ಮೋದಿ ಪ್ರಚಾರ ಅಸೆಂಬ್ಲಿ ಚುನಾವಣೆ ಮೇಲೆ ಹೆಚ್ಚು ಪರಿಣಾಮ ಬೀರದು: ಹೆಚ್ ಡಿ ದೇವೇಗೌಡ (ಸಂದರ್ಶನ)
ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಆರಂಭವಾಗಲಿದೆ. ಮೋದಿಯವರು ಅಖಾಡಕ್ಕಿಳಿದಾಗ ಕರ್ನಾಟಕ ಚುನಾವಣೆಯ ಚಿತ್ರಣವೇ ಬದಲಾಗಲಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರು: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಆರಂಭವಾಗಲಿದೆ. ಮೋದಿಯವರು ಅಖಾಡಕ್ಕಿಳಿದಾಗ ಕರ್ನಾಟಕ ಚುನಾವಣೆಯ ಚಿತ್ರಣವೇ ಬದಲಾಗಲಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಹೊತ್ತಿನಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಮೋದಿಯವರ ಪ್ರಚಾರದಿಂದ ಈ ಬಾರಿ ವಿಧಾನಸಭೆ ಚುನಾವಣೆ ಮೇಲೆ ಅಷ್ಟು ಪರಿಣಾಮ ಬೀರುವುದಿಲ್ಲ, ಬದಲಿಗೆ ಮುಂದಿನ ವರ್ಷ ಲೋಕಸಭೆ ಚುನಾವಣೆ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದಿದ್ದಾರೆ. ಸಂದರ್ಶನದ ಆಯ್ದ ಭಾಗ ಹೀಗಿದೆ:
ಪಕ್ಷದ ಪರ ಪ್ರಚಾರವನ್ನು ಮಾಡುತ್ತಿದ್ದೀರಿ. ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ನೀವು ಹೇಗೆ ನೋಡುತ್ತೀರಿ?
ನನ್ನ ಪ್ರಚಾರದಲ್ಲಿ ವಿಶೇಷವೇನೂ ಇಲ್ಲ. ದಿನಕ್ಕೆ ಮೂರು ಕಾರ್ಯಕ್ರಮಗಳನ್ನು ನಿಗದಿಪಡಿಸಿ ಎಂದು ಪಕ್ಷದ ನಾಯಕರಿಗೆ ಹೇಳಿದ್ದೇನೆ. ಸುಮಾರು 40 ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಕಳೆದ 60 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕುಮಾರಸ್ವಾಮಿಯವರು ತಮ್ಮ ಕಾರ್ಯಕ್ರಮಗಳಿಂದ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿದ್ದಾರೆ. ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರೂ ಕಷ್ಟಪಡುತ್ತಿದ್ದಾರೆ.
ಜೆಡಿಎಸ್ ಸೇರಿದಂತೆ ಮೂರೂ ಪಕ್ಷಗಳು ಬಹುಮತ ಪಡೆಯುವುದಾಗಿ ಹೇಳಿಕೊಂಡಿವೆ. ನಿಮ್ಮ ಮೌಲ್ಯಮಾಪನ ಏನು?
ನಾನು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ದೇಶದಲ್ಲೇ ಪ್ರಪ್ರಥಮ ಕುಮಾರಸ್ವಾಮಿ ಅವರು ವಿಶಿಷ್ಟ ಕಾರ್ಯಕ್ರಮ ಪಂಚರತ್ನ ರಥಯಾತ್ರೆಯನ್ನು ರಾಜ್ಯದ ಜನತೆಯ ಮುಂದಿಟ್ಟು ಶ್ರಮಿಸುತ್ತಿದ್ದಾರೆ. ಈ ಸಂದೇಶವನ್ನು ಹಳ್ಳಿಗಳ ಜನರಿಗೆ ತಲುಪಿಸಲಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಗೆ ಮುನ್ನ ಅದನ್ನು ಜನರ ಬಳಿಗೆ ಕೊಂಡೊಯ್ಯಲಿದ್ದಾರೆ. ಇದು ಸಾಕಷ್ಟು ಪರಿಣಾಮ ಬೀರಿದ್ದು, ಜೆಡಿಎಸ್ ಬಹುಮತ ಪಡೆಯುವ ವಿಶ್ವಾಸವಿದೆ.
