'ನಮ್ಮ ಕಾರ್ಯಕರ್ತರು ಬಿರಿಯಾನಿ, ಎಣ್ಣೆ, 500 ರೂ. ಗೆ ಜೈ ಹುಲಿಯಾ ಎನ್ನುವವರಲ್ಲ! ನೀವೂ ಕರ್ನಾಟಕದ ಅಣ್ಣಾ ಹಜಾರೆಯೂ ಅಲ್ಲ!'
ನಿಮ್ಮನ್ನು ನೋಡಿ ಹೆದರುವ ಇಲ್ಲವೇ ಬೆದರುವ ಅಗತ್ಯ ಖಂಡಿತವಾಗಿಯೂ ಬಿಜೆಪಿಗೆ ಅಂತಹ ದುಸ್ಥಿತಿ ಬಂದಿಲ್ಲ. ಎಂತೆಂಥವರನ್ನೇ ಎದುರಿಸಿರುವಾಗ ಅಧಿಕಾರದ ಆಸೆಗಾಗಿ ಬೆಳೆಸಿದ ಪಕ್ಷಕ್ಕೆ ಚೂರಿ ಹಾಕಿ ಬಂದ ನೀವು ನಮಗೆ ಲೆಕ್ಕಕೂ ಇಲ್ಲ. ಬುಕ್ಕಕ್ಕೂ ಇಲ್ಲ

ಬೆಂಗಳೂರು: ನಿಮ್ಮನ್ನು ನೋಡಿ ಹೆದರುವ ಇಲ್ಲವೇ ಬೆದರುವ ಅಗತ್ಯ ಖಂಡಿತವಾಗಿಯೂ ಬಿಜೆಪಿಗೆ ಅಂತಹ ದುಸ್ಥಿತಿ ಬಂದಿಲ್ಲ. ಎಂತೆಂಥವರನ್ನೇ ಎದುರಿಸಿರುವಾಗ ಅಧಿಕಾರದ ಆಸೆಗಾಗಿ ಬೆಳೆಸಿದ ಪಕ್ಷಕ್ಕೆ ಚೂರಿ ಹಾಕಿ ಬಂದ ನೀವು ನಮಗೆ ಲೆಕ್ಕಕೂ ಇಲ್ಲ. ಬುಕ್ಕಕ್ಕೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಬಿ. ಶ್ರೀರಾಮುಲು ಲೇವಡಿ ಮಾಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಶ್ರೀರಾಮುಲು, 2 ಸ್ಥಾನದಿಂದ ಆರಂಭವಾದ ಬಿಜೆಪಿ ಜೈತ್ರಾ ಯಾತ್ರೆ ಇಂದು 303 ಸ್ಥಾನಗಳವರೆಗೆ ಬಂದಿದೆ. ನಿಮ್ಮಂತಹ ಪಾಳೆಗಾರರನ್ನು ಎದುರಿಸುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ. ಬಿಜೆಪಿ ಕೆಣಕಿದವರು ಎಂತಹ ಹೀನಾಯ ಸ್ಥಿತಿಗೆ ಬಂದಿದ್ದಾರೆ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.
ನನ್ನನ್ನು ನೋಡಿದರೆ ಬಿಜೆಪಿಯವರಿಗೆ ಭಯ ಎಂದು ಹೇಳೀಕೊಳ್ಳುವ ನಿಮಗೆ ನಾಚಿಕೆಯಾಗಬೇಕು. 5 ವರ್ಷ ಮುಖ್ಯಮಂತ್ರಿಯಾಗಿದ್ದ ನಿಮಗೆ ಈಗ ಹೇಳಿಕೊಳ್ಳಲು ಒಂದೇ ಒಂದು ಕ್ಷೇತ್ರವಿಲ್ಲ. ಹೈಕಮಾಂಡ್ ಎದುರು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವೀರಾವೇಷದ ಮಾತುಗಳನ್ನು ಆಡುತ್ತಿದ್ದೀರಿ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ 132 ಸ್ಥಾನದಿಂದ 78 ಸ್ಥಾನಕ್ಕೆ ಕಾಂಗ್ರೆಸ್ ಪಕ್ಷವನ್ನು ಕುಸಿಯುವಂತೆ ಮಾಡಿದ್ದು ನಿಮ್ಮ ಸಾಧನೆ. ಚಾಮುಂಡೇಶ್ವರಿಯಲ್ಲಿ 38 ಸಾವಿರ ಮತಗಳಲ್ಲಿ ಹೀನಾಯ ಸೋಲು, ಬಾದಾಮಿಯಲ್ಲಿ ನನ್ನೆದುರು 1600 ಮತಗಳ ಅಂತರದಲ್ಲಿ ತಿಣಕಾಡಿ ಗೆದ್ದಿದ್ದು ನಿಮ್ಮ ತಾಕತ್ತು.
