ಹಳ್ಳ ಹಿಡಿದ ಆರ್ ಟಿಇ; ಶಿಕ್ಷಣ ಇಲಾಖೆ ಭ್ರಷ್ಟಾಚಾರದ ಕೊಂಪೆ, ಲಂಚಾವತಾರದ ಕುಣಿದಾಟ: ಇದು ಶಿಕ್ಷಣವೋ? ಭಕ್ಷಣೆಯೋ
ಖಾಸಗಿ ಶಾಲೆಗಳ ಪರವಾನಗಿಯಿಂದ ಹಿಡಿದು ನಿವೃತ್ತ ಶಿಕ್ಷಕರ ಪಿಂಚಣಿವರೆಗೆ ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೇ ಯಾವ ಕೆಲಸವು ಆಗದ ವಾತಾವರಣ ಇದೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು: ಖಾಸಗಿ ಶಾಲೆಗಳ ಪರವಾನಗಿಯಿಂದ ಹಿಡಿದು ನಿವೃತ್ತ ಶಿಕ್ಷಕರ ಪಿಂಚಣಿವರೆಗೆ ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೇ ಯಾವ ಕೆಲಸವು ಆಗದ ವಾತಾವರಣ ಇದೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಬಿ.ಸಿ ನಾಗೇಶ್ ಅವರು ತಮ್ಮ ಇಲಾಖೆಯ ಲಂಚಾವತಾರದ ಕಡೆಗಿನ ಜನರ ಗಮನ ಬೇರೆಕಡೆ ಸೆಳೆಯಲಿಕ್ಕಾಗಿಯೇ ಪಠ್ಯಪುಸ್ತಕ, ಭಗವದ್ಗೀತೆ, ಮದರಸಾಕ್ಕೆ ಸಂಬಂಧಿಸಿದ ವಿವಾದ ಹುಟ್ಟುಹಾಕುತ್ತಿದ್ದಾರೆ. ಲಂಚಕೋರರಿಗೆ ಮುಖ ಮರೆಸಿಕೊಳ್ಳಲು ಹಿಂದುತ್ವ ಒಂದು ಮುಖವಾಡ. ಇದು ಶಿಕ್ಷಣವೋ? ಭಕ್ಷಣೆಯೋ? ಎಂದು ಪ್ರಶ್ನಿಸಿದ್ದಾರೆ.
ಆರ್ ಟಿ ಇ ಯೋಜನೆಯಡಿ ಖಾಸಗಿ ಶಾಲೆಗಳಿಗೆ ಬಿಜೆಪಿ ಸರ್ಕಾರ ಸುಮಾರು ರೂ.900 ಕೋಟಿ ಬಾಕಿ ಪಾವತಿಸಬೇಕಂತೆ. ಶಿಕ್ಷಣ ಸಚಿವರು 40% ಕಮಿಷನ್ ಲೆಕ್ಕ ಹಾಕುತ್ತಿರುವಂತೆ ಕಾಣುತ್ತಿದೆ. ಕಮಿಷನ್ ಎಂಬ ಸಾಂಕ್ರಾಮಿಕ ರೋಗ ಶಿಕ್ಷಣ ಇಲಾಖೆಯನ್ನೂ ರೋಗಗ್ರಸ್ತ ಗೊಳಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಶಿಕ್ಷಣ ಹಕ್ಕಿನ ಕಾಯ್ದೆಯನ್ನೂ ರಾಜ್ಯ ಶಿಕ್ಷಣ ಇಲಾಖೆ ಹಳ್ಳ ಹಿಡಿಸಿದೆ. 2012ರಲ್ಲಿ ಆರ್ ಟಿ ಇ ಫಲಾನುಭವಿ ವಿದ್ಯಾರ್ಥಿಗಳು 1.20 ಲಕ್ಷ, ಈಗ ಈ ವಿದ್ಯಾರ್ಥಿಗಳ ಸಂಖ್ಯೆ 7 ಸಾವಿರಕ್ಕೆ ಇಳಿದಿದೆ. ಖಾಸಗಿ ಶಾಲೆಗಳಿಗೆ ಬಿಜೆಪಿ ಸರ್ಕಾರದಿಂದಲೇ ಬೆಂಬಲ ಎಂದು ಹರಿಹಾಯ್ದಿದ್ದಾರೆ.