ಇದನ್ನೂ ಓದಿ: ಸಂದರ್ಶನ: ಕರ್ನಾಟಕ ಚುನಾವಣೆ ಕಾಂಗ್ರೆಸ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮಹತ್ವದ್ದಾಗಿದೆ- ಕೆ ಸಿ ವೇಣುಗೋಪಾಲ್
ಕೃಷಿ ಸಾಲ ಮನ್ನಾ, ವೃದ್ಧಾಪ್ಯ ವೇತನ, ಇನ್ನೂ ಹಲವು ಕ್ರಮಗಳನ್ನು ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೈಗೊಂಡಿದ್ದರು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ರಾಜಕಾರಣಿ ಎಂದು ಅವರ ಶತ್ರುಗಳೂ ಒಪ್ಪಿಕೊಳ್ಳುತ್ತಾರೆ.
ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತ ಎಂಬ ಅಭಿಪ್ರಾಯವಿದೆ.ಅದು ನಿಜವೇ?
ಕಳೆದ 2018ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಒಮ್ಮೆ ನೋಡಿ. ವಿಜಯಪುರ ಮತ್ತು ರಾಯಚೂರಿನಲ್ಲಿ ತಲಾ ಮೂರು, ಬೀದರ್‌ನಲ್ಲಿ ಎರಡು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಒಂದನ್ನು ಗೆದ್ದಿದ್ದೇವೆ. ನಾವು ಆ ಪ್ರದೇಶದಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿದ್ದೇವೆ. ಈ ಬಾರಿ ಆ ಪ್ರದೇಶದಲ್ಲಿ ಹೆಚ್ಚು ಗೆಲ್ಲುತ್ತೇವೆ. ಕೆಲವರು ಜೆಡಿಎಸ್ ನ್ನು ಕೇವಲ ಹಳೆಯ ಮೈಸೂರು ಪಾರ್ಟಿ ಎಂದು ಬ್ರಾಂಡ್ ಮಾಡಲು ಬಯಸುತ್ತಾರೆ. ಸತ್ಯ, ವಾಸ್ತವ ಬೇರೆ ಇದೆ.
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅದರಲ್ಲಿ ಏನಾದರೂ ಸತ್ಯವಿದೆಯೇ?
ವರುಣಾದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವುದರಿಂದ ಯಡಿಯೂರಪ್ಪ ಅವರ ಪುತ್ರ ಸ್ಪರ್ಧೆಯಿಂದ ಹಿಂದೆ ಸರಿದ ಬಗ್ಗೆ ಅವರು ಏನು ಹೇಳುತ್ತಾರೆ? ಬಿಜೆಪಿ ಹೈಕಮಾಂಡ್ ಪ್ರತಿಕ್ರಿಯೆ ಏನು? ಅದು ಏನನ್ನು ಸೂಚಿಸುತ್ತದೆ?
2024 ರ ಚುನಾವಣೆಯ ಮೊದಲು ಮೈತ್ರಿ ಮಾಡಿಕೊಳ್ಳಲು ವಿರೋಧ ಪಕ್ಷಗಳ ಪ್ರಯತ್ನಗಳ ಬಗ್ಗೆ ನಿಮ್ಮ ಅಭಿಪ್ರಾಯಗಳು?
ಇದು ಕಷ್ಟ. ಬಿಜೆಪಿ 303 ಸ್ಥಾನ ಗೆದ್ದಿದ್ದು, ಈ ಬಾರಿ ಅವರಿಗೆ ಕಷ್ಟ. ಇತರರ ನೆರವಿನಿಂದ ಸರ್ಕಾರ ರಚಿಸಬೇಕು. ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ರಾಜಸ್ಥಾನವನ್ನು ನೋಡಿ, ಅಲ್ಲಿ ಹೋರಾಟ ಮಾಡುತ್ತಿದ್ದಾರೆ. ಇತರ ಪಕ್ಷಗಳು ಕಾಂಗ್ರೆಸ್ ನಾಯಕತ್ವವನ್ನು ಒಪ್ಪಿಕೊಳ್ಳುವುದಿಲ್ಲ.