ದಾವಣಗೆರೆಯ ಸಿದ್ದರಾಮೋತ್ಸವ ಜಯಂತಿಗೆ ಬಿಜೆಪಿಯವರು ಹೆದರಿದ್ದಾರೆ ಎಂಬ ನಿಮ್ಮ ಹೇಳಿಕೆ ಬಾಲಿಷತನದಿಂದ ಕೂಡಿದೆ. ಇಂಥ ಹತ್ತು ಪಟ್ಟು ಜನರನ್ನು ಸೇರಿಸಿ ಸಮಾವೇಶ ನಡೆಸುವ ತಾಕತ್ತು ಬಿಜೆಪಿಗಿದೆ. ನಮ್ಮ ಕಾರ್ಯಕರ್ತರು ಬಿರಿಯಾನಿ, ಎಣ್ಣೆ, 500 ರೂ.ಗೆ ಬಂದು ಜೈ ಹುಲಿಯಾ ಎನ್ನುವವರಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಶುರುವಾಗಿದೆ ಎಂಬುದು ನಿಮ್ಮ ಭ್ರಮೆಯಷ್ಟೆ. ವಾಸ್ತವ ಚಿತ್ರಣವೇ ಬೇರೆ ಇದೆ. ನಿಜವಾಗಿ ಆರಂಭವಾಗಿರುವುದು ಕಾಂಗ್ರೆಸ್ ಅವಸಾನದ ದಿನಗಳು. ಹಾಸಿಗೆ, ದಿಂಬು, ತಟ್ಟೆ, ಲೋಟ, ಅನ್ನಭಾಗ್ಯ, ಲ್ಯಾಪ್ ಟಾಪ್, ಕಾಮಗಾರಿ ನಡೆಸದೇ, ಬಿಲ್ ಮಂಜೂರಾತಿ. ಈ ವಿದ್ಯೆ ನಿಮಗಲ್ಲದೆ ಬೇರೆಯವರಿಗೆ ಬರಲು ಸಾಧ್ಯವೇ? ಕರ್ನಾಟಕದ ಅಣ್ಣಾ ಹಜಾರೆಯೇ? ಮನೆಯೊಂದು ಮೂರು ಬಾಗಿಲು ಎಂಬತಾಗಿದ್ದರೂ ಬಿಜೆಪಿ ವಿರುದ್ಧ ನೀವು ಆರೋಪ ಮಾಡಿದಾಗ ನಾವು ಬಾಯಿ ಮಚ್ಚಿಕೊಂಡು ಸುಮ್ಮನಿರಲು ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ.
ಭಾರತ್ ಜೋಡೊದಲ್ಲಿ ನಿಮ್ಮ ನಾಯಕ ರಾಹುಲ್ ಗಾಂಧಿ ಅವರು ಖಾಲಿ ಕುರ್ಚಿಗೆ ಒಣ ಭಾಷಣ ಬಿಗಿಯುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲವೇ? ಹೆಚ್ಚು ದಿನ ಬೇಡ.! ಕೆಲವೇ ದಿನಗಳಲ್ಲಿ ನಿಮ್ಮನ್ನು ಹಾಗೂ ನಿಮ್ಮ ಪಟಲಾಂ ಅನ್ನು ಹೇಗೆ ಮುಗಿಸುತ್ತಾರೆ ಎಂಬುದನ್ನು ಕಾದು ನೋಡಿ.! ನಿಮ್ಮ ಹೋರಾಟ, ಚೀರಾಟ, ಒಣ ಪೌರುಷದ ಮಾತುಗಳು 2023 ರ ಮೇ ತಿಂಗಳವರೆಗೆ ಮಾತ್ರ. ನಂತರ ಸಿದ್ದರಾಮಯ್ಯನ ಹುಂಡಿಯ ತೋಟದಮನೆಯೇ ಗತಿ! ಎಂದು ಶ್ರೀರಾಮುಲು ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


