ ಕೇವಲ ರಾಜಕೀಯ ದ್ವೇಷ ಸಾಧಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿತ್ತು ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಗುರುವಾರ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಅವರನ್ನು ಗುರಿಯಾಗಿಸಲು ಉದ್ದೇಶಪೂರ್ವಕವಾಗಿ ಸಿಬಿಐ ತನಿಖೆಗೆ ಆದೇಶಿಸಿತ್ತು. ಆದರೆ, ನಮ್ಮ ಸರ್ಕಾರ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಬಿಜೆಪಿಯ ಆದೇಶವನ್ನು ಹಿಂಪಡೆಯಲು ನಿರ್ಧರಿಸಿದೆ. ಕಾನೂನು ಪ್ರಕಾರವೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಪ್ರತಿಪಕ್ಷಗಳನ್ನು ಗುರಿಯಾಗಿಸಲು ಬಿಜೆಪಿ ಇಡಿ, ಐಟಿ ಮತ್ತು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದ ಅವರು, ಇಡಿ, ಐಟಿ ಅಥವಾ ಸಿಬಿಐ ಬಿಜೆಪಿ ನಾಯಕರ ವಿರುದ್ಧವೇಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿಯವರ ವಿರುದ್ಧ ಯಾಕೆ ದಾಳಿ ಮಾಡಿಲ್ಲ? ಅವರೆಲ್ಲರೂ ಸತ್ಯ ಹರಿಶ್ಚಂದ್ರರಾ? ಇಡೀ ದೇಶದಲ್ಲಿ ಬಿಜೆಪಿಯ ಒಬ್ಬ ಮುಖಂಡನ ಮೇಲಾದರೂ ಐಟಿ ರೇಡ್ ಮಾಡ್ತಾರಾ? ಇಡಿ, ಸಿಬಿಐ ಕೇಸ್ ಹಾಕ್ತಾರಾ? ಎಂದು ಖಾರವಾಗಿ ಪ್ರಶ್ನಿಸಿದರು.
ನಿಗಮ ಮಂಡಳಿ ನೇಮಕ ವಿಚಾರ ಕುರಿತು ಪ್ರತಿಕ್ರಿಯಿಸಿ, ಮೊದಲ ಹಂತದಲ್ಲಿ ಶಾಸಕರಿಗೆ, ಕೆಲ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಸಭೆ ಕೂಡ ನಡೆದಿದೆ. ಲೋಕಸಭೆ ಚುನಾವಣೆ ಬಳಿಕ ಕಾರ್ಯಕರ್ತರಿಗೆ, ಸದಸ್ಯರಿಗೆ ನೀಡುವ ಪ್ರಕ್ರಿಯೆ ನಡೆದಿದೆ. ಅದು ಸಿಎಂ, ಕೆಪಿಸಿಸಿ ಅಧ್ಯಕ್ಷರಿಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲಾ ಅವರಿಗೆ ಗೊತ್ತಿದೆ ಎಂದು ಹೇಳಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಕಾಂಗ್ರೆಸ್‌ನ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಸಿಎಂಗೆ ಪತ್ರ ಬರೆದಿರುವ ವಿಚಾರ ಕುರಿತು ಮಾತನಾಡಿ, ಕೆಲವು ಬೆಳವಣಿಗೆಗಳಿಂದ ಮಾಜಿ ಸಚಿವರಿಗೆ ನೋವಾಗಿರಬಹುದು. ಬಿ.ಆರ್.ಪಾಟೀಲ್ ಅವರೊಂದಿಗೂ ಸಿಎಂ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


