ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ: ರಮೇಶ್ ಜಾರಕಿಹೊಳಿ
ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ ಎಂದು ಹೇಳುವ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜಗದೀಶ್ ಶೆಟ್ಟರ್ ಅವರಿಗೆ ಟಾಂಗ್ ನೀಡಿದ್ದಾರೆ.

ಬೆಳಗಾವಿ: ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ ಎಂದು ಹೇಳುವ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜಗದೀಶ್ ಶೆಟ್ಟರ್ ಅವರಿಗೆ ಟಾಂಗ್ ನೀಡಿದ್ದಾರೆ.
ಜಗದೀಶ್ ಶೆಟ್ಟರ್ ಎಲ್ಲಾ ಹುದ್ದೆಗಳನ್ನು ಅನುಭವಿಸಿದ್ದರೂ ಸಹ ಬಿಜೆಪಿ ತೊರೆದಿದ್ದಾರೆ. ಅವರೇನೂ ದೊಡ್ಡ ನಾಯಕರಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ನಗರದ ಧರ್ಮನಾಥ್ ಭವನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಎಲ್.ಕೆ ಅಡ್ವಾಣಿಯಂತಹ ದೊಡ್ಡ ನಾಯಕರೇ ಬಹು ದೊಡ್ಡ ತ್ಯಾಗಗಳನ್ನು ಮಾಡಿದ್ದಾರೆ. ಆದರೆ ಎಲ್ಲಾ ಅಧಿಕಾರವನ್ನು ಅನುಭವಿಸಿ ಕೆಲವರು ಪಕ್ಷವನ್ನು ತೊರೆಯುತ್ತಿದ್ದಾರೆ. ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಹೋಗುವವರು ಹೋಗಲಿ ಪಕ್ಷ ಸ್ವಚ್ಛ ಆಗುತ್ತದೆ ಎಂದಿದ್ದಾರೆ.
ಬೆಂಬಲಿಗರ ಶ್ಲಾಘನೆ
ಇದೇ ವೇಳೆ ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ಧನಂಜಯ ಜಾಧವ್ ಇಬ್ಬರೂ ಬೆಳಗಾವಿ ಗ್ರಾಮೀಣ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಮೂರನೇಯವರಿಗೆ ಟಿಕೆಟ್ ಸಿಕ್ಕರೂ ಸಭೆಯಲ್ಲಿ ಮನಪೂರ್ವಕವಾಗಿ ಭಾಗವಹಿಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಸನ್ನಿವೇಶ ಬಿಜೆಪಿಯಲ್ಲಿ ಮಾತ್ರ ನೋಡಲು ಸಾಧ್ಯ ಎಂದು ಅವರು ಹೇಳಿದರು.
ಸಂಜಯ್ ಪಾಟೀಲ್ ಎರಡು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಸಂಜಯ್ ಪಾಟೀಲ್ ಹಾಗೂ ಧನಂಜಯ ಜಾಧವ್ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಬೇಕು. ಇಬ್ಬರೂ ಗ್ರಾಮೀಣ ಭಾಗದ ಉಸ್ತುವಾರಿ ವಹಿಸಿಕೊಂಡು ಬಿಜೆಪಿಯನ್ನು ಗೆಲ್ಲಿಸಬೇಕು. ಆಗ ಪಕ್ಷ ನಿಮ್ಮನ್ನು ಗುರುತಿಸುತ್ತದೆ. ಕಾರ್ಯಕರ್ತರು ಬೆಳಗಾವಿ ಜಿಲ್ಲೆಯ 15ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ದೃಢ ಸಂಕಲ್ಪ ಮಾಡಬೇಕು. ವಿಶೇಷವಾಗಿ ಅಥಣಿಗೆ ಬಹಳ ಒತ್ತು ಕೊಡಬೇಕು. ಅಥಣಿ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಬಾವುಟ ಹಾರಿಸಲೇಬೇಕು ಎಂದು ದೃಢ ಸಂಕಲ್ಪ ಮಾಡಿದ್ದೇನೆ. ಅದನ್ನು ಮಾಡಿಯೇ ತೀರುತ್ತೇನೆ ಎಂದು ಅವರು ಲಕ್ಷ್ಮಣ ಸವದಿ (Laxman Savadi) ಅವರಿಗೆ ಸವಾಲು ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


