ರಾಜಕೀಯ

ಮೋಹನ್ ಭಾಗವತ್ ಸ್ಥಾನಕ್ಕೆ ಆರ್ ಎಸ್ ಎಸ್ ಮಹಿಳೆ ನೇಮಕ ಮಾಡಲಿ: ಪಕ್ಷಾಂತರ ನಿಷೇಧ ಕಾಯ್ದೆ ತಿದ್ದುಪಡಿಯಾಗಬೇಕು; ಸಿದ್ದರಾಮಯ್ಯ

ಭ್ರಷ್ಟಾಚಾರದಿಂದ ಗಳಿಸಿರುವ ಹಣ ಬಳಸಿಕೊಂಡು ಬಿಜೆಪಿ ಪಕ್ಷವು ವಿವಿಧ ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆಸಲು ಮುಂದಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಬೆಳವಣಿಗೆ.

ಮೋಹನ್ ಭಾಗವತ್ ಸ್ಥಾನಕ್ಕೆ ಆರ್ ಎಸ್ ಎಸ್ ಮಹಿಳೆ ನೇಮಕ ಮಾಡಲಿ: ಪಕ್ಷಾಂತರ ನಿಷೇಧ ಕಾಯ್ದೆ ತಿದ್ದುಪಡಿಯಾಗಬೇಕು; ಸಿದ್ದರಾಮಯ್ಯ
ಸಿದ್ದರಾಮಯ್ಯ
Published On :

ಮೈಸೂರು: ಭ್ರಷ್ಟಾಚಾರದಿಂದ ಗಳಿಸಿರುವ ಹಣ ಬಳಸಿಕೊಂಡು ಬಿಜೆಪಿ ಪಕ್ಷವು ವಿವಿಧ ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆಸಲು ಮುಂದಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಬೆಳವಣಿಗೆ. ಕರ್ನಾಟಕದ ಬಿಜೆಪಿಯ ಚಾಳಿ ಇಡೀ ದೇಶಕ್ಕೆ ಹಬ್ಬಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ  ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬಿಜೆಪಿ ಭ್ರಷ್ಟಾಚಾರದ ಹಣದ ಮೂಲಕ ಆಪರೇಷನ್‌ ಕಮಲಕ್ಕೆ ಮುಂದಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ.  ಇದನ್ನು ತಡೆಗಟ್ಟಲು ಪಕ್ಷಾಂತರ ನಿಷೇಧ ಕಾಯ್ದೆ ತಿದ್ದುಪಡಿ ಆಗಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಒಂದು ಪಕ್ಷದಿಂದ ಆಯ್ಕೆಯಾದವನು ಬೇರೆ ಸ್ಥಾನಕ್ಕೆ ಹೋಗದಂತೆ ತಡೆಯಬೇಕು. ಹೋದರೆ 10 ವರ್ಷ ಆತ ಚುನಾವಣೆಗೆ ನಿಲ್ಲದಂತೆ ಆದೇಶ ಮಾಡಬೇಕು.

ಪ್ರಜಾಪ್ರಭುತ್ವದ ಉಳಿವಿಗೆ ಇದರ ಅವಶ್ಯಕತೆ ಇದೆ. ಆಪರೇಷನ್‌ ಕಮಲ ಹುಟ್ಟು ಹಾಕಿದ್ದೇ ಬಿಜೆಪಿಯವರು. 2008ರಲ್ಲಿ ಯಡಿಯೂರಪ್ಪ ಮೊದಲ ಆಪರೇಷನ್‌ ಕಮಲ ಮಾಡಿದರು. ಎಲ್ಲೂ ಅವರಿಗೆ ಬಹುಮತ ಬಂದಿಲ್ಲ. ಎಲ್ಲಾ ಕಡೆ ಹಣ ಕೊಟ್ಟು ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದ್ದಾರೆ ಎಂದು ಗಂಭೀರವಾಗಿ ಟೀಕಿಸಿದರು.

ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಏನು ಮಾಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಡಬಲ್‌ ಎಂಜಿನ್‌ ಸರ್ಕಾರ ಎಂದಿದ್ದಾರೆ. ಈ ಸರ್ಕಾರ ಏನು ಮಾಡಿದೆ? ಅಭಿವೃದ್ಧಿ ಕಾರ್ಯದ ಪಟ್ಟಿ ಕೊಡಿ ಎಂದ ಅವರು, ಸುಮ್ಮನೇ ಸುಳ್ಳು ಹೇಳಿ ಮೋದಿ ಹೋಗಿದ್ದಾರೆ. ರಾಜ್ಯ ಸರ್ಕಾರವು ತನ್ನ ಬೇಡಿಕೆಗಳ ಕುರಿತಾದ ಮನವಿಯನ್ನೂ ಪ್ರಧಾನಿಗೆ ನೀಡಿಲ್ಲ. ಏಕೆಂದರೆ ಮೋದಿ ಏನೂ ಮಾಡುವುದಿಲ್ಲ ಎಂಬುದು ರಾಜ್ಯ ನಾಯಕರಿಗೆ ಗೊತ್ತಿದೆ. ಅದಕ್ಕೆ ಅವರು ಯಾವುದೇ ಮನವಿ ನೀಡಿಲ್ಲ. ಮೋದಿ ಭೇಟಿ ಹಿನ್ನೆಲೆಯಲ್ಲಿ .25 ಕೋಟಿ ಖರ್ಚಾಗಿದೆ. ಆದರೆ ರಸ್ತೆ ಆಗಿರುವುದನ್ನು ಬಿಟ್ಟರೆ ಜನರಿಗೆ ಹೆಚ್ಚು ಲಾಭವಿಲ್ಲ ಎಂದರು.

ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಮೈತ್ರಿಕೂಟವು ಬುಡಕಟ್ಟು ಮಹಿಳೆಯನ್ನು ಆಯ್ಕೆ ಮಾಡಿರುವುದು ಸಾಮಾಜಿಕ ನ್ಯಾಯವೂ ಅಲ್ಲ, ವಿಶೇಷವೂ ಅಲ್ಲ. ಹಾಗೆ ಸಾಮಾಜಿಕ ನ್ಯಾಯ ನೀಡಬೇಕು ಎಂಬುದಿದ್ದರೆ ಆರ್‌ಎಸ್‌ಎಸ್‌ನ ಮುಖ್ಯ ಸಂಚಾಲಕರಾಗಿ ಆಯ್ಕೆ ಮಾಡಲಿ. ಮೋಹನ್‌ ಭಾಗವತ್‌ ಅವರ ಸ್ಥಾನಕ್ಕೆ ಇಂತಹ ಮಹಿಳೆಯನ್ನು ನೇಮಿಸಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.