ಖಾಸಗಿ ಶಾಲೆಗಳ ಪರವಾನಿಗೆಯಿಂದ ಹಿಡಿದು ನಿವೃತ್ತ ಶಿಕ್ಷಕರ ಪಿಂಚಣಿವರೆಗೆ ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೆ ಯಾವ ಕೆಲಸವೂ ಆಗುತ್ತಿಲ್ಲವಂತೆ. ಲಂಚ ಪಡೆದು ಖಾಸಗಿ ಶಾಲೆಗಳಿಗೆ ಅಕ್ರಮವಾಗಿ ಅನುಮತಿ ನೀಡುವ ಇಲಾಖೆಯೇ, ಮತ್ತೆ ಅಕ್ರಮ ಎಸಗಿದ ಆರೋಪದ ಮೇಲೆ ದುಡ್ಡು ವಸೂಲಿ ಮಾಡುತ್ತಿದೆಯಂತೆ. ಎಂಥಾ ಅದ್ಭುತ ಪ್ಲಾನ್?
ಪ್ರಾರಂಭದಿಂದಲೇ ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಿರುದ್ಧ ಕೇಳಿ ಬರುತ್ತಿದ್ದ ಭ್ರಷ್ಟಾಚಾರದ ಆರೋಪಗಳಿಗೆ ಈಗ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸಂಘಟನೆ ಪುರಾವೆಗಳನ್ನು ನೀಡಿದೆ. ಈ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆಯಂತೆ ಎಂದು ಸಿದ್ದರಾಮಯ್ಯ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಣ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಸಚಿವ ನಾಗೇಶ್ ಅವರನ್ನು ತೆಗೆದುಹಾಕಿ: ಪ್ರಧಾನಿ ಮೋದಿಗೆ ಪತ್ರ
ಆರ್ ಎಸ್ ಎಸ್ ನಲ್ಲಿತರಬೇತಿ ಪಡೆದು ಬಂದಿರುವ ಬಿ ಸಿ ನಾಗೇಶ್ ಅವರು ರಾಜ್ಯ ಶಿಕ್ಷಣ ಸಚಿವರಾದಂದಿನಿಂದ ಶಿಕ್ಷಣ ಇಲಾಖೆ ಭ್ರಷ್ಟಾಚಾರದ ಕೊಂಪೆಯಾಗಿರುವ ಕತೆ ಒಂದೊಂದಾಗಿ ಹೊರಬೀಳುತ್ತಿವೆ. ಪಠ್ಯಪುಸ್ತಕಗಳ ವಿವಾದದ ಮರೆಯಲ್ಲಿ ಇಲ್ಲಿ ನಡೆಯುತ್ತಿರುವುದು ಲಂಚಾವತಾರದ ಕುಣಿದಾಟ ಎಂದಿದ್ದಾರೆ.
ಗುತ್ತಿಗೆದಾರರು ಸರ್ಕಾರದ 40% ಕಮಿಷನ್ ಬಗ್ಗೆ ಪ್ರಧಾನಿಗೆ ಬರೆದ ಪತ್ರಗಳಿಗೆ ಉತ್ತರ ಸಿಕ್ಕಿಲ್ಲ. ಈಗ ಖಾಸಗಿ ಶಾಲೆಗಳ ಆಡಳಿತವೂ ಪ್ರಧಾನಿಗೆ ಪತ್ರ ಬರೆದಿದೆಯಂತೆ. ಈ ಎಲ್ಲ ಪತ್ರಗಳ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನಿಗಾವಣೆಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