ಪ್ರಧಾನಿ ಮೋದಿಯವರ ರ್ಯಾಲಿಗಳು ಕರ್ನಾಟಕದಲ್ಲಿ ಬಿಜೆಪಿ ಅಲೆಯನ್ನು ಬದಲಾಯಿಸಬಹುದು ಎಂದು ಪಕ್ಷ ಆಶಿಸುತ್ತಿದೆ.ಈ ಬಗ್ಗೆ ಏನು ಹೇಳುತ್ತೀರಿ?
ಪ್ರಧಾನಿ ಮೋದಿಯವರ ರ್ಯಾಲಿಗಳು ಕರ್ನಾಟಕದಲ್ಲಿ ಅಲೆಯನ್ನು ಬದಲಾಯಿಸಬಹುದು ಎಂದು ಬಿಜೆಪಿ ಆಶಿಸುತ್ತಿದೆ.
ಅವರು ಸುಮಾರು 40 ರಿಂದ 50 ಸ್ಥಳಗಳಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರ ಪರಿಣಾಮ ಸಂಸತ್ ಚುನಾವಣೆ ಮೇಲೆ ಹೆಚ್ಚು. ಅಸೆಂಬ್ಲಿ ಚುನಾವಣೆ ಪ್ರಾದೇಶಿಕ ಸಮಸ್ಯೆಯಾಗಿದೆ. ಅವರ ಭಾಷಣಗಳು ಸಂಸತ್ತಿನ ಚುನಾವಣೆಯ ಸಮಯದಲ್ಲಿ ಹೆಚ್ಚು ಪರಿಣಾಮ ಬೀರುತ್ತವೆ, ಆದರೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅದು ಕಷ್ಟ.
ಬಿಜೆಪಿ ವಿರುದ್ಧ ಒಗ್ಗಟ್ಟಿನ ಪ್ರತಿಪಕ್ಷ ರೂಪುಗೊಂಡರೆ, ನೀವು ಅದರ ಭಾಗವಾಗುತ್ತೀರಾ?
ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ವಿವಿಧ ಪಕ್ಷಗಳ ನಾಯಕರನ್ನು ಭೇಟಿ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ.ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಒಬ್ಬರು ಅದಾನಿ ಬಗ್ಗೆ ಮಾತನಾಡುತ್ತಿದ್ದರೆ ಮತ್ತೊಬ್ಬರು ಇನ್ನೇನೋ ಮಾತನಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಅರ್ಥವಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಎದುರಿಸುತ್ತಿರುವ ಜೆಡಿಎಸ್ ವಿಶಿಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಪಕ್ಷ ಉಳಿಸಲು ಹೋರಾಟ ನಡೆಸುತ್ತಿದ್ದೇವೆ. ಇದು ರೈತರ ಪಕ್ಷವಾಗಿದ್ದು, ರೈತನ ಮಗನಾಗಿ ನಾನು ಆ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಜೆಡಿಎಸ್ ರೈತರ ಮತ್ತು ಬಡ ಜನರ ವಿಶ್ವಾಸ ಗಳಿಸಿದೆ. ನಾವು ಯಾವಾಗಲೂ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದೇವೆ. ಅದನ್ನು ಜನ ಮರೆತಿಲ್ಲ.
ರಾಜ್ಯ ಸರ್ಕಾರವು ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾನು ಅದನ್ನು ಜಾರಿಗೆ ತಂದಿದ್ದೆ, ಆದರೆ ಬಿಜೆಪಿ ಅದನ್ನು ರದ್ದುಗೊಳಿಸಿತು. ಬಿಜೆಪಿ ಮಾಡಿದ್ದು ತಪ್ಪು. ಅದನ್ನು ನಾವು ಅಧಿಕಾರಕ್ಕೆ ಬಂದರೆ ಮರುಸ್ಥಾಪಿಸುತ್ತೇವೆ.
ಜನಾದೇಶ ಮುರಿದು ಬಿದ್ದರೆ ಜೆಡಿಎಸ್ ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಹೋಗಲಿದೆಯೇ?
ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅದು ನಡೆಯುತ್ತದೆ ಎಂದು ನಾನು ಭಾವಿಸುವುದಿಲ್ಲ. ಜೆಡಿಎಸ್ ಸರಳ ಬಹುಮತ ಪಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


