ಶೆಟ್ಟರ್ ಸ್ವಾಭಿಮಾನಕ್ಕೆ ಬಿಜೆಪಿಯಲ್ಲಿ ಧಕ್ಕೆಯಾಗಿದೆ, ಕಾಂಗ್ರೆಸ್ ಸೇರ್ಪಡೆಯಿಂದ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ: ಸಿದ್ದರಾಮಯ್ಯ
ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು : ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಅವರನ್ನು ಆತ್ಮೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಶೆಟ್ಟರ್ ಅವರು ಕರ್ನಾಟಕ ಕಂಡ ಸಜ್ಜನ ರಾಜಕಾರಣಿ. ಅವರು ಆರ್ ಎಸ್ಎಸ್ ನಿಂದ ಬಂದಿದ್ದರೂ ಜಾತ್ಯಾತೀತ ತತ್ವದ ಮೇಲೆಯೇ ಕೆಲಸ ಮಾಡಿದ್ದಾರೆ. ನಾನು ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿರೋಧ ಪಕ್ಷದ ನಾಯಕನಾಗಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಎಂದಿಗೂ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಭೇಟಿ ಮಾಡಿದವರಲ್ಲ. ಐದು ವರ್ಷಗಳ ಕಾಲ ವಿಧಾನಸಭೆ ಒಳಗೆ ಹಾಗೂ ಹೊರಗೆ ಬಿಜೆಪಿ ಪರವಾಗಿ ಹೋರಾಟ ಮಾಡಿದ್ದರು. ಬಹಳ ನಿಷ್ಠಾವಂತರಾಗಿದ್ದರು. ಬಿಜೆಪಿಯ ನೀತಿ ಕಾರ್ಯಕ್ರಮಗಳ ಬಗ್ಗೆ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಸ್ವಾರ್ಥಕ್ಕಾಗಿ ಅದನ್ನು ಬಲಿ ಕೊಟ್ಟಿರಲಿಲ್ಲ. ನಮ್ಮ ಸರ್ಕಾರದ ವಿರುದ್ಧ ಹೋರಾಟವನ್ನು ಮಾಡಿದ್ದಾರೆ ಎಂದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಕೆಲಸವನ್ನು ನಿರ್ಭಯವಾಗಿ ನಿಷ್ಟುರವಾಗಿ ಮಾಡುತ್ತಿದ್ದರು. ಕೃಷ್ಣ ಅವರ ಕಾಲದಲ್ಲೂ ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಕೇವಲ ಉತ್ತರ ಕರ್ನಾಟ ನಾಯಕರಲ್ಲ, ಅವರು ಇಡೀ ರಾಜ್ಯದ ನಾಯಕರು. ಲಿಂಗಾಯತ ಸಮಾಜ ದೊಡ್ಡ ಸಮಾಜ. ಸಮಾನ್ಯವಾಗಿ ಯಡಿಯೂರಪ್ಪ ಅವರನ್ನು ಆ ಸಮಾಜದ ನಾಯಕ ಎಂದು ಬಿಂಬಿಸುತ್ತಾರೆ. ಎರಡನೇ ಸ್ಥಾನದಲ್ಲಿ ನೋಡುತ್ತಿದ್ದದ್ದು ಶೆಟ್ಟರ್ ಅವರನ್ನು. ಬಿಜೆಪಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ನಿರ್ದಾಕ್ಷಣ್ಯವಾಗಿ ತೆಗೆದು ಅಪಮಾನ ಮಾಡಿದರು. ಅವರ ಕಣ್ಣೀರು ಹಾಕಿಸಿದರು. ಜಗದೀಶ್ ಶೆಟ್ಟರ್ ಅವರು ಲಿಂಗಾಯತ ಸಮಾಜದ ದೊಡ್ಡ ನಾಯಕರೆಂದು ಗುರುತಿಸಿಕೊಂಡಿದ್ದರು. ಅವರು ಬಹಳ ನೋವಿನಿಂದ ಮಾತನಾಡಿದ್ದಾರೆ. ಬಹುಶಃ ಬಿಜೆಪಿ ಅವರನ್ನು ನಡೆಸಿಕೊಂಡಿರುವ ರೀತಿ ಯಾವ ಪಕ್ಷದಲ್ಲಿ ಯಾವುದೇ ನಾಯಕರಿಗೆ ಆಗಬಾರದು ಎಂದರು.
ಯಾವುದೇ ಕಾರಣ ಇಲ್ಲದೇ, ಆರೋಪವಿಲ್ಲದೆ, ಬಿಜೆಪಿಯವರು ಅವರಿಗೆ ಟಿಕೆಟ್ ವಂಚಿಸಿದ್ದಾರೆ. ಇದು ದುರುದ್ದೇಶ ಎಂದು ಎಲ್ಲರಿಗೂ ಅರ್ಥವಾಗುತ್ತದೆ. ನಾನು ನೋಡಿದ ಹಾಗೆ ಶೆಟ್ಟರ್ ಅವರು ಸ್ವಾಭಿಮಾನಿ ರಾಜಕಾರಣಿ. ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿಲ್ಲ. ಈಗ ಅವರ ಸ್ವಾಭಿಮಾನ, ಸಮುದಾಯಕ್ಕೆ ಧಕ್ಕೆಯಾಗಿದೆ. ಅವರ ಅನುಯಾಯಿ, ಸ್ನೇಹಿತರಿಗೆ ಧಕ್ಕೆಯಾಗಿದೆ. ಇದು ಸಹಿಸಲಾಗದ ಅಪಮಾನ. ನಾನು ಕೂಡ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮಗೆ ಇಂತಹ ಅನ್ಯಾಯವಾಗುತ್ತದೆ ಎಂದು ಭಾವಿಸಿರಲಿಲ್ಲ ಎಂದು ಅವರನ್ನು ಭೇಟಿಯಾದಾಗ ಹೇಳಿದೆ. ಈ ರೀತಿ ಏಕಾಏಕಿ, ಯಾವುದೇ ಮುನ್ಸೂಚನೆ ಇಲ್ಲದೆ ಟಿಕೆಟ್ ತಪ್ಪಿಸಿರುವುದು ಘೋರ ಅಪರಾಧ. ಅವರು ತಮ್ಮ ಸ್ವಾಭಿಮಾನ ರಕ್ಷಣೆಗೆ ಪಕ್ಷ ಬಿಡಲು ತೀರ್ಮಾನಿಸಿದ್ದಾರೆ. ಶೆಟ್ಟರ್ ಅವರ ಆಗಮನದಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


